ADVERTISEMENT

Karnataka Weather | ತಾಪಮಾನ ಮತ್ತಷ್ಟು ಕುಸಿತ: ಚಳಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 9 ಜನವರಿ 2025, 15:47 IST
Last Updated 9 ಜನವರಿ 2025, 15:47 IST
   

ಬೆಂಗಳೂರು: ಶೀತಗಾಳಿಯಿಂದಾಗಿ ರಾಜ್ಯದ ಬಹುತೇಕ ಕಡೆ ತಾಪಮಾನವು ಸಾಮಾನ್ಯ ಉಷ್ಣಾಂಶಕ್ಕಿಂತ 2ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ವರದಿಯಾಗುತ್ತಿದೆ. ಇದರಿಂದಾಗಿ ದಿನದ ಬಹುತೇಕ ಅವಧಿ ಚಳಿಯ ವಾತಾವರಣ ಮುಂದುವರಿಯುತ್ತಿದೆ. 

ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಬೀದರ್‌ನಲ್ಲಿ ಅತೀ ಕಡಿಮೆ ಉಷ್ಣಾಂಶ (10 ಡಿಗ್ರಿ ಸೆಲ್ಸಿಯಸ್) ವರದಿಯಾಗಿದೆ. ಧಾರವಾಡದಲ್ಲಿ 11 ಡಿಗ್ರಿ ಸೆಲ್ಸಿಯಸ್ ಹಾಗೂ ವಿಜಯಪುರದಲ್ಲಿ 11.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹತ್ತಕ್ಕೂ ಅಧಿಕ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶವು 15 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ವರದಿಯಾಗಿದೆ. 

ಶುಕ್ರವಾರ ಹಾಗೂ ಶನಿವಾರ ರಾಜ್ಯದ ಕೆಲವೆಡೆ ತಾಪಮಾನವು ಮತ್ತಷ್ಟು ತಗ್ಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ADVERTISEMENT

ಬೀದರ್ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನವು 3 ರಿಂದ 5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಂಭವವಿದೆ. ಧಾರವಾಡ, ಕಲಬುರಗಿ, ಗದಗ, ಯಾದಗಿರಿ, ರಾಯಚೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕನಿಷ್ಠ ತಾ‍ಪಮಾನವು 2 ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಬಳಿಕ ಕನಿಷ್ಠ ತಾಪಮಾನ ಕ್ರಮೇಣ ಏರಿಕೆಯಾಗಬಹುದು ಎಂದು ಇಲಾಖೆ ತಿಳಿಸಿದೆ. 

ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮುಂಜಾನೆ ದಟ್ಟ ಮಂಜು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನವು 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನವು 15 ಡಿಗ್ರಿ ಸೆಲ್ಸಿಯಸ್ ಇರುವ ಸಂಭವವಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.