ADVERTISEMENT

ಸಾಮಾಜಿಕ ಬಹಿಷ್ಕಾರಕ್ಕೆ 3 ವರ್ಷ ಜೈಲು, ₹1 ಲಕ್ಷ ದಂಡ: ಮಸೂದೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 14:28 IST
Last Updated 18 ಡಿಸೆಂಬರ್ 2025, 14:28 IST
   

ಸುವರ್ಣ ವಿಧಾನಸೌಧ (ಬೆಳಗಾವಿ): ಯಾವುದೇ ವ್ಯಕ್ತಿ, ಕುಟುಂಬ, ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ ₹1 ಲಕ್ಷದವರೆಗೆ ದಂಡ, ಮೂರು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲು ಹಾಗೂ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಅವಕಾಶವಿರುವ ಮಸೂದೆಗೆ ವಿಧಾನಸಭೆ ಗುರುವಾರ ಪಕ್ಷಾತೀತವಾಗಿ ಅನುಮೋದನೆ ನೀಡಿತು.

‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಮಸೂದೆಯನ್ನು ಮಂಡಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ‘ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸಾಮಾಜಿಕವಾಗಿ ಬಹಿಷ್ಕಾರ ಹಾಕುವುದು ನಡೆದಿದೆ. ಇದು ಮಾನವ ಹಕ್ಕುಗಳ, ನಾಗರಿಕ ಹಕ್ಕುಗಳು ಉಲ್ಲಂಘನೆ. ಇದನ್ನು ನಿಷೇಧಿಸುವ ಐತಿಹಾಸಿಕ ಮಸೂದೆಯನ್ನು ರೂಪಿಸಲಾಗಿದೆ’ ಎಂದರು.

ವಿರೋಧ ಪಕ್ಷ ನಾಯಕ ಆರ್. ಅಶೋಕ, ‘21ನೇ ಶತಮಾನದಲ್ಲಿ ನಾವೆಲ್ಲರೂ ಒಂದೇ ಎಂದು ಭಾಷಣ ಮಾಡಿದರೂ ನಿರ್ಬಂಧ, ತಾರತಮ್ಯ ಮುಂದುವರಿಸಿದೆ. ಸವಿತಾ ಸಮುದಾಯದವರನ್ನು ವೃತ್ತಿ ಆಧಾರಿತವಾಗಿ ಟೀಕಿಸುವ ಪ್ರವೃತ್ತಿ ಮುಂದುವರಿದಿದೆ. ಹೋಟೆಲ್, ಕ್ಷೌರ ಸೇರಿದಂತೆ ಇತರೆ ಸೇವೆಗೆ ನಿರ್ಬಂಧಿಸುವುದು, ಬಹಿಷ್ಕಾರ ಹಾಕುವುದು. ಅಕ್ಷಮ್ಯ. ಮುಂದೆ ಕಾಯ್ದೆ ಜಾರಿಯಾದಾಗ ಹಳ್ಳಿಗಳಲ್ಲಿ ದೊಡ್ಡ ಫಲಕಗಳನ್ನು ಅಳವಡಿಸಿ ನಿಷೇಧ, ದಂಡ, ಶಿಕ್ಷೆ ಬಗ್ಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಬಿಜೆಪಿಯ ಎಸ್.ಸುರೇಶ್ ಕುಮಾರ್, ‘ಸಾಮಾಜಿಕ ಬಹಿಷ್ಕಾರ ನಿಷೇಧಿಸಿ ಕಾನೂನು ಜಾರಿಗೊಳಿಸುವ ಜೊತೆಗೆ ಜನರಲ್ಲಿನ ಮಾನಸಿಕತೆ ತೊಡೆದುಹಾಕುವ ಮನೋಭಾವ ಮೂಡಿಸಬೇಕಿದೆ. ಕೆಲವು ವಿದ್ಯಾರ್ಥಿಗಳನ್ನಷ್ಟೇ ಪ್ರವಾಸಕ್ಕೆ ಕಳುಹಿಸುವುದು ಸೇರಿದಂತೆ ನಾನಾ ರೀತಿಯ ಅಸ್ಪೃಶ್ಯತೆ ರೀತಿಯ ಚಟುವಟಿಕೆ ಇತ್ತೀಚನ ವರ್ಷಗಳಲ್ಲಿ ಶಾಲೆಗಳಲ್ಲಿ ನಡೆಯುತ್ತಿದೆ. ಅದನ್ನೂ ನಿಯಂತ್ರಿಸಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿಯ ಆರಗ ಜ್ಞಾನೇಂದ್ರ, ‘ಕೇವಲ ಪರಿಶಿಷ್ಟ ಜಾತಿ, ಪಂಗಡದವರು ಮಾತ್ರವಲ್ಲದೆ ಇತರೆ ಸಮುದಾಯದವರನ್ನೂ ಬಹಿಷ್ಕಾರ ಹೇರುವುದು ನಡೆದಿದೆ’ ಎಂದರು.

ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ, ‘ಸಾಮಾಜಿಕ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಲು ಅವಕಾಶ ಕಲ್ಪಿಸಿ ಮಸೂದೆಗೆ ತಿದ್ದುಪಡಿ ತರಬೇಕು’ ಎಂದು ಸಲಹೆ ನೀಡಿದರು. ಆ ತಿದ್ದುಪಡಿ ಅಳವಡಿಸಿಕೊಳ್ಳುವುದಾಗಿ ಮಹದೇವಪ್ಪ ಭರವಸೆ ನೀಡಿದರು.

ಜೆಡಿಎಸ್‌ನ ನೇಮಿರಾಜ ನಾಯ್ಕ್ ಮತ್ತು ಬಿಜೆಪಿಯ ಸಿಮೆಂಟ್‌ ಮಂಜು, ‘ಕಾಯ್ದೆಯು ದುರುಪಯೋಗ ಆಗದಂತೆ ತಡೆಯಲು ಎಚ್ಚರ ವಹಿಸಬೇಕು. ಕಾನೂನಿನ ಜತೆಗೆ ಸಾರ್ವಜನಿಕರಲ್ಲೂ ಮನೋಭಾವ ಬದಲಾಗಬೇಕು, ಸಾಮಾಜಿಕ ಸ್ವಾಸ್ತ್ಯ ಕಾಪಾಡಲು ಸಾಮಾಜಿಕ ಬಹಿಷ್ಕಾರ ನಿಷೇಧ, ಶಿಕ್ಷೆ, ದಂಡದ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳನ್ನು ಎಲ್ಲೆಡೆ ಅಳವಡಿಸಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.