ADVERTISEMENT

ಜೆಡಿಎಸ್‌ ಮನೆ ಬಾಗಿಲು ಕಾಯುವ ಕಾಂಗ್ರೆಸ್‌: ಕುಮಾರಸ್ವಾಮಿ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 15:09 IST
Last Updated 3 ಡಿಸೆಂಬರ್ 2021, 15:09 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಕೋಲಾರ: ‘ಕಾಂಗ್ರೆಸ್‌ ಮುಖಂಡರು ಜೆಡಿಎಸ್ ಪಕ್ಷವು ಬಿಜೆಪಿಯ 'ಬಿ'ಟೀಮ್ ಎನ್ನುತ್ತಾರೆ. ಬಳಿಕ ನಮ್ಮ ಮನೆ ಬಾಗಿಲು ಕಾಯುತ್ತಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್‌ ನಾಯಕರು ಜೆಡಿಎಸ್‌ ಪಕ್ಷವು ಬಿಜೆಪಿಯ ಬಿ ಟೀಮ್‌ ಎಂದು 2018ರಿಂದಲೂ ಆರೋಪ ಮಾಡುತ್ತಾ ಬಂದಿದ್ದಾರೆ. ಕಾಂಗ್ರೆಸ್‌ನವರು ಹಾದಿಬೀದಿಯಲ್ಲಿ ಆ ರೀತಿ ಹೇಳುವ ಬದಲು ತಮ್ಮ ಕತ್ತಿಗೆ ಸ್ಲೇಟ್ ಹಾಕಿಕೊಂಡು ಓಡಾಡಲಿ. ಕಾಂಗ್ರೆಸ್‌ನ ನಡುವಳಿಕೆ ಬಗ್ಗೆ ತೀರ್ಮಾನವನ್ನು ನಾಡಿನ ಜನರಿಗೆ ಬಿಟ್ಟಿದ್ದೇನೆ’ ಎಂದರು.

‘ದೇವೇಗೌಡರು ಜನಪ್ರತಿನಿಧಿಯಾಗಿ ಪ್ರಧಾನಿಯನ್ನು ಭೇಟಿಯಾಗಿದ್ದಾರೆ. ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿ. ಹೀಗಾಗಿ ದೇವೇಗೌಡರ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವರನ್ನು ಭೇಟಿಯಾಗಿದ್ದಾರೆ. ಆದರೆ, ಕಾಂಗ್ರೆಸ್‌ನವರು ಅದರಲ್ಲಿ ರಾಜಕೀಯ ಬೆರೆಸಿ ಕೀಳು ರಾಜಕಾರಣ ಮಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ADVERTISEMENT

‘ಬಿಜೆಪಿಯು ಹಣದ ಮೂಲಕ ಚುನಾವಣೆ ಗೆಲ್ಲುವ ಅನುಭವ ಪಡೆದಿದೆ. ರಾಜ್ಯದ ಸಂಪತ್ತು ಲೂಟಿ ಮಾಡಿ ಚುನಾವಣೆ ಮಾಡುವುದು ಬಿಜೆಪಿಗೆ ಅಭ್ಯಾಸವಾಗಿದೆ. ಜನರೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯು ಜೆಡಿಎಸ್ ಪಕ್ಷವನ್ನು ಮುಗಿಸಲು ಹೊರಟಿವೆ. 2023ರಲ್ಲಿ ಜೆಡಿಎಸ್ ಪಕ್ಷ ಏನೆಂದು ತೋರಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.