ADVERTISEMENT

106 ಬಡ ವಿದ್ಯಾರ್ಥಿಗಳ ಶುಲ್ಕ ಪಾವತಿಸಿದ ನೀಲ್‌

ಹೇಮಂತಕುಮಾರ್ ಎಂ.ಎನ್‌
Published 12 ಜನವರಿ 2021, 20:30 IST
Last Updated 12 ಜನವರಿ 2021, 20:30 IST
ನೀಲ್ ಪ್ರಕಾಶ್
ನೀಲ್ ಪ್ರಕಾಶ್   

ವಿರಾಜಪೇಟೆ (ಕೊಡಗು): ಬೆಂಗಳೂರಿನ ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ನೀಲ್ ಎಂ. ಪ್ರಕಾಶ್, ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯ 106 ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಪಾವತಿಸಿದ್ದಾರೆ.

ಕೋವಿಡ್‌ ಕಾರಣದಿಂದಾಗಿ, ಶಾಲಾ ಶುಲ್ಕವನ್ನು ಪಾವತಿಸಲು ಬಡ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅವರ ಈ ಸಮಸ್ಯೆಯನ್ನು ಅರಿತ ನೀಲ್, ಬೆಂಗಳೂರಿನಲ್ಲಿರುವ ತಮ್ಮ ಸ್ನೇಹಿತರು, ಹಿತೈಷಿಗಳಿಂದ ಹಣ ಸಂಗ್ರಹಿಸಿ ವಿದ್ಯಾರ್ಥಿಗಳ ಶುಲ್ಕವನ್ನು ಪಾವತಿಸಿದ್ದಾರೆ. ಅವರ ಈ ಕಾರ್ಯವು ಮೆಚ್ಚುಗೆಗೆ ಪಾತ್ರವಾಗಿದೆ.

ನೀಲ್‌, ವಿರಾಜಪೇಟೆಯ ಉದ್ಯಮಿ ಹಾಗೂ ಕಾಫಿ ಬೆಳೆಗಾರ ಸಿ.ಪಿ.ಪ್ರಕಾಶ್‌ ಅವರ ಮೊಮ್ಮಗ. ಮೃದುಲ್ ಪ್ರಕಾಶ್‌ ಅವರ ಮಗ. ಛಾಯಾಗ್ರಹಣ, ಬ್ಯಾಡ್ಮಿಂಟನ್‌ ಆಟವಾಡುವುದು ಅವರ ಹವ್ಯಾಸ. ಅವರಿಗೆ ಸಿನಿಮಾ ಕ್ಷೇತ್ರದಲ್ಲೂ ಆಸಕ್ತಿ ಇದೆ.

ADVERTISEMENT

‘ಕೋವಿಡ್‌ನ ಪರಿಣಾಮ ಎಲ್ಲರಿಗೂ ತಟ್ಟಿದೆ. ಬಡವರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹ ಮಕ್ಕಳ ಶಿಕ್ಷಣಕ್ಕೆ ತೊಡಕಾಗಬಾರದು ಎಂಬ ಉದ್ದೇಶದಿಂದ ಕೂಲಿ ಕಾರ್ಮಿಕರ ಮಕ್ಕಳ ಶಾಲಾ ಶುಲ್ಕವನ್ನು ಭರಿಸಲು ನಿರ್ಧರಿಸಿದೆ. ನನ್ನ ಈ ಕಾರ್ಯಕ್ಕೆ ಬೆಂಗಳೂರಿನ ನನ್ನ ಸ್ನೇಹಿತರೂ ಬೆಂಬಲವಾಗಿ ನಿಂತು ಆರ್ಥಿಕ ಸಹಾಯ ಮಾಡಿದ್ದಾರೆ’ ಎಂದು ನೀಲ್‌ ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆನೀಲ್ ಪ್ರಕಾಶ್ ನೆರವಾಗಿದ್ದಾನೆ. ಅವನ ಕುಟುಂಬದವರೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ಹಾದಿಯಲ್ಲಿ ಈತನೂ ಮುನ್ನಡೆದಿರುವುದು ಸಂತಸ ತಂದಿದೆ’ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ
ವ್ಯವಸ್ಥಾಪಕ ಮದಲೈ ಮುತ್ತು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.