ADVERTISEMENT

ಮದ್ಯ ಮಾರಾಟ ಅವಲಂಬಿಸಿದ ರಾಜ್ಯದ ಆರ್ಥಿಕತೆ: ಅರವಿಂದ ಬೆಲ್ಲದ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 16:11 IST
Last Updated 18 ಮಾರ್ಚ್ 2025, 16:11 IST
<div class="paragraphs"><p>ಅರವಿಂದ ಬೆಲ್ಲದ</p></div>

ಅರವಿಂದ ಬೆಲ್ಲದ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ರಾಜ್ಯ ಸರ್ಕಾರದ ಆರ್ಥಿಕತೆ ಮದ್ಯ ಮಾರಾಟವನ್ನೇ ಅವಲಂಬಿಸಿದೆ. ₹ 40,000 ಕೋಟಿ ಅಬಕಾರಿ ತೆರಿಗೆ ಸಂಗ್ರಹಿಸಲು ಜನರಿಗೆ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಮದ್ಯ ಕುಡಿಸುವುದು ಸರಿಯಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಹೇಳಿದರು.

ADVERTISEMENT

ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದ ಅವರು, ‘ಅಬಕಾರಿ ತೆರಿಗೆಯಲ್ಲಿ 18 ಹಂತಗಳಿವೆ. ಈ ಪೈಕಿ ಬಡವರು ಕುಡಿಯುವ ಕಡಿಮೆ ದರದ ಮದ್ಯವೇ ಹೆಚ್ಚು ಮಾರಾಟ ಆಗುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಲ್ಲಿರುವ ಬಡವರಿಗೆ ಹೆಚ್ಚು ಮದ್ಯ ಕುಡಿಸಿ ತೆರಿಗೆ ವರಮಾನ ಹೆಚ್ಚಿಸಿಕೊಳ್ಳುವುದು ಬೇಕೆ’ ಎಂದು ಕೇಳಿದರು.

‘ಮದ್ಯ ಮಾರಾಟ ಹೆಚ್ಚಿದಂತೆಲ್ಲ ಮಹಿಳೆಯರು ಮತ್ತು ಮಕ್ಕಳು ಸಮಸ್ಯೆಗೆ ಸಿಲುಕುತ್ತಾರೆ. ಅವರ ಹೊಟ್ಟೆಯ ಮೇಲೆ ಹೊಡೆದು ಗ್ಯಾರಂಟಿ ಯೋಜನೆಗಳನ್ನು ನೀಡಿದರೆ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.

‘ಸಾಲ ಮಾಡಿ ತುಪ್ಪ ತಿನ್ನಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಬಜೆಟ್‌ ಭಾಷಣದಲ್ಲಿ ಹೇಳಿದ್ದರು. ಆದರೆ, ಈ ಬಾರಿ ₹ 1.16 ಲಕ್ಷ ಕೋಟಿ ಸಾಲ ಮಾಡುವ ಪ್ರಸ್ತಾವವನ್ನು ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ. ಇಷ್ಟೊಂದು ಸಾಲ ಮಾಡಿ ಯಾರಿಗೆ ಬಿರಿಯಾನಿ ತಿನ್ನಿಸಲು ಹೊರಟಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಲೋಕೋಪಯೋಗಿ, ಗೃಹ, ನಗರಾಭಿವೃದ್ಧಿ, ಕೃಷಿ, ತೋಟಗಾರಿಕೆ ಸೇರಿದಂತೆ ಬಹುತೇಕ ಕ್ಷೇತ್ರಗಳಿಗೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಮೊತ್ತವನ್ನು ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಒದಗಿಸಲಾಗಿದೆ. ಇದರಿಂದ ಅಭಿವೃದ್ಧಿ ಕುಂಠಿತವಾಗಲಿದೆ ಎಂದರು.

‘ಎರಡು ಬಾಟಲಿ ಮದ್ಯ ಉಚಿತ ಕೊಡಿ’
‘ಗ್ಯಾರಂಟಿ ಯೋಜನೆಗಳ ಮಾದರಿಯಲ್ಲೇ ಪುರುಷರಿಗೆ ಉಚಿತವಾಗಿ ವಾರಕ್ಕೆ ಎರಡು ಬಾಟಲಿ ಮದ್ಯ ವಿತರಿಸುವ ಹೊಸ ಯೋಜನೆ ಜಾರಿಗೊಳಿಸಿ. ಸಹಕಾರ ಸಂಘಗಳ ಮೂಲಕ ಉಚಿತ ಮದ್ಯ ವಿತರಣೆಗೆ ವ್ಯವಸ್ಥೆ ಮಾಡಿ’ ಎಂದು ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ ಸಲಹೆ ನೀಡಿದರು. ‘ದುಡಿಯುವ ಜನರು ಮದ್ಯ ಸೇವಿಸುತ್ತಾರೆ. ಅದನ್ನು ತಪ್ಪಿಸಲು ಆಗುವುದಿಲ್ಲ. ಪುರುಷರಿಗೆ ಉಚಿತವಾಗಿ ಮದ್ಯ ವಿತರಿಸುವ ಯೋಜನೆ ಜಾರಿಗೊಳಿಸಿ’ ಎಂದರು.

‘ಜೆಜೆಎಂ ಹೆಸರಿನಲ್ಲಿ ಲೂಟಿ ’

‘ಜಲ ಜೀವನ್‌ ಮಿಷನ್‌ (ಜೆಜೆಎಂ) ಹೆಸರಿನಲ್ಲಿ ಬೊಕ್ಕಸದ ಹಣ ಲೂಟಿಯಾಗುತ್ತಿದೆ. ನನ್ನ ಕ್ಷೇತ್ರದಲ್ಲಿ ₹ 161 ಕೋಟಿ ವೆಚ್ಚ ಮಾಡಿ ಕೊಳವೆ ಮಾರ್ಗ ಅಳವಡಿಸಿದ್ದಾರೆ. ಆದರೆ, ಬಾವಿಗಳನ್ನೂ ತೋಡಿಲ್ಲ, ಜಲ ಮೂಲಗಳನ್ನೂ ಗುರುತಿಸಿಲ್ಲ’ ಎಂದು ಕಾಂಗ್ರೆಸ್‌ನ ಬಿ.ಆರ್‌. ಪಾಟೀಲ ಆರೋಪಿಸಿದರು.

‘ಜೆಜೆಎಂ ಎಲ್ಲಿಯೂ ಯಶಸ್ವಿಯಾಗಿಲ್ಲ. ನೀರಿನ ಲಭ್ಯತೆಯನ್ನೇ ಗುರುತಿಸದೇ ಕೊಳವೆ ಮಾರ್ಗ ಅಳವಡಿಸಿ ರಸ್ತೆಗಳನ್ನು ಅಗೆದು ಹಾಕಲಾಗಿದೆ. ನನ್ನ ಕ್ಷೇತ್ರದ 33 ಗ್ರಾಮಗಳಲ್ಲಿ ಇದರಿಂದ ಸಮಸ್ಯೆಯಾಗಿದೆ’ ಎಂದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೈಗಾರಿಕೆಗಳ ಸ್ಥಾಪನೆಯ ಹೆಸರಿನಲ್ಲಿ ಫಲವತ್ತಾದ ಕೃಷಿ ಜಮೀನುಗಳನ್ನು ರೈತರಿಂದ ಕಿತ್ತು ಉದ್ಯಮಿಗಳಿಗೆ ನೀಡುತ್ತಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಜಮೀನು ಪಡೆದವರು ಉದ್ದಿಮೆಗಳನ್ನೇ ಆರಂಭಿಸುತ್ತಿಲ್ಲ ಎಂದು ದೂರಿದರು.

‘ಧರ್ಮಾಧಾರಿತ ಶಾಲೆ ಆರಂಭ ಬೇಡ’

‘ಧರ್ಮದ ಆಧಾರದಲ್ಲಿ ಪ್ರತ್ಯೇಕ ಶಾಲೆಗಳು, ವಸತಿ ಶಾಲೆಗಳನ್ನು ಸರ್ಕಾರವೇ ತೆರೆಯುವುದು ಸರಿಯಲ್ಲ. ಈ ರೀತಿಯ ಯೋಜನೆಗಳನ್ನು ಕೈಬಿಡಬೇಕು’ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಆಗ್ರಹಿಸಿದರು.

‘ಅಲ್ಪಸಂಖ್ಯಾತರಿಗಾಗಿ ಮೌಲಾನಾ ಆಜಾದ್‌ ವಸತಿ ಶಾಲೆಗಳನ್ನು ಆರಂಭಿಸಲಾಗುವುದು’ ಎಂಬ ಬಜೆಟ್‌ ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ‘ಎಲ್ಲ ಜಾತಿ, ಧರ್ಮದ ಮಕ್ಕಳು ಶಾಲೆಯಲ್ಲಿ ಒಟ್ಟಾಗಿ ಕಲಿಯಬೇಕು. ಒಟ್ಟಾಗಿ ಆಡಬೇಕು. ಕೈ–ಕೈ ಹಿಡಿದು ನಲಿಯಬೇಕು. ಒಕ್ಕಲಿಗರಿಗೆ, ಮುಸ್ಲಿಮರಿಗೆ, ಪರಿಶಿಷ್ಟರಿಗೆ ಪ್ರತ್ಯೇಕ ಶಾಲೆಗಳನ್ನು ತೆರೆಯುತ್ತಾ ಹೋದರೆ ನಮ್ಮ ಸಮಾಜ ಎಲ್ಲಿಗೆ ತಲುಪುತ್ತದೆ’ ಎಂದು ಕೇಳಿದರು. ಎಲೆ ಚುಕ್ಕಿ ರೋಗದ ಬಾಧೆಯಿಂದ ಅಡಿಕೆ ಬೆಳೆಗಾರರ ಜೀವನವೇ ಮುಗಿದುಹೋಗುವ ಪರಿಸ್ಥಿತಿ ಎದುರಾಗಿದೆ. ಬಜೆಟ್‌ನಲ್ಲಿ ₹ 62 ಕೋಟಿ ಒದಗಿಸಿದ್ದರೂ ಸ್ಪಷ್ಟತೆ ಇಲ್ಲ. ಸಮಸ್ಯೆ ಪರಿಹಾರಕ್ಕೆ ₹ 100 ಕೋಟಿ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.