ADVERTISEMENT

ಗಡಿ ಕನ್ನಡಿಗರಿಗೆ ಮಹಾರಾಷ್ಟ್ರದ ಆರೋಗ್ಯ ಯೋಜನೆ: ಆಕ್ಷೇಪ

ಯೋಜನೆ ತಡೆಗೆ ಕ್ರಮ: ಸಿ.ಎಂ, ಕೇಂದ್ರದ ಮಧ್ಯ ಪ್ರವೇಶಕ್ಕೆ ಕಾಂಗ್ರೆಸ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 1:35 IST
Last Updated 16 ಮಾರ್ಚ್ 2023, 1:35 IST
   

ಬೆಳಗಾವಿ: ‘ಕರ್ನಾಟಕ ಗಡಿ ಭಾಗದ 865 ಹಳ್ಳಿಗಳಿಗೂ ಅನ್ವಯ ಆಗುವಂತೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಯೋಜನೆ ನೀಡಿದ್ದರೆ, ಅದನ್ನು ಪರಿಶೀಲಿಸಿ ಹೇಗೆ ತಡೆಯಬೇಕು ಎಂದು ಯೋಚಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಹಾರಾಷ್ಟ್ರ ಸರ್ಕಾರವು ‘ಮಹಾತ್ಮ ಜ್ಯೋತಿರಾವ್ ಫುಲೆ ಜನಾರೋಗ್ಯ ಯೋಜನೆ’ಯನ್ನು ನಮ್ಮ ರಾಜ್ಯದ ಎಂಟು ನೂರಕ್ಕೂ ಹೆಚ್ಚು ಹಳ್ಳಿಗಳಿಗೆ ವಿಸ್ತರಿಸಲು ಹೊರಟಿರುವುದಕ್ಕೆ ಅವರು ನಗರದಲ್ಲಿ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ಸದ್ಯ ಮಹಾರಾಷ್ಟ್ರ ಸರ್ಕಾರ ಯಾವ ಉದ್ದೇಶಕ್ಕೆ, ಈ ಯೋಜನೆ ಜಾರಿ ಮಾಡಿದೆ ಎಂದು ನೋಡಿಕೊಂಡು ಹೆಜ್ಜೆ ಇಡುತ್ತೇನೆ. ನಾವು ಕೂಡ ಪಂಢರಪುರ, ತುಳಜಾಪುರಕ್ಕೆ ಹೋಗುವ ಕರ್ನಾಟಕದ ಪ್ರವಾಸಿಗರಿಗೆ ನೆರವು ನೀಡುತ್ತಿದ್ದೇವೆ’ ಎಂದರು.

ADVERTISEMENT

ಮಹಾರಾಷ್ಟ್ರದ ಈ ನಡೆಯನ್ನು ಕಾಂಗ್ರೆಸ್‌ ಕೂಡ ಟೀಕಿಸಿದೆ. ಕೂಡಲೇ ಅಲ್ಲಿನ ಸರ್ಕಾರವನ್ನು ವಜಾ ಮಾಡ ಬೇಕು ಎಂದು ಆಗ್ರಹಿಸಿದೆ.

‘ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ ಮಹಾಜನ್‌ ಆಯೋಗ ನೀಡಿದ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿ ಕೊಂಡಿದೆ. ಆದರೆ, ಮಹಾರಾಷ್ಟ್ರ ಇದುವರೆಗೂ ತಕರಾರು ಎತ್ತುತ್ತಿದೆ. ನೆಲ–ಜಲ–ಗಡಿ ರಕ್ಷಣೆ ನಮ್ಮ ಹಕ್ಕು. ಇದಕ್ಕೆ ಧಕ್ಕೆ ಬಂದಾಗ, ರಾಜ್ಯ ಸರ್ಕಾರ ಮೌನವಾಗಿರಬಾರದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಹಾಗೂ ಕನ್ನಡಿಗರ ಹಿತಾಸಕ್ತಿ ಕಾಪಾಡುವಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ವಿಫಲ ರಾಗಿದ್ದಾರೆ. ಇಷ್ಟೆಲ್ಲ ಆಗುತ್ತಿದ್ದರೂ ಅವರು ಮೌನವಾಗಿದ್ದಾರೆ. ಸರ್ಕಾರ ಸತ್ತುಹೋಗಿದೆಯೇ? ಮುಖ್ಯಮಂತ್ರಿ ಯಾಗಿ ಒಂದು ಕ್ಷಣವೂ ಮುಂದುವರಿ ಯಲು ಅವರಿಗೆ ಹಕ್ಕಿಲ್ಲ. ಕೂಡಲೇ ರಾಜೀನಾಮೆ ನೀಡಲಿ’ ಎಂದು ಒತ್ತಾಯಿಸಿದ್ದಾರೆ.

‘ಕಾಂಗ್ರೆಸ್ಸಿಗರ ಆರೋಪದಲ್ಲಿ ಹುರುಳಿಲ್ಲ. ಮಹಾರಾಷ್ಟ್ರ ಸರ್ಕಾರ ಆರೋಗ್ಯ ಯೋಜನೆ ಮಂಜೂರು ಮಾಡಿದ್ದಕ್ಕೆ ನಾನೇಕೆ ರಾಜೀನಾಮೆ ಕೊಡಬೇಕು? ನಾಡು, ನುಡಿ, ಗಡಿ ಜನರ ರಕ್ಷಣೆ ವಿಚಾರದಲ್ಲಿ ನಾನು ಯಾರಿಂದಲೂ ಪಾಠ ಕಲಿಯಬೇಕಾಗಿಲ್ಲ’ ಎಂದು ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ.

ಏನಿದು ಆರೋಗ್ಯ ಯೋಜನೆ?: ಮಹಾರಾಷ್ಟ್ರ ಸರ್ಕಾರ 2012ರಲ್ಲಿ ರಾಜೀವ್ ಗಾಂಧಿ ಜೀವನದಾಯಿ ಆರೋಗ್ಯ ಯೋಜನೆ (ಆರ್‌ಜಿಜೆಎವೈ) ಜಾರಿಗೆ ತಂದಿತ್ತು. 2017ರ ಏಪ್ರಿಲ್‌ 1ರಿಂದ ಇದೇ ಯೋಜನೆಯ‌ನ್ನು ‘ಮಹಾತ್ಮಾ ಜ್ಯೋತಿರಾವ್‌ ಫುಲೆ ಜನಾರೋಗ್ಯ ಯೋಜನೆ (ಎಂಜೆಪಿಜೆಎವೈ) ಎಂದು ಮರು ನಾಮಕರಣ ಮಾಡಲಾಗಿದೆ.

ಯೋಜನೆಯನ್ನು ಇದೇ ಮೊದಲ ಬಾರಿಗೆ ರಾಜ್ಯದ ಹೊರಗೆ ವಿಸ್ತರಿಸಲಾಗಿದೆ. ಮಹಾರಾಷ್ಟ್ರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಮಾತ್ರ ಈ ಯೋಜನೆ ಅನ್ವಯ ಆಗುತ್ತದೆ. ಗರಿಷ್ಠ ಮಿತಿ ಒಬ್ಬರಿಗೆ ₹ 1.50 ಲಕ್ಷ ನಿಗದಿ ಮಾಡಲಾಗಿದೆ.

ಮಾರ್ಚ್‌ 9ರಂದು ಮಹಾರಾಷ್ಟ್ರ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಈ ಪ್ರಸ್ತಾವ ಇಟ್ಟಿದ್ದರು. ‘ಕರ್ನಾಟಕದ ಐದು ಜಿಲ್ಲೆಗಳಲ್ಲಿ ಇರುವ 865 ಹಳ್ಳಿಗಳ ಮರಾಠಿಗರು ಹಾಗೂ ಇತರ ಭಾಷಿಕರಿಗೂ ಈ ಯೋಜನೆ ವಿಸ್ತರಿಸಲಾಗುವುದು. ಇದಕ್ಕಾಗಿ ₹ 54 ಕೋಟಿ ಹೆಚ್ಚುವರಿ ಅನುದಾನ ಮೀಸಲಿಡಲಾಗುವುದು’ ಎಂದು ತಿಳಿಸಿದ್ದರು. ಶಿವಸೇನಾ ಮುಖಂಡ ಉದ್ಧವ್‌ ಠಾಕ್ರೆ ಸೇರಿದಂತೆ ಬಹುಪಾಲು ಮುಖಂಡರೂ ಇದಕ್ಕೆ ಬೆಂಬಲ ಸೂಚಿಸಿದ್ದರು.

ಯಾರು ಫಲಾನುಭವಿ?: ಹಳದಿ ಪಡಿತರ ಚೀಟಿ, ಅಂತ್ಯೋದಯ ಪಡಿತರ ಕಾರ್ಡ್‌ ಹೊಂದಿದ ಹಾಗೂ ₹ 1 ಲಕ್ಷ ಆದಾಯ ಮಿತಿ ಮೀರದ ಎಲ್ಲರೂ ಇದರ ಫಲಾನುಭವಿ ಆಗಬಹುದು. ಅನಾಥಾಶ್ರಮ, ವೃದ್ಧಾಶ್ರಮ, ಬಾಲಮಂದಿರದ ಆಶ್ರಯದಲ್ಲಿರುವವರು ಹಾಗೂ ಪತ್ರಕರ್ತರಿಗೂ ಇದು ಅನ್ವಯವಾಗುತ್ತದೆ.

865 ಹಳ್ಳಿಗಳೇ ಏಕೆ?: ಬೆಳಗಾವಿ ನಗರವೂ ಸೇರಿದಂತೆ ಕರ್ನಾಟಕದ ಒಳಗಿರುವ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಹೋರಾಟ ನಡೆಸಿದೆ. ಈ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಸದ್ಯ ಮಹಾರಾಷ್ಟ್ರ ಸರ್ಕಾರವೂ ಇದೇ ಹಳ್ಳಿಗಳನ್ನು ಗುರಿಯಾಗಿಸಿ ಯೋಜನೆ ವಿಸ್ತರಿಸಿದೆ. ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್, ಉತ್ತರಕನ್ನಡ ಜಿಲ್ಲೆಗಳ ಹಳ್ಳಿಗಳ ಜನ ಚಿಕಿತ್ಸೆಗಾಗಿ ಹೆಚ್ಚಾಗಿ ಮಹಾರಾಷ್ಟ್ರದ ಮೀರಜ್, ಪುಣೆ, ಸಾಂಗ್ಲಿ, ಕೊಲ್ಹಾಪುರಗಳಿಗೆ ಹೋಗುವುದು ಸಹಜ.

*

ಮಹಾರಾಷ್ಟ್ರ ಸರ್ಕಾರದ ನಡೆ ಅಕ್ಷಮ್ಯ. ಇದು ಒಕ್ಕೂಟ ವ್ಯವಸ್ಥೆ, ರಾಜ್ಯದ ಸಾರ್ವಭೌಮತೆಗೆ ಧಕ್ಕೆ ತರುವಂತಿದೆ. ಕೂಡಲೇ ಕೇಂದ್ರ ಮಧ್ಯಪ್ರವೇಶಿಸಿ ಅಲ್ಲಿನ ಸರ್ಕಾರ ವಜಾಗೊಳಿಸಬೇಕು.
–ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

*

ಗಡಿಭಾಗದ ಗ್ರಾಮ ಗಳಲ್ಲಿ ಮಹಾರಾಷ್ಟ್ರ ಆರೋಗ್ಯ ವಿಮಾ ಯೋಜನೆ ಜಾರಿ ಮಾಡುತ್ತಿದೆ. ಹಣ ಇಲ್ಲದೆ ದಿವಾಳಿಯಾಗಿರುವ ರಾಜ್ಯ ಸರ್ಕಾರ ಕನ್ನಡಿಗರ ಹಿತಾಸಕ್ತಿ ಬಲಿ ಕೊಡುತ್ತಿದೆ.
–ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.