ADVERTISEMENT

ಕೋವಿಡ್: ಗುಣಮುಖರಿಗಿಂತ ಸೋಂಕಿತರ ಸಂಖ್ಯೆ ದುಪ್ಪಟ್ಟು

ಬೆಂಗಳೂರಿನಲ್ಲಿ ಐವರ ಸಾವು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 19:06 IST
Last Updated 15 ಮಾರ್ಚ್ 2021, 19:06 IST
ಕೊರೊನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ನಿಂದ ಗುಣಮುಖರಾದವರಿಗಿಂತ ಸೋಂಕಿತರ ಸಂಖ್ಯೆ ಹೆಚ್ಚಿರುವ ಪರಿಸ್ಥಿತಿ ಮತ್ತೆ ಮುಂದುವರಿದಿದೆ. ತಿಂಗಳ ಹಿಂದೆ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿರುತ್ತಿತ್ತು.

ರಾಜ್ಯದಲ್ಲಿ ಸೋಮವಾರ 429 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದರೆ, ಇದರ ದುಪ್ಪಟ್ಟು ಅಂದರೆ 932 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಸೋಂಕು ಪ್ರಕರಣ ಏರಿಕೆಯ ಜೊತೆಗೆ ಮರಣ ಪ್ರಮಾಣವೂ ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ 7 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ಸಕ್ರಿಯ ಪ್ರಕರಣಗಳ ಪೈಕಿ8,860 ಮಂದಿ ಚಿಕಿತ್ಸೆಯಲ್ಲಿದ್ದಾರೆ. 125 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಈವರೆಗೆ ಒಟ್ಟಾರೆ 9.61 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 9.39 ಲಕ್ಷ ಮಂದಿ ಗುಣಮುಖರಾಗಿದ್ದಾರೆ.

ಬೆಂಗಳೂರಿನಲ್ಲಿ ಮಾ.15ರಂದು 550 ಸೋಂಕು ಪ್ರಕರಣಗಳು ವರದಿಯಾಗಿದ್ದು ಐವರು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ 65, ಮೈಸೂರು 46 (1 ಸಾವು), ಕಲಬುರಗಿ 43, ತುಮಕೂರು 40, ಬೀದರ್ 33 (1 ಸಾವು), ಉಡುಪಿ 24, ಬಳ್ಳಾರಿ 18, ಹಾಸನ 16, ಮಂಡ್ಯ 13, ಚಿಕ್ಕಬಳ್ಳಾಪುರ 12, ಧಾರವಾಡ 11 ಸೋಂಕು ಪ್ರಕರಣಗಳು ವರದಿಯಾಗಿವೆ.

1.25 ಲಕ್ಷ ಮಂದಿಗೆ ಲಸಿಕೆ:

ರಾಜ್ಯದಲ್ಲಿ ಸೋಮವಾರ 3,188 ಕೇಂದ್ರಗಳ ಮೂಲಕ 1.25 ಲಕ್ಷ ಮಂದಿಗೆ ಕೋವಿಡ್ ಲಸಿಕೆ ವಿತರಿಸಲಾಗಿದೆ. 92,036 ಮಂದಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಬೇರೆ ಆರೋಗ್ಯ ಸಮಸ್ಯೆ ಹೊಂದಿರುವ 45-60 ವರ್ಷ ವಯೋಮಾನದ 20,746 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

ಆರೋಗ್ಯ ಕಾರ್ಯಕರ್ತರಲ್ಲಿ 3,221 ಮಂದಿ ಮೊದಲ ಡೋಸ್ ಹಾಗೂ 3,513 ಮಂದಿ 2ನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಮುಂಚೂಣಿ ಕಾರ್ಯಕರ್ತರಲ್ಲಿ 1,894 ಮಂದಿ ಮೊದಲ ಡೋಸ್ ಹಾಗೂ 4,433 ಮಂದಿ 2ನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರೊಂದಿಗೆ ಈವರೆಗೂ ಲಸಿಕೆ ಪಡೆದವರ ಸಂಖ್ಯೆ 14.96 ಲಕ್ಷ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.