ADVERTISEMENT

ಗುಜರಾತಿಗಳು ನಿಮ್ಮ ತಂದೆಯನ್ನು ಸಿಎಂ ಕುರ್ಚಿಯಿಂದ ಇಳಿಸಿದ್ದು ಮರೆತಿರಾ?:ಬಾಲಕೃಷ್ಣ

ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಮಾಗಡಿ ಶಾಸಕ ಬಾಲಕೃಷ್ಣ ತಿರುಗೇಟು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 12:18 IST
Last Updated 6 ಫೆಬ್ರುವರಿ 2024, 12:18 IST
<div class="paragraphs"><p>ಎಚ್‌.ಸಿ. ಬಾಲಕೃಷ್ಣ</p></div>

ಎಚ್‌.ಸಿ. ಬಾಲಕೃಷ್ಣ

   

(ಚಿತ್ರ ಕೃಪೆ: X/@HC_Balakrishna)

‌ರಾಮನಗರ: ‘ಗುಜರಾತಿಗಳು ನಿಮ್ಮ ಪೂಜ್ಯ ತಂದೆಯವರನ್ನು ಹೀನಾಯವಾಗಿ ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಿ ಕಣ್ಣೀರು ಹಾಕಿಸಿದ್ದು ಮರೆತು ಹೋಯಿತೇ ವಿಜಯೇಂದ್ರ ಅವರೇ..?’ ಎಂದು ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರು ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಪ್ರಶ್ನಿಸಿದ್ದಾರೆ.

ADVERTISEMENT

‘ಬಿಜೆಪಿಯಲ್ಲಿ ಗಂಡಸರಿದ್ದರೆ ರಾಜ್ಯದ ಪಾಲಿನ ಅನುದಾನಕ್ಕಾಗಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟಕ್ಕೆ ದನಿಗೂಡಿಸಲಿ’ ಎಂದು ಬಾಲಕೃಷ್ಣ ಸೋಮವಾರ (ಫೆ. 5) ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದರು. ಇದಕ್ಕೆ ವಿಜಯೇಂದ್ರ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಡಿದ್ದ, ‘ಬ್ರಿಟಿಷರು ದೇಶಬಿಟ್ಟು ತೊಲಗಿದರೂ ನೆಹರು ಕುಟುಂಬದ ಗುಲಾಮಗಿರಿಯ ನೆರಳಲ್ಲೇ ಇರುವ ಶಾಸಕ ಬಾಲಕೃಷ್ಣ ಅವರಂತಹ ಕಾಂಗ್ರೆಸ್ಸಿಗರು ಇಂದು ನಮ್ಮ ಪಕ್ಷದ ಸಂಸದರನ್ನು ಕುರಿತು ನೀಡಿರುವ ಕೀಳುಮಟ್ಟದ ಹೇಳಿಕೆಗೆ ಈ ಚಿತ್ರವೇ ಉತ್ತರ ಹೇಳುತ್ತದೆ’ ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಎದುರು ಪಕ್ಷದ ಸಚಿವರು ಹಾಗೂ ನಾಯಕರು ನಿಂತಿರುವ ಚಿತ್ರವನ್ನು ಪೋಸ್ಟ್‌ ಮಾಡಿದ್ದರು.

ವಿಜಯೇಂದ್ರ ಅವರ ಪೋಸ್ಟ್‌ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಬಾಲಕೃಷ್ಣ, ‘ನಿಮ್ಮ ಸಂಸದರಿಗೆ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಿಂತು ಈ ರೀತಿ ಮಾತನಾಡುವ ತಾಕತ್ತು ಇದೆಯಾ..’ ಎಂದು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರೋಡ್ ಷೋ ನಡೆಸುತ್ತಿದ್ದ ಪ್ರಧಾನಿ ಮೋದಿ ಅವರಿಗೆ, ಬ್ಯಾರಿಕೇಡ್ ಆಚೆ ನಿಂತು ಕೈ ತೋರಿಸುತ್ತಿದ್ದ ಹಿಂದಿನ ರಾಜ್ಯ ಬಿಜೆಪಿ ಅಧ್ಯಕ್ಷರು, ಸಚಿವರು ಹಾಗೂ ಶಾಸಕರ ಫೋಟೊ ಪೋಸ್ಟ್ ಮಾಡಿ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.