ಬೆಂಗಳೂರು: ಎಸ್‌ಎಲ್‌ಎಲ್‌ಸಿಗೆ ಮೂರು ವಾರ್ಷಿಕ ಪರೀಕ್ಷೆ ಬರೆಯಲು ಅವಕಾಶ ಇದ್ದರೂ, ಪ್ರೌಢಶಾಲೆಗಳಲ್ಲಿ ಕೌಶಲ ವಿಷಯ ಆಯ್ಕೆಮಾಡಿಕೊಂಡ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಒಂದು ವರ್ಷ ಮನೆಯಲ್ಲೇ ಕುಳಿತುಕೊಳ್ಳಬೇಕು.
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರೇರೇಪಿಸಲು, ಉದ್ಯೋಗಕ್ಕೆ ಅಗತ್ಯ ಕೌಶಲ, ಸಾಮರ್ಥ್ಯವನ್ನು ವೃದ್ಧಿಸಲು, ಸಾಮಾನ್ಯ ಶಿಕ್ಷಣದಲ್ಲಿ ವೃತ್ತಿ ಶಿಕ್ಷಣದ ವಿಷಯಗಳನ್ನು ವಿದ್ಯಾರ್ಥಿಗಳ ಆಸಕ್ತಿ ಆಧರಿಸಿ ಕಲಿಸಲು ರಾಷ್ಟ್ರೀಯ ವೃತ್ತಿಶಿಕ್ಷಣ ಚೌಕಟ್ಟಿನಡಿ (ಎನ್‌ಎಸ್‌ಕ್ಯೂಎಫ್) ಕೌಶಲ ವಿಷಯಗಳನ್ನು ಪ್ರೌಢಶಿಕ್ಷಣದಲ್ಲೇ ಪರಿಚಯಿಸಲಾಗಿದೆ.
ಸಮಗ್ರ ಶಿಕ್ಷಣ ಕರ್ನಾಟಕದ ಮೂಲಕ ರಾಜ್ಯದಲ್ಲೂ 2023–24ನೇ ಸಾಲಿನಿಂದ ವೃತ್ತಿ ಕೌಶಲ ವಿಷಯಗಳನ್ನು ಪರಿಚಯಿಸಲಾಗಿದೆ. 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ತೃತೀಯ ಭಾಷೆ ಬದಲಿಗೆ ಮಾಹಿತಿ ತಂತ್ರಜ್ಞಾನ, ರೀಟೇಲ್, ಬ್ಯೂಟಿ, ವೆಲ್‌ನೆಸ್, ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್‌ವೇರ್, ಹೋಂ ಫರ್ನಿಷಿಂಗ್ ಕೋರ್ಸ್‌ಗಳಲ್ಲಿ ಒಂದನ್ನು ತೆಗೆದುಕೊಳ್ಳಬಹುದಾಗಿದೆ.
ಜಂಟಿ ಪ್ರಮಾಣಪತ್ರ ಪತ್ರ:
ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ನಡೆಸುವ 100 ಅಂಕದ ಪರೀಕ್ಷೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಾತ್ವಿಕ (ಥಿಯರಿ) ಹಾಗೂ ಆಂತರಿಕ ಮೌಲ್ಯಮಾಪನ ಒಳಗೊಂಡ 50 ಅಂಕಗಳ ಪರೀಕ್ಷೆಯನ್ನು ಹಾಗೂ ವಲಯ ಕೌಶಲಾಭಿವೃದ್ಧಿ ಮಂಡಳಿ 50 ಅಂಕಗಳ ಪ್ರಾಯೋಗಿಕ ಪರೀಕ್ಷೆ ನಡೆಸಲಿದೆ. ಎರಡೂ ಪರೀಕ್ಷೆಗಳಲ್ಲಿ ತೇರ್ಗಡೆಯಾದವರಿಗೆ ಎರಡೂ ಮಂಡಳಿಗಳು ಜಂಟಿ ಪ್ರಮಾಣಪತ್ರ ನೀಡುತ್ತವೆ.
ಮುಖ್ಯಶಿಕ್ಷಕರೇ ಹೊಣೆ:
ಉನ್ನತ ವ್ಯಾಸಂಗಕ್ಕೆ ವೃತ್ತಿ ಕೌಶಲ ಕೋರ್ಸ್ ತೇರ್ಗಡೆಯಾದ ಜಂಟಿ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ವಿದ್ಯಾರ್ಥಿ ತಾತ್ವಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅದೇ ವರ್ಷ ಪರೀಕ್ಷೆ–2 ಪರೀಕ್ಷೆ–3 ಬರೆಯಲು ಅವಕಾಶ ಇರುತ್ತದೆ. ಆದರೆ, ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅಂತಹ ಅವಕಾಶ ಇಲ್ಲ. ಒಂದು ವರ್ಷ ಕಾಯುವುದು ಅನಿವಾರ್ಯ. ಇದು ಜಂಟಿ ಪ್ರಮಾಣಪತ್ರ ವಿತರಣೆಗೂ ತೊಡಕಾಗುತ್ತದೆ. ಹಾಗಾಗಿ, ಯಾವ ವಿದ್ಯಾರ್ಥಿಯೂ ಆಯಾ ಶೈಕ್ಷಣಿಕ ವರ್ಷದಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಗೈರು ಹಾಜರಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಮುಖ್ಯ ಶಿಕ್ಷಕರು ನಿಭಾಯಿಸಬೇಕಿದೆ. ತಪ್ಪಿದರೆ ಅವರನ್ನೇ ಹೊಣೆ ಮಾಡಲಾಗುವುದು ಎಂದು ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದೆ.
ಒಂದೇ ವಿಷಯ ಪ್ರತ್ಯೇಕ
ವೃತ್ತಿ ಕೌಶಲದ ವಿಷಯಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇತರೆ ವಿದ್ಯಾರ್ಥಿಗಳಂತೆ ಪ್ರಥಮ, ದ್ವಿತೀಯ ಭಾಷೆ, ಗಣಿತ, ಸಮಾಜ ವಿಜ್ಞಾನ ಹಾಗೂ ವಿಜ್ಞಾನದ ಐದು ವಿಷಯಗಳನ್ನು ಬರೆಯಲಿದ್ದಾರೆ.
ತೃತೀಯ ಭಾಷೆ ಬದಲಿಗೆ ಆಯ್ಕೆ ಮಾಡಿಕೊಂಡ ವೃತ್ತಿ ಕೌಶಲ ವಿಷಯದ ಪರೀಕ್ಷೆಯನ್ನು 100 ಅಂಕಗಳಿಗೆ ಬರೆಯಬೇಕಿದೆ. ಈ ಪರೀಕ್ಷೆಯು ತಾತ್ವಿಕ (ಥಿಯರಿ)–30, ಆಂತರಿಕ ಮೌಲ್ಯಮಾಪಕ–20 ಹಾಗೂ 50 ಅಂಕಗಳ ಪ್ರಾಯೋಗಿಕ ಪರೀಕ್ಷೆ ಒಳಗೊಂಡಿರುತ್ತದೆ. ತಾತ್ವಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅಥವಾ ಕಡಿಮೆ ಅಂಕಗಳು ಬಂದರೆ ಉಳಿದ ಎರಡು ಪರೀಕ್ಷೆ ಬರೆಯಬಹುದು. ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಪೂರಕ ಪರೀಕ್ಷೆಗೆ ಅವಕಾಶ ಇಲ್ಲ. ಅವರು ಮುಂದಿನ ಶೈಕ್ಷಣಿಕ ವರ್ಷದ ಕೊನೆಯಲ್ಲಿ ನಡೆಯುವ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿ, ಫಲಿತಾಂಶ ಪಡೆಯಬೇಕು.
ಪ್ರಾಯೋಗಿಕ ಪರೀಕ್ಷೆಯನ್ನು ವಲಯ ಕೌಶಲಾಭಿವೃದ್ಧಿ ಮಂಡಳಿ ನಡೆಸುತ್ತದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಪ್ರತಿ ಮಾರ್ಚ್‌ನಲ್ಲಿ ನಡೆಯುವ ಮುಖ್ಯ ಪರೀಕ್ಷೆಗೆ ಪುನರಾವರ್ತಿತ ಅಭ್ಯರ್ಥಿಯಾಗಿ ಹಾಜರಾಗಬಹುದುಎಚ್.ಎನ್. ಗೋಪಾಲಕೃಷ್ಣ, ನಿರ್ದೇಶಕರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಪರೀಕ್ಷಾ ಮಂಡಳಿ
ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ, ಹಾಜರಾಗಲು ಸಾಧ್ಯವಾದ ವಿದ್ಯಾರ್ಥಿಗಳಿಗೆ ಅದೇ ವರ್ಷ ಮತ್ತೊಂದು ಅವಕಾಶ ನೀಡಬೇಕು.ವಲಯ ಕೌಶಲಾಭಿವೃದ್ಧಿ ಮಂಡಳಿಗೆ ಸೂಚನೆ ನೀಡಬೇಕುಬಿ. ಸಿದ್ದಬಸಪ್ಪ, ಅಧ್ಯಕ್ಷ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.