ADVERTISEMENT

ವಿಧಾನಪರಿಷತ್‌: ಉಪಸಭಾಪತಿ ಪ್ರಾಣೇಶ್ ವಿರುದ್ಧ ಅವಿಶ್ವಾಸಕ್ಕೆ ತಿರಸ್ಕಾರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 15:57 IST
Last Updated 20 ಮಾರ್ಚ್ 2025, 15:57 IST
<div class="paragraphs"><p>ವಿಧಾನಪರಿಷತ್‌</p></div>

ವಿಧಾನಪರಿಷತ್‌

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಉಪಸಭಾಪತಿ ಎಂ.ಕೆ. ಪ್ರಾಣೇಶ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಕೋರಿದರು.

ADVERTISEMENT

ವಿಧಾನಪರಿಷತ್‌ನಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಸಭಾಪತಿ ಸ್ಥಾನ ಸಾಂವಿಧಾನಿಕ ಹುದ್ದೆ. ಅಂತಹ ಸ್ಥಾನದಲ್ಲಿ ಕುಳಿತು ಬಿಜೆಪಿ ಕಾರ್ಯಕರ್ತರಂತೆ ಮಾತನಾಡಿದ್ದಾರೆ ಎಂದು ದೂರಿದರು.

‘ಮಾರ್ಚ್‌ 17ರಂದು ನಡೆದ ಕಲಾಪದ ವೇಳೆ ಪ್ರಾಣೇಶ್‌ ಅವರು ಸಭಾಪತಿ ಪೀಠದಲ್ಲಿದ್ದರು. ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡುವ ವಿಚಾರ ಕುರಿತು ಚರ್ಚೆ ನಡೆಯುತ್ತಿತ್ತು. ಬಿಜೆಪಿ–ಜೆಡಿಎಸ್‌ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ‘ಆಗ ಮಾತನಾಡಿದ ನಾನು, ಪರಿಶಿಷ್ಟರು, ಹಿಂದುಳಿದವರಿಗೆ ಗುತ್ತಿಗೆ ಕಾಮಗಾರಿಗಳಲ್ಲಿ ಸಂವಿಧಾನ ಬದ್ಧವಾಗಿ ಮೀಸಲಾತಿ ನೀಡಿದಂತೆ, ಅಲ್ಪ ಸಂಖ್ಯಾತರಿಗೂ ನೀಡಲಾಗುತ್ತಿದೆ’ ಎಂದೆ. ಅದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಸ್ಥಾನದಲ್ಲಿದ್ದ ಪ್ರಾಣೇಶ್‌ ಅವರು, ‘ಮುಸ್ಲಿಮರಿಗೆ ಮೀಸಲಾತಿ ನೀಡುವುದು ಸಂವಿಧಾನ ವಿರೋಧಿ ನಡೆ’ ಎಂದು ಹೇಳಿದ್ದಾಗಿ ಹರಿಪ್ರಸಾದ್ ಹೇಳಿದರು.

ಅಲ್ಪ ಸಂಖ್ಯಾತರಿಗೆ ಕಾನೂನು ಬದ್ಧವಾಗಿಯೇ ಸರ್ಕಾರ ಮೀಸಲಾತಿ ನೀಡುತ್ತಿದೆ. ಅದು ಸಂವಿಧಾನಕ್ಕೆ ವಿರೋಧವಾಗಿದ್ದರೆ ಕಾನೂನು ಇಲಾಖೆಯೇ ತಡೆಯುತ್ತಿತ್ತು. ಸಂವಿಧಾನಬದ್ಧ ಪೀಠ ಅಲಂಕರಿಸಿದವರಿಗೆ ಸಂವಿಧಾನ, ಕಾನೂನು ಬಗ್ಗೆ ತಿಳಿವಳಿಕೆ ಇರಬೇಕು. ಆ ಸ್ಥಾನದಲ್ಲಿ ಕುಳಿತು ಸರ್ಕಾರದ ತೀರ್ಮಾನವನ್ನು ಟೀಕಿಸಬಾರದು. ಹಾಗಾಗಿ, ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು ಎಂದರು.

‘ಈ ಕುರಿತು ಪ್ರತ್ಯೇಕವಾಗಿ ಚರ್ಚಿಸೋಣ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಸಂಜೆ ಈ ವಿಷಯದ ಬಗ್ಗೆ ಪ್ರಸ್ತಾಪಸಿದ ಸಭಾಪತಿ ಅವರು, ‘ಹರಿಪ್ರಸಾದ್ ಅವರ ಕ್ರಿಯಾಲೋಪದ ಅಂಶಗಳನ್ನು ಪರಿಶೀಲಿಸಲಾಗಿದೆ. ಆದರೆ ಅದು ಪರಿಗಣನೆಗೆ ಸೂಕ್ತವಲ್ಲ’ ಎಂದು ತಿರಸ್ಕರಿಸಿದರು.

ಹರಿಪ್ರಸಾದ್ ಅವರು ‘ಕಳ್ಳವೋಟಿನಿಂದ ಗೆದ್ದುಬಂದಿಲ್ಲ’ ಎಂದಿದ್ದಾರೆ. ಇದರಿಂದ ಸದನದ ಘನತೆಗೆ ಧಕ್ಕೆಯಾಗಿದೆ. ಅದನ್ನು ಕಡತದಿಂದ ಬಿಡಬೇಕು
ಪ್ರತಾಪ್‌ ಸಿಂಹ ನಾಯಕ್‌, ಬಿಜೆಪಿ ಸದಸ್ಯ
ಈ ಪೀಠದಲ್ಲಿ ಕುಳಿತ ನಂತರ ಎಲ್ಲರೂ ಪಕ್ಷಾತೀತವಾಗಿ ಇರುತ್ತಾರೆ. ಆದರೆ ಕೂರುವವರು ದೇವರಲ್ಲ, ಅವರಿಂದಲೂ ತಪ್ಪಾಗಬಹುದು
ಬಸವರಾಜ ಎಸ್‌.ಹೊರಟ್ಟಿ, ಸಭಾಪತಿ
ಆರ್‌ಎಸ್‌ಎಸ್‌ನವರೇ ಬರೆದಿರುವ ಪುಸ್ತಕದಲ್ಲಿ ಈ ಮಾತು ಇದ್ದು, ಈಗಾಗಲೇ ಗೌರವಕ್ಕೆ ಧಕ್ಕೆಯಾಗಿದೆ. ಪುಸ್ತಕ ತಂದು ಕೊಡುತ್ತೇನೆ, ನೋಡಿಕೊಳ್ಳಿ
ಬಿ.ಕೆ.ಹರಿಪ್ರಸಾದ್‌,ಕಾಂಗ್ರೆಸ್‌ ಸದಸ್ಯ

‘ಚ್ಯುತಿ ಬರುವಂತೆ ನಡೆದುಕೊಂಡಿಲ್ಲ’

ನಾನು ಸಭಾಪತಿಯ ಪೀಠದಲ್ಲಿ ಕುಳಿತಾಗ ಪಕ್ಷಾತೀತವಾಗಿಯೇ ನಡೆದುಕೊಂಡಿದ್ದೇನೆ. ನಿಯಮಗಳನ್ನು ಓದಿಕೊಂಡಿದ್ದೇನೆ. ಸಭಾಪತಿ ಸಲಹೆ ಪಡೆದುಕೊಂಡೇ ನಿರ್ಧಾರ ತೆಗೆದುಕೊಂಡಿದ್ದೇನೆ. ಆ ಪೀಠದ ಗೌರವಕ್ಕೆ ಚ್ಯುತಿ ಬರುವಂತೆ ಎಂದೂ ನಡೆದುಕೊಂಡಿಲ್ಲ. ‘ಕಳ್ಳವೋಟಿನಿಂದ ಗೆದ್ದು ಬಂದಿಲ್ಲ’ ಎಂಬ ಮಾತು ಸದನದ ಗೌರವಕ್ಕೆ ಧಕ್ಕೆ ತರುವಂತದ್ದು. ಯಾರು ಹೇಗೆ ಗೆದ್ದುಬಂದಿದ್ದಾರೆ ಎಂಬುದನ್ನು ಪರಿಶೀಲಿಸಲು ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್‌ ಇದೆ. ಅಲ್ಲಿ ಸಾಬೀತಾದರೆ ಮಾತ್ರ ಅಂತಹ ಮಾತು ಸಮಂಜಸ. 

ಎಂ.ಕೆ.ಪ್ರಾಣೇಶ್, ವಿಧಾನ ಪರಿಷತ್ತಿನ ಉಪಸಭಾಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.