ADVERTISEMENT

ಕಾನೂನು ಸುವ್ಯವಸ್ಥೆ ಇದ್ದರೆ ರಾಜ್ಯಕ್ಕೆ ಉದ್ಯಮಗಳು ಬರುತ್ತವೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 9:30 IST
Last Updated 23 ಏಪ್ರಿಲ್ 2022, 9:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಹರಿಹರ: 2016ರಲ್ಲಿ ನೋಟ್‌ ಅಮಾನ್ಯ ಆಗುವ ಮುಂಚೆ ದೇಶದಲ್ಲಿ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು 11 ಕೋಟಿ ಉದ್ಯೋಗಗಳನ್ನು ನೀಡುತ್ತಿದ್ದವು. ಈಗ ಅದು 2.5 ಲಕ್ಷ ಉದ್ಯೋಗಗಳನ್ನಷ್ಟೇ ನೀಡುತ್ತಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ಶನಿವಾರ ಆರಂಭಗೊಂಡ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ತಮ್ತು ಬೃಹತ್‌ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೋಟು ಅಮಾನ್ಯ ಮತ್ತು ಕೊರೊನಾ ಕಾರಣದಿಂದ ಈ ಸ್ಥಿತಿ ಉಂಟಾಗಿದೆ. ಉದ್ಯೋಗ ನೀಡುವುದು ಸರ್ಕಾದ ಕರ್ತವ್ಯ. ಆದರೆ ಇಂದು ಉದ್ಯೋಗ ನಶಿಸಿ ಹೋಗುತ್ತಿದೆ ಎಂದು ಹೇಳಿದರು.

ADVERTISEMENT

ಅಧಿಕಾರ ಹಿಡಿಯಬೇಕು ಎಂಬ ಆಸೆಯಿಂದ ಸ್ವಾತಂತ್ರ್ಯ ಹೋರಾಟ ಮಾಡಿದ್ದಲ್ಲ. ಬ್ರಿಟೀಷರಿಂದ ಸ್ವಾತಂತ್ರ ಪಡೆಯಬೇಕು. ನಮ್ಮನ್ನು ನಾವೇ ಆಳಬೇಕು ಎಂದು ನಿಸ್ವಾರ್ಥದಿಂದ ಹೋರಾಟ ಮಾಡಿದರು. ಸಾವಿರಾರು ಮಂದಿ ಹುತಾತ್ಮರಾಗಿದರು. ಸಾವಿರಾರರು ಮಂದಿ ಆಸ್ತಿಪಾಸ್ತಿ ಕಳೆದುಕೊಂಡರು. ಅವರನ್ನು ನೆನಪಿಸಿಕೊಳ್ಳುವುದು, ಅವರ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವುದು, ಅಳವಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು ಎಂದರು.

ಪದವಿ ಪಡೆದವರಿಗೆ ಉದ್ಯೋಗ ಸೃಷ್ಟಿಯಾಗದೇ ಹೋದರೆ, ಸೃಷ್ಟಿ ಮಾಡದೇ ಹೋದರೆ ಅವರು ನಿರುಪಯುಕ್ತರಾಗುತ್ತಾರೆ. ದೇಶಕ್ಕೆ ಅವರಿಂದ ಕೊಡುಗೆ ಸಿಗದೇ ಹೊಗುತ್ತದೆ. ಉದ್ಯೋಗಕ್ಕೂ, ಉದ್ಯಮಕ್ಕೂ, ಕಾನೂನು ಸುವ್ಯವಸ್ಥೆಗೂ ನೇರ ಸಂಬಂಧ ಇರುತ್ತದೆ. ಕಾನೂನು ಸುವ್ಯವಸ್ಥೆ ಇದ್ದರೆ ರಾಜ್ಯಕ್ಕೆ ಉದ್ಯಮಗಳು ಬರುತ್ತವೆ. ಉದ್ಯಮಗಳು ಬಂದರೆ ಉದ್ಯೋಗ ದೊರೆಯುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ರಾಜ್ಯಕ್ಕೆ ಯಾವುದೇ ಹೂಡಿಕೆದಾರರು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

1857 ಸ್ವಾತಂತ್ರ್ಯ ಸಂಗ್ರಾಮವೇ ಮೊದಲನೇಯದ್ದಲ್ಲ. ಅದಕ್ಕಿಂತ ಮೊದಲೇ ಅನೇಕರು ಹೋರಾಟ ಮಾಡಿ ಹುತಾತ್ಮರಾಗಿದ್ದಾರೆ. ಅವರನ್ನು ಕೂಡ ನೆನಪಿನಲ್ಲಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಅದಕ್ಕಾಗಿ 16ನೇ ಶತಮಾನದಿಮದ 1947ರವರೆಗೆ ಹೋರಾಟ ಮಾಡಿದ ಪಂಚಮ ಸಾಲಿ ಸಮುದಾಯದ ಹೋರಾಟಗಾರರನ್ನು ನೆನಪಿಸಿಕೊಳ್ಳುವ ಕೆಲಸವನ್ನು ಸ್ವಾಮೀಜಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.