
ಪರೀಕ್ಷೆ
ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಫೆ.28ರಿಂದ ಆರಂಭ ಆಗಲಿದ್ದು, ಮೊದಲ ದಿನ ಕನ್ನಡ, ಅರೆಬಿಕ್ ಭಾಷಾ ಪರೀಕ್ಷೆಗಳು ನಡೆಯಲಿವೆ.
5,174 ಕಾಲೇಜುಗಳ 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ವಿಜ್ಞಾನ ವಿಷಯದಲ್ಲಿ 2.92 ಲಕ್ಷ, ವಾಣಿಜ್ಯದಲ್ಲಿ 2.11 ಲಕ್ಷ ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.
1,217 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರವೂ ಸಿ.ಸಿ.ಟಿ.ವಿ ಕ್ಯಾಮೆರಾ ಒಳಗೊಂಡಿದೆ. ವಿವಿಧ ಹಂತದ ಅಧಿಕಾರಿಗಳು ವೆಬ್‌ಕಾಸ್ಟಿಂಗ್ ಮೂಲಕ ಪರೀಕ್ಷಾ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸಲಿದ್ದು, ಪರೀಕ್ಷಾ ಕೇಂದ್ರದ ಹೊರಗೂ ಕಟ್ಟುನಿಟ್ಟಿನ ಕಣ್ಗಾವಲಿಗೆ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್ ಫೋನ್, ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ನಿಷೇಧಿಸಲಾಗಿದೆ. ಹಿಂದಿನ ವರ್ಷದಂತೆ ಈ ಬಾರಿಯೂ ವಸ್ತ್ರಸಂಹಿತೆ ಇರುತ್ತದೆ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ದೇಶಕ ಗೋಪಾಲೃಷ್ಣ ಮಾಹಿತಿ ನೀಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಬೇಕಿರುವ ಕನಿಷ್ಠ ಅಂಕವನ್ನು ಈ ಬಾರಿ ಶೇ 33ಕ್ಕೆ ನಿಗದಿ ಮಾಡಲಾಗಿದೆ. ಹೊಸ, ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯವಾಗಲಿದೆ.
ಪ್ರಶ್ನೆ ಪತ್ರಿಕೆ ಮಾರಾಟವಾಗುತ್ತಿವೆ ಎಂದು ಕೆಲ ಮಾಧ್ಯಮಗಳಲ್ಲಿ ಸುದ್ದಿ ಹರಡಿಸುತ್ತಿದ್ದು, ವಿದ್ಯಾರ್ಥಿಗಳು ಕಿವಿಗೊಡಬಾರದು. ಅಂತಹ ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದುಪ್ರಕಾಶ್ ನಿಟ್ಟಾಲಿ, ಅಧ್ಯಕ್ಷ ಪರೀಕ್ಷಾ ಮಂಡಳಿ
2025ರ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಉಪನ್ಯಾಸಕರಿಗೆ ಸಂಭಾವನೆ ಇದುವರೆಗೂ ಜಮೆಯಾಗಿಲ್ಲ ಎಂದು ಹಲವು ಉಪನ್ಯಾಸಕರು ದೂರಿದ್ದಾರೆ.
ಕೊಠಡಿ ಮೇಲ್ವಿಚಾರಕರು, ಅಧೀಕ್ಷಕರು, ಸಹ ಅಧೀಕ್ಷಕರು, ಜಾಗೃತ ದಳ, ವಿಶೇಷ ಜಾಗೃತ ದಳ ಸೇರಿದಂತೆ ವಿವಿಧ ಹಂತದಲ್ಲಿ ಕೆಲಸ ಮಾಡಿದ ಉಪನ್ಯಾಸರಿಗೆ ಪರೀಕ್ಷಾ ಮಂಡಳಿ ಇದುವರೆಗೂ ಹಣ ಪಾವತಿಸಿಲ್ಲ. ಬಾಕಿ ಹಣ ನೀಡದಿದ್ದರೂ ಪರೀಕ್ಷಾ ಕಾರ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.