ADVERTISEMENT

ನೆರೆ ರಾಜ್ಯಗಳ ಜವಳಿ ನೀತಿ ಅಧ್ಯಯನ: ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 15:56 IST
Last Updated 28 ಅಕ್ಟೋಬರ್ 2025, 15:56 IST
ಶಿವಾನಂದ ಪಾಟೀಲ
ಶಿವಾನಂದ ಪಾಟೀಲ   

ಬೆಂಗಳೂರು: ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಜವಳಿ ನೀತಿಯನ್ನು ಅಧ್ಯಯನ ಮಾಡಿ, ಸಮಗ್ರ ವರದಿ ಸಿದ್ಧಪಡಿಸಲು ಜವಳಿ ಸಚಿವ ಶಿವಾನಂದ ಪಾಟೀಲ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕರ್ನಾಟಕ ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ ಅನುಷ್ಠಾನ ಕುರಿತ ಉನ್ನತ ಮಟ್ಟದ ಸಬಲೀಕರಣ ಸಮಿತಿ ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದ ಅವರು, ‘ನೆರೆ ರಾಜ್ಯಗಳ ಜವಳಿ ಉದ್ಯಮಿಗಳನ್ನು ಆಕರ್ಷಿಸಲು ಅಧ್ಯಯನ ವರದಿ ಅಗತ್ಯವಿದೆ. ಇತರೆ ರಾಜ್ಯಗಳು ಉದ್ಯಮಿಗಳಿಗೆ ಯಾವ ಸವಲತ್ತುಗಳನ್ನು ನೀಡುತ್ತಿವೆ ಎಂಬ ಮಾಹಿತಿಯ ಆಧಾರದಲ್ಲಿ ರಾಜ್ಯದ ನೀತಿಗಳನ್ನು ಬದಲಾವಣೆ ಮಾಡಲಾಗುವುದು’ ಎಂದರು.

‘ಬಾಂಗ್ಲಾದೇಶದ ಪ್ರತಿಕೂಲ ಪರಿಸ್ಥಿತಿ ಪರಿಣಾಮ ಅಲ್ಲಿನ ಜವಳಿ ಉದ್ಯಮ ಬೇರೆಡೆಗೆ ಸ್ಥಳಾಂತರವಾಗುತ್ತಿದೆ. ಅಲ್ಲಿನ ಉದ್ಯಮಿಗಳನ್ನು ಕರ್ನಾಟಕಕ್ಕೆ ಸೆಳೆಯಲು ಯೋಜನೆ ರೂಪಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಉದ್ಯಮ ಸುಸ್ಥಿತಿಯಲ್ಲಿದೆ. ಬಹುತೇಕ ಉದ್ಯಮಿಗಳು ತಮಿಳುನಾಡಿನಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಅವರನ್ನು ಕರ್ನಾಟಕ ರಾಜ್ಯದತ್ತ ಸೆಳೆಯಲು ಏನು ಮಾಡಬೇಕು ಎನ್ನುವ ಕುರಿತು ಅಧ್ಯಯನ ಮಾಡಬೇಕಿದೆ. ಮಹಾರಾಷ್ಟ್ರ ಸರ್ಕಾರ ವಿದ್ಯುತ್‌ ಬಿಲ್‌ನಲ್ಲೇ ಸಹಾಯಧನ ನೀಡುತ್ತಿದೆ. ನಮ್ಮಲ್ಲಿಯೂ ಈ ಪದ್ಧತಿ ಅನುಸರಿಸಿದರೆ ಮಹಾರಾಷ್ಟ್ರದ ಜವಳಿ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಸಿದ್ಧರಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಉದ್ಯಮಿಗಳಿಂದ ಬರುವ ಪ್ರಸ್ತಾವಗಳಿಗೆ ಮಂಜೂರಾತಿ ನೀಡಲು ವಿಳಂಬ ಮಾಡಬಾರದು. ರಾಜ್ಯ ಸರ್ಕಾರ ಘೋಷಿಸಿದಂತೆ ಸವಲತ್ತುಗಳನ್ನು ನೀಡಲು ವಿಳಂಬ ಮಾಡಿದರೆ ಉದ್ಯಮಿಗಳು ನೆರೆ ರಾಜ್ಯಗಳತ್ತ ಗಮನ ಹರಿಸುತ್ತಾರೆ. ನೆರೆ ರಾಜ್ಯಗಳ ಉದ್ಯಮಿಗಳನ್ನು ಕರ್ನಾಟಕ್ಕೆ ಬರುವಂತೆ ಅಧಿಕಾರಿಗಳು ಆಸಕ್ತಿ ವಹಿಸಲು ಸೂಚಿಸಲಾಗಿದೆ’ ಎಂದರು.

‘ಪಿಎಂ ಮಿತ್ರ ಪಾರ್ಕ್‌’ಗೆ ಸಾವಿರ ಎಕರೆ ‘

ಪಿಎಂ ಮಿತ್ರ ಪಾರ್ಕ್‌ ಯೋಜನೆಗೆ ರಾಜ್ಯ ಸರ್ಕಾರ ಒಂದು ಸಾವಿರ ಎಕರೆ ಭೂಮಿ ಜಮೀನು ನೀಡಿದ್ದು ಮೂಲಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡಿದೆ. ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಸೂಚಿಸಲಾಗಿದೆ’ ಎಂದು ಶಿವಾನಂದ ಪಾಟೀಲ ಹೇಳಿದರು. ‘ನೂರಾರು ವರ್ಷಗಳಿಂದ ಮನೆಯಲ್ಲೇ ಕೈಮಗ್ಗ ಹಾಕಿಕೊಂಡವರಿಗೆ ಪೂರ್ಣ ಪ್ರಮಾಣದಲ್ಲಿ ಇರುವ ನೇಕಾರರ ಕಾಲೊನಿಗಳಿಗೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿನಾಯಿತಿ ಕೊಡಿಸುವ ಪ್ರಯತ್ನ ಆಗಬೇಕಿದೆ. ಬೆಂಗಳೂರಿನ ಕಬ್ಬನ್‌ ಪೇಟೆ ಕಾಟನ್‌ ಪೇಟೆ ಮತ್ತಿತರ ಕಡೆ ಇರುವ ನೇಕಾರರಿಗೆ ಸಮಸ್ಯೆಯಾಗಿದ್ದು ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.