ಮೈಸೂರು: ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನ ಭಾನುವಾರ ಪದವೀಧರರಿಂದ ತುಂಬಿತ್ತು. ಪ್ರತಿಭಾನ್ವಿತರ ಕೊರಳಲ್ಲಿ ಬಂಗಾರದ ಪದಕ, ಪದವಿ ಪಡೆದವರ ಮೊಗದಲ್ಲಿ ಚಿನ್ನದಂಥ ಹೊಳಪಿನ ನಗುವಿತ್ತು. ಹಿರಿಯ ನಾಗರಿಕರು, ಸರ್ಕಾರಿ ನೌಕರರು, ವಕೀಲರು... ಹೀಗೆ ನಾನಾ ವರ್ಗ–ವಯಸ್ಸಿನವರು ಪದವಿ ಪಡೆದು ಸಂಭ್ರಮಿಸಿದರು.
ಮಾತೃಭಾಷೆಯಲ್ಲಿ ‘ಬಂಗಾರ’: ಸಾರ್ವಜನಿಕ ಶಿಕ್ಷಣ ಇಲಾಖೆಯ ತುಮಕೂರು ಡಿಡಿಪಿಐ ಕಚೇರಿಯಲ್ಲಿ ಇಸಿಒ ಆಗಿ ಕೆಲಸ ಮಾಡುತ್ತಿರುವ ಫಾತಿಮಾ ಜಹ್ರಾ ಸ್ನಾತಕೋತ್ತರ ವಿಭಾಗದಲ್ಲಿ ಉರ್ದು ವಿಷಯದಲ್ಲಿ 2 ಚಿನ್ನದ ಪದಕದೊಂದಿಗೆ ಮೊದಲ ರ್‍ಯಾಂಕ್ ತಮ್ಮದಾಗಿಸಿಕೊಂಡರು. ಭೌತವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆ ಆಗಿರುವ ಫಾತಿಮಾ ಮಾತೃಭಾಷೆಯಲ್ಲಿ ಪದವಿ ಪಡೆಯುವ ಕನಸಿನೊಂದಿಗೆ ಈ ಪದವಿಗೆ ಸೇರಿದ್ದಾಗಿ ಹೇಳಿದರು. ಮುಂದೆ ಪಿಎಚ್.ಡಿ ಮಾಡುವ ಕನಸು ತೆರೆದಿಟ್ಟರು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹಿರೇಮಾಗಡಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಎಚ್.ಎಂ. ಸೌಭಾಗ್ಯ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ 2 ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ‘ಕೆಲಸದಲ್ಲಿ ಇದ್ದುಕೊಂಡು ಓದುವುದು ಆರಂಭದಲ್ಲಿ ಕಷ್ಟ ಎನಿಸಿತ್ತು. ಕನ್ನಡವನ್ನು ತುಂಬಾ ಇಷ್ಟಪಡುತ್ತೇನೆ. ಹೀಗಾಗಿ ಈ ಸಾಧನೆ ಸಾಧ್ಯವಾಗಿದೆ’ ಎಂದು ವಿವರಿಸಿದರು.
ಗ್ರಂಥಪಾಲಕನಾದ ಎಂಜಿನಿಯರ್: ಗ್ರಂಥಾಲಯ ವಿಜ್ಞಾನದಲ್ಲಿ (ಎಂ.ಲಿಬ್) ಚಿನ್ನದ ಪದಕದೊಂದಿಗೆ ಮೊದಲ ಪದಕ ಪಡೆದ ವಿಷ್ಣು ಹೇಮಂತ ರಾಥೋಡ್ ಮೂಲತಃ ಎಂಜಿನಿಯರಿಂಗ್ ಪದವೀಧರ. ಸದ್ಯ ಬಾಗಲಕೋಟೆ ಜಿಲ್ಲೆಯ ಬದಾಮಿ ಪಟ್ಟಣದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ಕೆಲಸ ಮಾಡುತ್ತಿದ್ದಾರೆ.
‘ಗ್ರಂಥಾಲಯ ವಿಜ್ಞಾನದಲ್ಲಿ ಮೊದಲಿಂದಲೂ ಆಸಕ್ತಿ ಇತ್ತು. ನನ್ನ ಎಂಜಿನಿಯರಿಂಗ್ ಜ್ಞಾನ ಬಳಸಿಕೊಂಡು ಈ ಕ್ಷೇತ್ರಕ್ಕೆ ಅಗತ್ಯವಾದ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಕನಸಿನೊಂದಿಗೆ ಈ ಪದವಿ ಪಡೆದಿದ್ದೇನೆ’ ಎಂದು ವಿಷ್ಣು ಹೇಳಿದರು.
66ನೇ ವಯಸ್ಸಿನಲ್ಲಿ ಪದವಿ: ಚೆನ್ನೈ ಮೂಲದ ನಿವೃತ್ತ ಬ್ಯಾಂಕ್ ಅಧಿಕಾರಿ ಅರ್ಧನಾರಿ ತಮ್ಮ 66ನೇ ವಯಸ್ಸಿನಲ್ಲಿ ಸಂಸ್ಕೃತ ವಿಷಯದಲ್ಲಿ ನಗದು ಪುರಸ್ಕಾರದೊಂದಿಗೆ ಸ್ನಾತಕೋತ್ತರ ಪದವಿ ಪ್ರಮಾಣಪತ್ರ ಸ್ವೀಕರಿಸಿ ಗಮನಸೆಳೆದರು. ‘ಈಗಾಗಲೇ ನಾಲ್ಕು ವಿಷಯದಲ್ಲಿ ಪದವಿ ಪಡೆದಿದ್ದೇನೆ. ಸಂಸ್ಕೃತ ವಿಷಯದಲ್ಲಿ ಓದಿಗಾಗಿ ಹುಡುಕುತ್ತಿದ್ದಾಗ ಮುಕ್ತ ವಿ.ವಿ. ಬಗ್ಗೆ ತಿಳಿದು ಇಲ್ಲಿಗೆ ದಾಖಲಾದೆ. ಮುಂದೆ ಇದೇ ವಿಷಯದಲ್ಲಿ ಪಿಎಚ್.ಡಿ ಮಾಡಬೇಕು ಎಂದಿದ್ದೇನೆ’ ಎಂದು ಅವರು ಹೇಳಿದರು.
ಪದವಿ ಪ್ರದಾನ: ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಹೈಕೋರ್ಟ್ ನ್ಯಾಯಮೂರ್ತಿ ಅಶೋಕ್ ಕಿಣಗಿ ಪದವಿ ಪ್ರದಾನ ಮಾಡಿದರು. ಶಿಕ್ಷಣ ತಜ್ಞರಾದ ಬೆಂಗಳೂರಿನ ಎನ್. ರಾಮಚಂದ್ರಯ್ಯ ಹಾಗೂ ಎಸ್.ಎನ್. ವೆಂಕಟಲಕ್ಷ್ಮಿನರಸಿಂಹ ರಾಜು ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಗೌರವ ಡಾಕ್ಟರೇಟ್‌ಗೆ ಆಯ್ಕೆಯಾಗಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಬಂದಿರಲಿಲ್ಲ. ಕುಲಪತಿ ಪ್ರೊ. ಶರಣಪ್ಪ ಹಲಸೆ ಇದ್ದರು.
ಏಕೈಕ ಪಿಎಚ್.ಡಿ ಪದವೀಧರೆ
ಈ ಬಾರಿ ಘಟಿಕೋತ್ಸವದಲ್ಲಿ ಒಬ್ಬರಷ್ಟೆ ಪಿಎಚ್.ಡಿ ಪದವಿ ಪಡೆದರು. ಅವರು ಮೈಸೂರಿನ ಎನ್. ಭಾಗ್ಯಶ್ರೀ. ರಾಜ್ಯಶಾಸ್ತ್ರ ವಿಭಾಗದಲ್ಲಿ ‘ಭಾರತದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ– ಕಾರ್ಯಾಚರಣೆ ಮತ್ತು ಮುಂದಿನ ನಿರೀಕ್ಷೆಗಳು’ ಕುರಿತು ಅವರು ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಮೈಸೂರು ವಿ.ವಿ. ಸಂಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಲೇ ಐದಾರು ವರ್ಷ ದೆಹಲಿ ಬೆಂಗಳೂರು ಮೊದಲಾದ ಕಡೆಗಳಲ್ಲಿ ಸುತ್ತಿ ಸಂಶೋಧನಾ ಪ್ರಬಂಧ ಸಿದ್ಧಪಡಿಸಿದ ಕಸರತ್ತನ್ನು ಅವರು ಹಂಚಿಕೊಂಡರು. ಕುಟುಂಬದ ಸಹಕಾರವನ್ನೂ ನೆನೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.