ADVERTISEMENT

ಎಲ್ಲ ಬೆಳೆಗಳಿಗೂ ಕಡ್ಡಾಯ ವಿಮೆ: ಸಿ.ಟಿ.ರವಿ ಆಗ್ರಹ

ಸರ್ಕಾರದ ಅಂದಾಜಿಗಿಂತ ಹೆಚ್ಚು ಹಾನಿ: ಕೃಷ್ಣಬೈರೇಗೌಡ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 21:39 IST
Last Updated 16 ಡಿಸೆಂಬರ್ 2021, 21:39 IST
   

ಬೆಳಗಾವಿ(ಸುವರ್ಣ ವಿಧಾನಸೌಧ): ಎಲ್ಲ ಬೆಳೆಗಳಿಗೂ ವಿಮೆ ಕಡ್ಡಾಯ ಮಾಡುವುದರ ಜತೆಗೆ ಅದರ ವಿಮಾ ಕಂತುಗಳನ್ನೂ ಸರ್ಕಾರವೇ ಪಾವತಿಸಬೇಕು ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಸರ್ಕಾರವನ್ನು ಆಗ್ರಹಿಸಿದರು.

ವಿಧಾನಸಭೆಯಲ್ಲಿ ಗುರುವಾರ ಅತಿವೃಷ್ಟಿಯ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ ರೈತರ ಬದುಕು ಗಾಳಿಗೆ ಒಡ್ಡಿದ ದೀಪದಂತೆ ಆಗಿದೆ. ಮಲೆನಾಡು ಭಾಗದಲ್ಲಿ ಕಾಫಿ, ಮೆಣಸು, ಅಡಿಕೆ, ಏಲಕ್ಕಿ ಬೆಳೆಗಳು ನಾಶವಾಗಿವೆ ಎಂದು ಸರ್ಕಾರದ ಗಮನ ಸೆಳೆದರು.

ಕಾಫಿ ಬೆಳೆಗಾರರಿಗೆ ಎನ್‌ಡಿಆರ್‌ಎಫ್‌ ಅಡಿ ಎರಡು ಹೆಕ್ಟೇರ್‌ಗೆ ₹18 ಸಾವಿರ ಪರಿಹಾರ ನೀಡಲಾಗುತ್ತದೆ. ಇದು ಏನೇನೂ ಸಾಲದು. ಆದ್ದರಿಂದ ಕಾಫಿಯನ್ನು ಫಸಲ್‌ ಭಿಮಾ ಯೋಜನೆ ವ್ಯಾಪ್ತಿ ಅಡಿ ತರಬೇಕು. ಮತ್ತೊಂದು ಕಡೆ ಟೊಮೇಟೋ ಬೆಳೆದವರೂ ಕಣ್ಣೀರು ಹಾಕುವ ಸ್ಥಿತಿ ಬಂದಿದೆ. ಒಂದು ಕಿ.ಲೋ ಟೊಮೇಟೊಗೆ ₹104 ಕೊಟ್ಟು ಗ್ರಾಹಕ ಖರೀದಿಸುತ್ತಾನೆ. ಆದರೆ ರೈತನಿಗೆ ಕೇವಲ ₹6 ಸಿಗುತ್ತದೆ. ಉಳಿದ ₹98 ಎಲ್ಲಿ ಹೋಗುತ್ತಿದೆ ಎಂದು ರವಿ ಪ್ರಶ್ನಿಸಿದರು.

ADVERTISEMENT

ರಾಜ್ಯದಲ್ಲಿ ಬೆಳೆ ನೀತಿಯನ್ನು ರೂಪಿಸುವುದರ ಜತೆಗೆ ಬೆಲೆ ನೀತಿಯನ್ನೂ ಜಾರಿಗೆ ತರಬೇಕು ಎಂದೂ ಅವರು ಸಲಹೆ ನೀಡಿದರು.

ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಮಾತನಾಡಿ, ಕೋಲಾರ ಭಾಗದಲ್ಲಿ ಮಳೆಯಿಂದ ಇದೇ ಮೊದಲ ಬಾರಿಗೆ ಎಷ್ಟೋ ಕೆರೆಗಳು ತುಂಬಿವೆ. ಬಹಳಷ್ಟು ಕರೆಗಳ ದಂಡೆಗಳು ಒಡೆದು ಹೋಗಿವೆ. ಮತ್ತೊಂದೆಡೆ, ಹೊಲಗಳಲ್ಲಿ ನೀರು ನಿಂತು ಬೆಳೆಗಳು ಹಾಳಾಗಿ ಹೋಗಿವೆ. ಆದರೆ ಬೆಳೆ ನಷ್ಟದ ಪ್ರಮಾಣವನ್ನು ಸರಿಯಾಗಿ ಅಂದಾಜು ಮಾಡುವ ಕೆಲಸ ಆಗುತ್ತಿಲ್ಲ ಎಂದು ಹೇಳಿದರು.

ಸರ್ಕಾರ ಮಾಡಿರುವ ಅಂದಾಜಿಗಿಂತ ಹೆಚ್ಚು ಪ್ರಮಾಣದಲ್ಲಿ ಹಾನಿ ಆಗಿದೆ. ಆದ್ದರಿಂದ ಸರ್ಕಾರ ಮತ್ತೊಮ್ಮೆ ಸರಿಯಾದ ರೀತಿಯಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಚರ್ಚೆಯಲ್ಲಿ ಬಿಜೆಪಿಯ ಸಿದ್ದು ಸವದಿ, ಗೂಳಿಹಟ್ಟಿ ಶೇಖರ್‌, ಕಾಂಗ್ರೆಸ್‌ನ ರೂಪಕಲಾ, ನಂಜೇಗೌಡ, ಈಶ್ವರ ಖಂಡ್ರೆ, ಅಜಯ್‌ಸಿಂಗ್‌, ಜೆಡಿಎಸ್‌ನ ಸುರೇಶ್‌ ಗೌಡ, ಕೆ.ಮಹದೇವ್, ಅಶ್ವಿನ್‌, ಪಕ್ಷೇತರ ಸದಸ್ಯ ಶರತ್‌ ಬಚ್ಚೇಗೌಡ ಮತ್ತು ಇತರ ಸದಸ್ಯರು ಮಾತನಾಡಿದರು.

‘ಗೋಮಾಂಸ ರಫ್ತು: ಪರವಾನಗಿ ರದ್ದು ಮಾಡಿ’
ರಾಜ್ಯದಿಂದ ಗೋಮಾಂಸ ರಫ್ತು ಮಾಡುವ ಕಂಪನಿಗಳ ಪರವಾನಗಿ ರದ್ದು ಮಾಡಿ ಎಂದು ಕಾಂಗ್ರೆಸ್‌ನ ಯು.ಟಿ.ಖಾದರ್‌ ಸರ್ಕಾರವನ್ನು ಆಗ್ರಹಿಸಿದರು.

‘ಎಲ್ಲಿಯವರೆಗೆ ಗೋಮಾಂಸ ರಫ್ತುದಾರರ ಲೈಸೆನ್ಸ್‌ ರದ್ದು ಮಾಡುವುದಿಲ್ಲವೋ ಅಲ್ಲಿಯವರೆಗೆ, ಗೋಕಳ್ಳರು ಹಸುಗಳನ್ನು ಕದ್ದು ಅವರಿಗೆ ಪೂರೈಕೆ ಮಾಡುವುದು ನಿಲ್ಲುವುದಿಲ್ಲ’ ಎಂದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ಬಳಿಕ, ಎಲ್ಲೂ ಸರಿಯಾದ ಗೋಶಾಲೆಗಳನ್ನು ತೆರೆದಿಲ್ಲ. ಸರ್ಕಾರದ ಕೈಯಲ್ಲಿ ಆ ಕೆಲಸ ಸಾಧ್ಯವಾಗದೇ ಇದ್ದರೆ, ಖಾಸಗಿಯಾಗಿ ಗೋಶಾಲೆ ನಡೆಸುವವರಿಗೆ ಮೂರು ಪಟ್ಟು ಹೆಚ್ಚಿನ ಅನುದಾನವನ್ನಾದರೂ ನೀಡಿ ಎಂದು ಒತ್ತಾಯಿಸಿದರು.

ದಕ್ಷಿಣ ಕನ್ನಡದಲ್ಲಿ ಮಳೆಯಿಂದಾಗಿ ಭತ್ತ, ತೆಂಗು, ಅಡಿಕೆ ಬೆಳೆಗಳು ನಾಶವಾಗಿವೆ. ಅಡಿಕೆ ಕೊಳೆ ರೋಗಕ್ಕೆ ಔಷಧವನ್ನು ಕಂಡು ಹಿಡಿಯಬೇಕು. ಮಳೆಗಾಲದಲ್ಲಿ ನೇತ್ರಾವತಿ ನದಿಗೆ ಸಮುದ್ರದ ಉಪ್ಪು ನೀರು ನುಗ್ಗಿ ಸುತ್ತಮುತ್ತಲಿನ ಕೃಷಿ ಭೂಮಿಯಲ್ಲಿ ಸಾಗುವಳಿ ನಡೆಸಲು ಸಾಧ್ಯವಾಗುತ್ತಿಲ್ಲ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಖಾದರ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.