ADVERTISEMENT

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ | ತುಂಬಿದ ಹಳ್ಳಗಳು: ರಸ್ತೆ ಸಂಪರ್ಕ ಕಡಿತ

ಸಿಡಿಲಿಗೆ ಎರಡು ಕುರಿಗಳು ಸಾವು, ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2023, 16:19 IST
Last Updated 8 ನವೆಂಬರ್ 2023, 16:19 IST
ಗಾಳಿ–ಮಳೆಯಿಂದಾಗಿ ಹಾಸನದ ಚನ್ನಪಟ್ಟಣ ಬೈಪಾಸ್ ಬಳಿ ಅಳವಡಿಸಿದ್ದ ಹಾಸನಾಂಬ ಜಾತ್ರೆಯ ಸ್ವಾಗತ ಕಮಾನು, ಕಾರಿನ ಮೇಲೆ ಬಿದ್ದಿತ್ತು.
ಗಾಳಿ–ಮಳೆಯಿಂದಾಗಿ ಹಾಸನದ ಚನ್ನಪಟ್ಟಣ ಬೈಪಾಸ್ ಬಳಿ ಅಳವಡಿಸಿದ್ದ ಹಾಸನಾಂಬ ಜಾತ್ರೆಯ ಸ್ವಾಗತ ಕಮಾನು, ಕಾರಿನ ಮೇಲೆ ಬಿದ್ದಿತ್ತು.    

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬುಧವಾರವೂ ಹದ ಮಳೆಯಾಗಿದೆ. ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ಹಾಗೂ ಒಬ್ಬ ದನಗಾಹಿ ಗಾಯಗೊಂಡಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಕಟಾವಿಗೆ ಬಂದ ಭತ್ತದ ಬೆಳೆ ನೆಲಕಚ್ಚಿದೆ. 

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಕಲಬುರಗಿ, ಕೊಪ್ಪಳ, ರಾಯಚೂರು, ಬೀದರ್‌ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಮಾಟಲದಿನ್ನಿ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ದನಗಾಹಿ ವೆಂಕಪ್ಪ ಗೊಲ್ಲರ  ಗಾಯಗೊಂಡಿದ್ದಾರೆ. ಅವರನ್ನು ಕುಷ್ಟಗಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಯಾದಗಿರಿ ಜಿಲ್ಲೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭತ್ತದ ಬೆಳೆ ಬೆಳೆದಿದ್ದ ರೈತರಿಗೆ ಸಂಕಷ್ಟ ಎದುರಾಗಿದೆ.  ತೊಗರಿ, ಹತ್ತಿ, ಮೆಣಸಿನಕಾಯಿ ಬೆಳೆಗಳಿಗೆ ಮಳೆ ಆಸರೆಯಾಗಿದೆ.

ADVERTISEMENT

ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ, ಬೀರೂರು ಭಾಗದಲ್ಲಿ ಮಧ್ಯಾಹ್ನ ಗುಡುಗು ಸಹಿತ ಜೋರು ಮಳೆ ಸುರಿಯಿತು.  ಅಡಿಕೆ ಕೊಯಿಲು ಮಾಡಲು ಕೃಷಿಕರಿಗೆ ಮಳೆ ಅಡ್ಡಿಪಡಿಸಿದೆ. ಕೆಲವೆಡೆ ತೆಂಗು, ಅಡಿಕೆ, ಬಾಳೆ ತೋಟಗಳಿಗೆ ನೀರು ನುಗ್ಗಿದೆ.  

ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳ ವಿವಿಧೆಡೆ ಹದ ಮಳೆ ಸುರಿಯಿತು. ಮಲೇಬೆನ್ನೂರು ಭಾಗದಲ್ಲಿ  ಬಿರು ಮಳೆ ಸುರಿದಿದ್ದು, ಕೆಲವೆಡೆ ಭತ್ತದ ಗದ್ದೆಗಳು ಚಾಪೆ ಹಾಸಿವೆ. ಗದ್ದೆಗಳಲ್ಲಿ ನೀರು ನಿಂತಿದೆ. ದೇವರಬೆಳಕೆರೆ ಪಿಕಪ್‌ ಡ್ಯಾಮ್‌ನ ಹಿನ್ನೀರಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಸಂಕ್ಲೀಪುರ- ಮುಕ್ತೇನಹಳ್ಳಿ ರಸ್ತೆ ಜಲಾವೃತವಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಲವು ಜಮೀನುಗಳಲ್ಲಿ ನೀರು ನಿಂತಿದೆ. ಕಟಾವಿಗೆ ಬಂದಿದ್ದ ಮೆಕ್ಕೆಜೋಳ ನೆಲಕ್ಕುರುಳಿದೆ. ದೊಡ್ಡಿಗನಹಾಳ್‌, ಜಮ್ಮೇಮನಹಳ್ಳಿ ಬಳಿ ಹಳ್ಳಗಳು ತುಂಬಿ ಹರಿಯುತ್ತಿವೆ. ಜಮ್ಮೇನಹಳ್ಳಿ ಹಳ್ಳದಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ.  

ಸಿರಿಗೆರೆಯಲ್ಲಿ ಬುಧವಾರ ಸಂಜೆ ಸುರಿದ ಮಳೆಗೆ ಜಮ್ಮೇನಹಳ್ಳಿ ಹಳ್ಳ ತುಂಬಿ ಹರಿಯಿತು

ಬಾಗಲಕೋಟೆ ತಾಲ್ಲೂಕಿನ ಶಿರೂರ ಪಟ್ಟಣದಲ್ಲಿ ಸಿಡಿಲು ಬಡಿದು ಇಬ್ಬರು ಕುರಿಗಾಯಿಗಳಿಗೆ ಸುಟ್ಟಗಾಯಗಳಾಗಿವೆ. ಎರಡು ಕುರಿಗಳು ಮೃತಪಟ್ಟಿವೆ. ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಕೆಲಕಾಲ ಗುಡುಗು ಸಹಿತ ಮಳೆಯಾಗಿದೆ

ಕಾರವಾರ, ಭಟ್ಕಳ, ಕುಮಟಾ ಭಾಗದಲ್ಲಿ ತಡರಾತ್ರಿಯ ಬಳಿಕ ಮಳೆ ಆರಂಭವಾಗಿ ನಸುಕಿನವರೆಗೂ ತುಂತುರು ಮಳೆ ಮುಂದುವರೆದಿತ್ತು. ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ಬಹುಪಾಲು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಬೆಳಗಾವಿ ತಾಲ್ಲೂಕು, ಖಾನಾಪುರ, ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಬೈಲಹೊಂಗಲ, ಸವದತ್ತಿ ತಾಲ್ಲೂಕಿನಲ್ಲಿ ಅಲ್ಲಲ್ಲಿ ಮಳೆ ಸುರಿದಿದೆ.

ಧಾರವಾಡ ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಅರ್ಧ ಗಂಟೆ ಮಳೆ ಸುರಿಯಿತು. ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಹಲವೆಡೆ ಸಾಧಾರಣ ಮಳೆಯಾಗಿದೆ. ಕೊಟ್ಟೂರು ತಾಲ್ಲೂಕಿನ ಗಾಣಗಟ್ಟೆ ಮತ್ತು ಕಾಳಾಪುರಗಳಲ್ಲಿ ಒಂದೊಂದು ಮನೆಗಳು ಭಾಗಶಃ ಹಾನಿಗೊಂಡಿವೆ. ಹರಪನಹಳ್ಳಿ ತಾಲ್ಲೂಕಿನ ಹಾರಕನಾಳು ಮತ್ತು ಹಾವನೂರುಗಳಲ್ಲಿ ಒಂದೊಂದು ಮನೆಗಳು ಭಾಗಶಃ ಹಾನಿಗೊಂಡಿವೆ. ಸಿರುಗುಪ್ಪ ಭಾಗದಲ್ಲಿ ಕಟಾವು ಮಾಡಿ ಒಣಗಲು ಹಾಕಿದ ಭತ್ತದ ನಿರ್ವಹಣೆ ರೈತರಿಗೆ ಕಷ್ಟವಾಗಿದೆ. 

ಮಲೇಬೆನ್ನೂರು ಸಮೀಪದ ಬೂದಿಹಾಳು ಹೊರವಲಯದಲ್ಲಿ ಮಳೆಗೆ ಚಾಪೆ ಹಾಸಿರುವ ಭತ್ತದ ಬೆಳೆ

ಹಾಸನಾಂಬೆ ದರ್ಶನಕ್ಕೆ ಮಳೆ ಅಡ್ಡಿ

ಹಾಸನ ಜಿಲ್ಲೆಯಾದ್ಯಂತ ಮಧ್ಯಾಹ್ನದಿಂದ ಗುಡುಗು ಸಹಿತ ಬಿರುಸಿನ ಮಳೆ ಸುರಿಯಿತು. ಜಿಲ್ಲಾಕೇಂದ್ರದಲ್ಲಿ ಮಧ್ಯಾಹ್ನದಿಂದ ಸಂಜೆಯವರೆಗೂ ಮಳೆ ಸುರಿಯಿತು. ಹಾಸನಾಂಬ ದೇವಿಯ ದರ್ಶನಕ್ಕೆ ಬಂದಿರುವ ಭಕ್ತರು ತೊಂದರೆ ಅನುಭವಿಸಿದರು.

ಸಿಬ್ಬಂದಿಯೂ ಮಳೆಯಿಂದ ರಕ್ಷಣೆ ಪಡೆಯಲು ಪರದಾಡಿದರು. ಜಿಲ್ಲೆಯ ನುಗ್ಗೇಹಳ್ಳಿ ಅರಸೀಕೆರೆ ಜಾವಗಲ್‌ ಹಿರೀಸಾವೆ ಚನ್ನರಾಯಪಟ್ಟಣದಲ್ಲಿ ಉತ್ತಮ ಮಳೆಯಾಗಿದೆ. ಈಗಾಗಲೇ ಜಿಲ್ಲೆಯ ಬಹುತೇಕ ಬೆಳೆ ನಷ್ಟವಾಗಿದ್ದು ಇದೀಗ ಸುರಿಯುತ್ತಿರುವ ಮಳೆಯಿಂದ ಅಳಿದುಳಿದ ಬೆಳೆಗಳಿಗೆ ಆಸರೆಯಾದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.