ADVERTISEMENT

ವರ್ಣಾಶ್ರಮದ ಮನಸ್ಥಿತಿಗಳು ನಮ್ಮ ಸಮಾಜವನ್ನು ಕಾಡುತ್ತಲೇ ಇವೆ: ಸಚಿವ ಪ್ರಿಯಾಂಕ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 12:47 IST
Last Updated 13 ಡಿಸೆಂಬರ್ 2025, 12:47 IST
<div class="paragraphs"><p>ಸಚಿವ ಪ್ರಿಯಾಂಕ್</p></div>

ಸಚಿವ ಪ್ರಿಯಾಂಕ್

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಮಂಡನೆಯಾಗಿರುವ "ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ- 2025"ಅನ್ನು ಆರ್‌ಡಿಪಿಆರ್‌ ಸಚಿವ ಪ್ರಿಯಾಂಕ್ ಖರ್ಗೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ADVERTISEMENT

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಅವರು, ಅಸಮಾನತೆ, ತಾರತಮ್ಯಗಳು ಭಾರತೀಯ ಸಮಾಜದೊಳಗೆ ಅದೆಷ್ಟು ಆಳವಾಗಿ ಬೇರೂರಿದೆ ಎಂದರೆ ಈ ದೇಶ ಶ್ರೇಷ್ಠ ಸಂವಿಧಾನದ ಅಡಿಯಲ್ಲಿ ನಡೆಯುತ್ತಿದ್ದಾಗ್ಯೂ ವರ್ಣಾಶ್ರಮದ ಮನಸ್ಥಿತಿಗಳು ನಮ್ಮ ಸಮಾಜವನ್ನು ಕಾಡುತ್ತಲೇ ಇವೆ. ಶತಶತಮಾನಗಳಿಂದ ಬುದ್ಧ, ಬಸವಣ್ಣ, ನಾರಾಯಣ ಗುರು, ಕನಕದಾಸರು, ಬಾಬಾ ಸಾಹೇಬ್ ಅಂಬೇಡ್ಕರ್ ರಂತಹ ಅನೇಕ ಸಮಾಜ ಸುಧಾರಕರು ಸಮಸಮಾಜದ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ನಮ್ಮ ಸರ್ಕಾರವೂ ಅವರೆಲ್ಲರ ಆಶಯಗಳನ್ನು ಎತ್ತಿ ಹಿಡಿಯುವ ಶೋಷಣೆ, ತಾರತಮ್ಯವನ್ನು ತೊಡೆದುಹಾಕಲು ಕಟಿಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದಿದ್ದಾರೆ.

ಶೋಷಿತರನ್ನು, ತುಳಿತಕ್ಕೊಳಗಾದವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲೆತ್ತುವ ಹಲವಾರು ಪ್ರಯತ್ನಗಳು ನಡೆಯುತ್ತಿದ್ದರೂ, ತಲೆಮಾರುಗಳಿಂದ ಅಸ್ತಿತ್ವದಲ್ಲಿರುವ ಸಾಮಾಜಿಕ ಅಸಮಾನತೆ, ತಾರತಮ್ಯ, ಅಸ್ಪೃಶ್ಯತೆಯಂತಹ ಕ್ರೌರ್ಯಗಳನ್ನು ಇಂದಿಗೂ ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಬಲಿತ ವರ್ಗದ ಪ್ರಾಬಲ್ಯ ಮತ್ತು ಶ್ರೇಷ್ಠತೆಯ ಮನಸ್ಥಿತಿ ಕಾರಣ ಎಂದು ಪ್ರತಿಪಾದಿಸಿದ್ದಾರೆ.

ಸಮುದಾಯದಲ್ಲಿ, ಗ್ರಾಮಗಳಲ್ಲಿ ಕುಟುಂಬ ಅಥವಾ ವ್ಯಕ್ತಿಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕುವ ಮತ್ತೊಂದು ಹೇಯ ಪದ್ಧತಿ ಕೂಡ ನಮ್ಮ ನಡುವೆ ಜೀವಂತವಾಗಿದೆ. ಇದು ನಿಜಕ್ಕೂ ದುರದೃಷ್ಟಕರ. ಶೋಷಣೆ, ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಠವನ್ನು ತೊಡೆದುಹಾಕುವಲ್ಲಿ ಮಾನವೀಯ ಪ್ರಜ್ಞೆಗಳನ್ನು ಮೂಡಿಸುವುದರೊಂದಿಗೆ ಕಠಿಣ ಕಾನೂನುಗಳನ್ನೂ ರೂಪಿಸುವುದು ಸಹ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಬದಲಾಗುತ್ತಿರುವ ಜೀವನಶೈಲಿ, ಶಿಕ್ಷಣ, ಆರ್ಥಿಕ ಸುಧಾರಣೆ ಮುಂತಾದವುಗಳಿಂದ ಸಾಮಾಜಿಕ ಬದಲಾವಣೆಯಾದರೂ, ಸಾಮಾಜಿಕ ಬಹಿಷ್ಕಾರದಂತಹ ಅಮಾನುಷತೆಯನ್ನು ಸಂಪೂರ್ಣವಾಗಿ ನಿವಾರಿಸುವುದು ಸಾಧ್ಯವಾಗಿಲ್ಲ. ತಳಸಮುದಾಯ, ಶೋಷಿತರು, ದೀನ ದಲಿತರು ಈ ಕ್ರೌರ್ಯಕ್ಕೆ ಪದೇ ಪದೇ ಬಲಿಯಾಗುತ್ತಿದ್ದಾರೆ. ಶಾಲೆ, ಆಸ್ಪತ್ರೆಗಳು, ಪೂಜಾ ಸ್ಥಳಗಳು ಮುಂತಾದೆಡೆ ಜಾತಿ, ಮದುವೆ, ಧಾರ್ಮಿಕ ನಂಬಿಕೆ, ಲಿಂಗತ್ವ ಇತ್ಯಾದಿ ಕಾರಣಗಳಿಗಾಗಿ ಸಾಮಾಜಿಕ ಬಹಿಷ್ಕಾರ ಹಾಕುವ ನಿಷ್ಕರುಣೆಯ ಮತ್ತು ಅಮಾನವೀಯ ಮನೋಭಾವವನ್ನು ಹತ್ತಿಕ್ಕಲು ಕಾನೂನನ್ನು ಬಲಪಡಿಸುವ ಅನಿವಾರ್ಯತೆ ಇತ್ತು. ಶೋಷಿತ ಸಮುದಾಯವನ್ನು ಸಾಮಾಜಿಕ ಬಂಧನದಿಂದ ಮುಕ್ತಗೊಳಿಸುವ, ಅವರ ಬದುಕಿಗೆ ಆಸರೆಯಾಗುವಲ್ಲಿ ಸದಾ ಶ್ರಮಿಸುತ್ತಿರುವ ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ಇರಿಸಿದೆ ಎಂದು ತಿಳಿಸಿದ್ದಾರೆ.

ಕುಟುಂಬ, ವ್ಯಕ್ತಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ಶೀಘ್ರವೇ ಇದು ಕಾನೂನು ರೂಪ ಪಡೆಯಲಿದೆ. "ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ- 2025" ನಮ್ಮ ಗ್ಯಾರಂಟಿ ಸರ್ಕಾರದ ಐತಿಹಾಸಿಕ ನಡೆಯಾಗಿದ್ದು, ಸಾಮಾಜಿಕ ಪರಿವರ್ತನೆಗೆ ಕಾರಣವಾಗಲಿದೆ ಎನ್ನುವುದು ನಮ್ಮ ಆಶಯವಾಗಿದೆ ಎಂದು ಸಾಮಾಜಿಕ ಬಹಿಷ್ಕಾರ ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ.