ADVERTISEMENT

ಒಂದು ದೇಶ– ಒಂದು ಪೊಲೀಸ್‌ ಸಮವಸ್ತ್ರಕ್ಕೆ ರಾಜ್ಯ ಗೃಹ ಇಲಾಖೆ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 16:24 IST
Last Updated 17 ಜನವರಿ 2023, 16:24 IST
   

ಬೆಂಗಳೂರು: ಕೇಂದ್ರ ಗೃಹ ಇಲಾಖೆಯು ಸಿದ್ಧಪಡಿಸಿರುವ ಪೊಲೀಸ್‌ ಇಲಾಖೆಯಲ್ಲಿ ‘ಒಂದು ದೇಶ– ಒಂದು ಸಮವಸ್ತ್ರ’ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ರಾಜ್ಯದ ಗೃಹ ಇಲಾಖೆ ಸಮ್ಮತ ವ್ಯಕ್ತಪಡಿಸಿದೆ.

ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿಗೆ ಮಂಗಳವಾರ ಪತ್ರ ಬರೆದಿರುವ ರಾಜ್ಯದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ‘ಪ್ರಧಾನಿಯವರ ಸಲಹೆಯಂತೆ ದೇಶದ ಎಲ್ಲ ರಾಜ್ಯಗಳಲ್ಲೂ ಪೊಲೀಸರಿಗೆ ಒಂದೇ ರೀತಿಯ ಸಮವಸ್ತ್ರ ನಿಗದಿಪಡಿಸುವುದು ಅಗತ್ಯವಾಗಿದೆ. ಇದು ದೇಶದ ಕಾನೂನು ಅನುಷ್ಠಾನ ಸಂಸ್ಥೆಗಳ ಸಿಬ್ಬಂದಿಯ ಗುರುತಿನಲ್ಲಿ ಏಕತೆ ತರಲಿದೆ. ಒಂದು ಸಮವಸ್ತ್ರ ನೀತಿ ಜಾರಿಗೊಂಡ ದಿನದಿಂದಲೇ ಕರ್ನಾಟಕದಲ್ಲಿ ಅದನ್ನು ಅನುಷ್ಠಾನಕ್ಕೆ ತರಲಾಗುವುದು’ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಪೊಲೀಸರಿಗೆ ದೇಶದಾದ್ಯಂತ ಒಂದೇ ಸಮವಸ್ತ್ರ ನೀತಿ ಜಾರಿಗೊಳಿಸುವ ಕುರಿತು ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರದ ಅಭಿ‍ಪ್ರಾಯ ಕೇಳಿತ್ತು. ಒಳಾಡಳಿತ ಇಲಾಖೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ನಾನು ಸಮ್ಮತಿ ಸೂಚಿಸಿದ್ದು, ಅದರಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಸಮವಸ್ತ್ರದ ವಿವರ: ಕಾನೂನು ಸುವ್ಯವಸ್ಥೆ ಪೊಲೀಸ್‌ ಸಿಬ್ಬಂದಿ– ಖಾಕಿ ಸಮವಸ್ತ್ರ, ಖಾಕಿ ಟೋಪಿ, ರಬ್ಬರ್‌ ಅಡಿಕಟ್ಟು ಹೊಂದಿರುವ ಕಪ್ಪು ಬಣ್ಣದ ಶೂ, ಇಲಾಖೆಯ ಲಾಂಛನವುಳ್ಳ ಕಪ್ಪು ಬೆಲ್ಟ್. ಸಂಚಾರ ವಿಭಾಗದ ಪೊಲೀಸ್‌ ಸಿಬ್ಬಂದಿ– ಬಿಳಿ ಅಂಗಿ ಮತ್ತು ಖಾಕಿ ಬಣ್ಣದ ಪ್ಯಾಂಟ್‌, ಬಿಳಿ ಬಣ್ಣದ ಟೋಪಿ, ರಬ್ಬರ್‌ ಅಡಿಕಟ್ಟು ಹೊಂದಿರುವ ಕಪ್ಪು ಬಣ್ಣದ ಶೂ, ಇಲಾಖೆಯ ಲಾಂಛನವುಳ್ಳ ಕಪ್ಪು ಬೆಲ್ಟ್. ಮಹಿಳಾ ಪೊಲೀಸ್‌ ಸಿಬ್ಬಂದಿ– ಖಾಕಿ ಸಮವಸ್ತ್ರ, ಬಟ್ಟೆಯಿಂದ ಮಾಡಿದ ದುಂಟೆಯ ಖಾಕಿ (ಬೆರೆಟ್‌) ಟೋಪಿ, ಗರ್ಭಿಣಿಯರಿಗೆ ಖಾಕಿ ಸೀರೆ, ಕಪ್ಪು ಬಣ್ಣದ ಶೂ, ಇಲಾಖೆಯ ಲಾಂಛನವುಳ್ಳ ಕಪ್ಪು ಬೆಲ್ಟ್‌.

ಸಶಸ್ತ್ರ ಪೊಲೀಸ್‌ ಸಿಬ್ಬಂದಿ– ಖಾಕಿ ಸಮವಸ್ತ್ರ, ಖಾಕಿ ಟೋಪಿ, ಇಲಾಖೆಯ ಲಾಂಛನವುಳ್ಳ ಕಪ್ಪು ಬೆಲ್ಟ್‌. ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ)– ಖಾಕಿ ಸಮವಸ್ತ್ರ, ಖಾಕಿ ಟೋಪಿ (ಅಧಿಕಾರಿಗಳ ಶೈಲಿ), ಕಂದುಬಣ್ಣದ ಆಕ್ಸ್‌ಫರ್ಡ್‌ ಶೂ, ಇಲಾಖೆಯ ಲಾಂಛನವುಳ್ಳ ಕಂದುಬಣ್ಣದ ಬೆಲ್ಟ್‌. ಮಹಿಳಾ ಎಎಸ್‌ಐ– ಖಾಕಿ ಸಮವಸ್ತ್ರ, ಖಾಕಿ ಟೋಪಿ (ಅಧಿಕಾರಿಗಳ ಶೈಲಿ), ಗರ್ಭಿಣಿಯರು ಖಾಕಿ ಸೀರೆ ಧರಿಸಬಹುದು, ಕಂದುಬಣ್ಣದ ಆಕ್ಸ್‌ಫರ್ಡ್‌ ಶೂ, ಇಲಾಖೆಯ ಲಾಂಛನವುಳ್ಳ ಕಂದು ಬಣ್ಣದ ಬೆಲ್ಟ್‌.

ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಮತ್ತು ಮಹಿಳಾ ಪಿಎಸ್‌ಐ– ಖಾಕಿ ಸಮವಸ್ತ್ರ, ಖಾಕಿ ಟೋಪಿ (ಅಧಿಕಾರಿಗಳ ಶೈಲಿ), ಕಂದುಬಣ್ಣದ ಆಕ್ಸ್‌ಫರ್ಡ್‌ ಶೂ, ಇಲಾಖೆಯ ಲಾಂಛನವುಳ್ಳ ಕಂದುಬಣ್ಣದ ಬೆಲ್ಟ್‌, ಗರ್ಭಿಣಿಯರು ಖಾಕಿ ಸೀರೆ ಧರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.