
ಬೆಂಗಳೂರು: ‘ಕರ್ನಾಟಕವನ್ನು ರಕ್ಷಣಾ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯ ರಾಜಧಾನಿ ಮಾಡಲು 200 ಎಕರೆಯಲ್ಲಿ ಪ್ರತ್ಯೇಕ ಪಾರ್ಕ್ ಸ್ಥಾಪಿಸಬೇಕು. 100 ಎಕರೆಯಲ್ಲಿ ಏವಿಯಾನಿಕ್ಸ್ ಮತ್ತು ಸೆನ್ಸರ್ ಪಾರ್ಕ್ ಆರಂಭಿಸಬೇಕೆಂದು ವಿಷನ್ ಗ್ರೂಪ್‌ಗಳ ಸಭೆಯಲ್ಲಿ ಪ್ರಸ್ತಾಪವಾಗಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ವಿವಿಧ ಕೈಗಾರಿಕಾ ವಲಯಗಳ ಭವಿಷ್ಯದ ಹಾದಿ ಹೇಗಿರಬೇಕು ಮತ್ತು ಸರ್ಕಾರ ತೆಗೆದುಕೊಳ್ಳಬೇಕಿರುವ ಕ್ರಮಗಳ ಸ್ವರೂಪ ಹೇಗಿರಬೇಕು ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಏರೋಸ್ಪೇಸ್ ಮತ್ತು ರಕ್ಷಣೆ, ಮಶೀನ್ ಟೂಲ್ಸ್, ಆಟೋ– ಇ.ವಿ ಮತ್ತು ಪರಿಸರಸ್ನೇಹಿ ಇಂಧನ ವಲಯಗಳ ವಿಷನ್ ಗ್ರೂಪ್‌ಗಳ ಜೊತೆ ಸಚಿವರು ಸಭೆ ನಡೆಸಿದರು.
‘ವಿಶೇಷ ಹೂಡಿಕೆ ವಲಯ ಅಸ್ತಿತ್ವಕ್ಕೆ ಬಂದ ನಂತರ ಅವುಗಳನ್ನು ಜಾರಿಗೊಳಿಸಲಾಗುವುದು. ಇದಕ್ಕೆ ಬೇಕಾದ ಜಮೀನಿಗೆ ಯಾವ ತೊಂದರೆಯೂ ಇಲ್ಲ’ ಎಂದು ಅವರು ಹೇಳಿದ್ದಾರೆ.
‘ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮಗಳ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಜಪಾನಿನಲ್ಲಿ 2028ರ ಹೊತ್ತಿಗೆ ಸುಝುಕಿ ಮತ್ತು ಟೊಯೊಟಾ ಕಂಪನಿಗಳು ಏರಿಯಲ್ ಟ್ಯಾಕ್ಸಿ ಸೇವೆ ಆರಂಭಿಸುತ್ತಿವೆ. ಅದಕ್ಕೆ ಬೆಂಗಳೂರಿನ ಸಾಸ್ಮೋಸ್ ಕಂಪನಿಯೇ ವಿದ್ಯುತ್ ಸಾಧನ-ಸಲಕರಣೆಗಳನ್ನು ಪೂರೈಸುತ್ತಿದೆ. ನಮ್ಮಲ್ಲೂ ಸಹ ‘ಫ್ಲೈ-ಟ್ಯಾಕ್ಸಿ’ ಸೇವೆಗೆ ಸಂಬಂಧಿಸಿದಂತೆ ಸಮರ್ಪಕ ನೀತಿ ರೂಪಿಸಿ, ಇಲ್ಲೂ ಅಂತಹ ಸೇವೆಯನ್ನು ಆರಂಭಿಸಬಹುದು ಎಂದು ಉದ್ಯಮಿಗಳು ಹೇಳಿದ್ದಾರೆ. ಇದನ್ನು ಗಂಭೀರವಾಗಿ ಪರಿಶೀಲಿಸಲಾಗುವುದು’ ಎಂದೂ ಪಾಟೀಲ ತಿಳಿಸಿದ್ದಾರೆ.
ಖನಿಜ ಭವನದಲ್ಲಿ ಇಡೀ ದಿನ ನಡೆದ ಸಭೆಗಳಲ್ಲಿ ಪ್ರಮುಖ ಉದ್ಯಮಿಗಳು ಹಾಗೂ ಅವರ ಪ್ರತಿನಿಧಿಗಳು ಭಾಗವಹಿಸಿದ್ದರು. ಕೆಲವರು ವರ್ಚುವಲ್ ಮೂಲಕ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಐಕೆಎಫ್ ಸಿಇಒ ಜೋತ್ಸ್ನಾ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಇದ್ದರು.
ಉದ್ಯಮಿಗಳಾದ ಸೆಂಟಮ್ ಎಲೆಕ್ಟ್ರಾನಿಕ್ಸ್ ಸಿಇಒ ಅಪ್ಪಾರಾವ್ ವೆಂಕಟ ಮಲ್ಲವರಪು, ಹನಿವೆಲ್ ಮುಖ್ಯಸ್ಥ ಜೀವೀಶ್ ಗುರುಮೂರ್ತಿ, ಸಾಫ್ರಾನ್ ಸಿಇಒ ಜೆ.ಎಸ್. ಗಾಂವ್ಕರ್, ಎಐಎ ಪ್ರಧಾನ ವ್ಯವಸ್ಥಾಪಕ ಎಸ್. ದ್ವಾರಕಾನಾಥ್, ಸಾಸ್ಮೋಸ್ ಸಂಸ್ಥಾಪಕ ಎಚ್ ಜಿ. ಚಂದ್ರಶೇಖರ್, ಕಾಲಿನ್ಸ್ ಏರೋಸ್ಪೇಸ್ ಉಪಾಧ್ಯಕ್ಷ ಸಮಿತ್ ರೇ ಇದ್ದರು. ಅಲ್ಲದೆ ಗ್ರೀವ್ಸ್ ಎಲೆಕ್ಟ್ರಿಕ್ಸ್ ಉಪಾಧ್ಯಕ್ಷ ಚೇತನ್ ಗೌಡ, ಟೊಯೊಟಾ ಉಪಾಧ್ಯಕ್ಷ ರಮೇಶ್ ರಾವ್, ಪ್ರಧಾನ ವ್ಯವಸ್ಥಾಪಕ ಕಿರಣ್ ಕುಮಾರ್, ಕೈಗಾರಿಕಾ ಪರಿಣತರಾದ ವಿಕ್ರಂ ಸಾಳುಂಕೆ, ಸುರೇಶ್ ಪಾಟೀಲ್, ದಿನೇಶ್ ರಾವ್, ರವಿ ಕುಳದೇಮಠ ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.