ADVERTISEMENT

ಒಳಮೀಸಲಾತಿ ಜಾರಿಗೆ ವಿಳಂಬ | ಆ.16ರಿಂದ ಅಸಹಕಾರ ಚಳವಳಿ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 15:42 IST
Last Updated 28 ಜುಲೈ 2025, 15:42 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ನವದೆಹಲಿ: ಒಳಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿರುವ ಕರ್ನಾಟಕ ಸರ್ಕಾರದ ವಿರುದ್ಧ ಆಗಸ್ಟ್ 16ರಿಂದ ಅಸಹಕಾರ ಚಳವಳಿ ನಡೆಸಲಾಗುವುದು. ಮಂತ್ರಿಗಳ ಓಡಾಟಕ್ಕೆ ಬಿಡುವುದಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಎಚ್ಚರಿಸಿದರು. 

ಸೋಮವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್‌ ತೀರ್ಪಿನ ಜಾರಿಗಾಗಿ ಆ. 1ರಂದು ಸಾಂಕೇತಿಕವಾಗಿ 30 ಜಿಲ್ಲೆಗಳಲ್ಲಿ ಹೋರಾಟ ಮಾಡಲಿದ್ದೇವೆ. 11ರಂದು ವಿಧಾನಸಭೆ ಅಧಿವೇಶನ ಪ್ರಾರಂಭ ಆಗಲಿದ್ದು, ಅಷ್ಟರಲ್ಲಿ ಜಾರಿ ಮಾಡದೇ ಇದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದರು. 

‘ಕಾಂಗ್ರೆಸ್ಸಿನವರಿಗೆ ರಾಜ್ಯದಲ್ಲಿ ಸರ್ಕಾರ ನಡೆಸಲು ಬರುತ್ತಿಲ್ಲ. ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಎಷ್ಟು ಹೆಕ್ಟೇರ್ ಬಿತ್ತನೆ ಮಾಡುತ್ತೇವೆ, ಯಾವ್ಯಾವ ಬೆಳೆ ಬಿತ್ತನೆ ಆಗಲಿದೆ, ಡಿಎಪಿ, ಯೂರಿಯಾ ಸೇರಿ ಎಷ್ಟು ಗೊಬ್ಬರ ಬೇಕಾಗಲಿದೆ- ಇವೆಲ್ಲ ಮಾಹಿತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಮಳೆಗಾಲ ಆರಂಭಕ್ಕೆ ಮುನ್ನವೇ ಪಡೆಯಬೇಕಿತ್ತು. ಯಾವುದೇ ಸಿದ್ಧತೆ ಮಾಡದ ಕಾರಣ ಗಂಭೀರ ಸಮಸ್ಯೆ ಎದುರಾಗಿದೆ’ ಎಂದರು. 

ADVERTISEMENT

‘ಈ ಸರ್ಕಾರಕ್ಕೆ ದೀನದಲಿತರ ಬಗ್ಗೆ ಕಳಕಳಿ- ಕಾಳಜಿ ಇಲ್ಲ. ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನ ಕೊಟ್ಟಿದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಆದರೆ, ಮತ ಬ್ಯಾಂಕ್‌ ರಾಜಕಾರಣಕ್ಕಾಗಿ ಪರಿಶಿಷ್ಟ ಉಪಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಹಣದ ದುರ್ಬಳಕೆ ಸರಿಯಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.