ಜಿ. ಪರಮೇಶ್ವರ
ಬೆಂಗಳೂರು: ‘ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರಾಗಿರುವ ಪ್ರಣಬ್ ಮೊಹಾಂತಿ ಅವರು ಕೇಂದ್ರ ಸೇವೆಗೆ ಹೋದರೆ ಅವರ ಜಾಗಕ್ಕೆ ಬೇರೆಯವರನ್ನು ನೇಮಕ ಮಾಡಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಕಾನೂನು ಪ್ರಕಾರ ಏನಿದೆಯೊ ಅದರಂತೆ ನಾವೂ ನಡೆದುಕೊಳ್ಳುತ್ತೇವೆ’ ಎಂದರು.
ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿರುವ ಪ್ರಣಬ್ ಮೊಹಾಂತಿ ಅವರು ಕೇಂದ್ರ ಸೇವೆಗೆ ಅರ್ಹತೆ ಪಡೆದ 35 ಐಪಿಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸಿಬಿಐ, ಎನ್‌ಎಐ ಸೇರಿ ಕೇಂದ್ರ ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳ ಮಹಾನಿರ್ದೇಶಕ ಹುದ್ದೆಗೆ ಈ ಪಟ್ಟಿಯಲ್ಲಿರುವ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬಹುದಾಗಿದೆ.
‘ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ವೇಳೆ ನಾವು ಯಾರೂ ಮಾತನಾಡಬಾರದೆಂದು ನಿರ್ಧರಿಸಿದ್ದೇವೆ. ತನಿಖೆಯ ಬಳಿಕ ಎಲ್ಲ ಮಾಹಿತಿ ಸಿಗಲಿದೆ’ ಎಂದೂ ಪರಮೇಶ್ವರ ಹೇಳಿದರು.
ತೇಜೋವಧೆಗೆ ಅವಕಾಶ ಇಲ್ಲ:
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅಶ್ಲೀಲ ಸಂದೇಶಗಳನ್ನು ಪೋಸ್ಟ್ ಮಾಡುತ್ತಿರುವವರ ವಿರುದ್ಧ ನಟಿ ರಮ್ಯಾ ನೀಡಿರುವ ದೂರಿನ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ, ‘ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರೂ ಸ್ವತಂತ್ರರು. ಆದರೆ, ತೇಜೋವಧೆ ಮಾಡಲು ಹೋಗಬಾರದು. ದೂರಿನ ಬಗ್ಗೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.