ಸತೀಶ ಜಾರಕಿಹೊಳಿ
ನವದೆಹಲಿ: ಕರ್ನಾಟಕದ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿಯಿಂದ (ಕ್ರಿಫ್) 2025–26ನೇ ಸಾಲಿನಲ್ಲಿ ₹1,724 ಕೋಟಿ ಮಂಜೂರು ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದರು.
ಕೇಂದ್ರ ಸಚಿವರನ್ನು ಬುಧವಾರ ಇಲ್ಲಿ ಭೇಟಿ ಮಾಡಿದ ಅವರು, ‘ರಾಜ್ಯ ಹೆದ್ದಾರಿಗಳು ಹಾಗೂ ಪ್ರಮುಖ ಜಿಲ್ಲಾ ರಸ್ತೆಗಳ ಅಭಿವೃದ್ಧಿಗೆ ಈ ಅನುದಾನ ಮಂಜೂರು ಮಾಡುವಂತೆ ಈ ಹಿಂದೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಈ ವರೆಗೆ ಅನುಮೋದನೆ ಸಿಕ್ಕಿಲ್ಲ. ಕೂಡಲೇ ಅನುಮೋದನೆ ನೀಡಬೇಕು‘ ಎಂದು ಕೋರಿದರು.
ಈ ಯೋಜನೆಯಡಿ 2023–24ನೇ ಸಾಲಿನಲ್ಲಿ ₹1,385 ಕೋಟಿ ವೆಚ್ಚದಲ್ಲಿ 1,157 ಕಿ.ಮೀ. ಉದ್ದದ 297 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿತ್ತು ಎಂದು ಅವರು ಸಚಿವರ ಗಮನಕ್ಕೆ ತಂದರು.
‘5,225 ಕಿ.ಮೀ. ಉದ್ದದ 39 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೆ ಏರಿಸುವಂತೆ ಪ್ರಸ್ತಾವ ಸಲ್ಲಿಸಿ ವರ್ಷಗಳೇ ಕಳೆದಿವೆ. ಈ ಪ್ರಸ್ತಾವಕ್ಕೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಅವರು 2023ರ ಆಗಸ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಸಂಚಾರ, ಸರಕು ಸಾಗಣೆ ಮತ್ತಿತರ ಅಂಶಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದರು. ಆ ಬಳಿಕ ಯಾವುದೇ ಕ್ರಮ ಆಗಿಲ್ಲ. ಈ ಬಗ್ಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದೆ‘ ಎಂದು ಜಾರಕಿಹೊಳಿ ತಿಳಿಸಿದರು.
‘ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರ ಕೋರಲಾಗಿದೆ. ಇದಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಅಗತ್ಯ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ‘ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.