ಬೆಳಗಾವಿ (ಸುವರ್ಣಸೌಧ): ವಿರೋಧಪಕ್ಷದ ನಾಯಕ ಆರ್.ಅಶೋಕ ಅವರು ವಿಧಾನಸಭೆಯಲ್ಲಿ ಶುಕ್ರವಾರ ವಕ್ಫ್ ವಿಷಯವನ್ನು ಪ್ರಸ್ತಾಪಿಸಲು ನಿಂತಾಗ ಕಾಂಗ್ರೆಸ್ ಸದಸ್ಯರು ಶಾಸಕ ಮುನಿರತ್ನ ಪ್ರಕರಣವನ್ನು ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂದು ಗದ್ದಲ ಎಬ್ಬಿಸಿದಾಗ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ, ಜಾತಿ ನಿಂದನೆ, ಎಚ್‌ಐವಿ ರೋಗ ಸೋಂಕಿಸಿ,ವಿವಿಧ ಗಣ್ಯರ ಜೀವಕ್ಕೆ ಅಪಾಯ ತರುವ ಪ್ರಯತ್ನ ಮಾಡಿದ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದು, ಗದ್ದಲ ಎಬ್ಬಿಸಿದರು. ಬಿಜೆಪಿ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ, ‘ಕಾಂಗ್ರೆಸ್‌ನವರು ದಾಂದಲೆ ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಆಡಳಿತ ಪಕ್ಷಕ್ಕೆ ಕಲಾಪ ನಡೆಸುವ ಯೋಗ್ಯತೆ ಇಲ್ಲ. ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.
ಕಾಂಗ್ರೆಸ್‌ನ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ‘ಅಶೋಕ ಅವರೇ ನಿಮಗೇ ಕಾಯಿಲೆ ಹಬ್ಬಿಸಲು ಮುನಿರತ್ನ ಸಂಚು ನಡೆಸಿದ್ದಾರೆ. ಅತ್ಯಾಚಾರಿ ವಿರುದ್ಧ ಈ ಸಭೆಯಲ್ಲಿ ಚರ್ಚೆ ಆಗಬೇಕು’ ಎಂದು ಹೇಳಿದರು. ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪದೇ ಪದೇ ಎಚ್ಚರಿಕೆ ನೀಡಿದರೂ ಕಾಂಗ್ರೆಸ್ ಸದಸ್ಯರು ಕೇಳಲಿಲ್ಲ.
ಈ ಹಂತದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ಮಳೆಯಿಂದ ಆದ ಹಾನಿಯ ಬಗ್ಗೆ ಉತ್ತರ ನೀಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದಾಗ ಸಭಾಧ್ಯಕ್ಷ ಯು.ಟಿ.ಖಾದರ್ ಅದಕ್ಕೆ ಅವಕಾಶ ನೀಡಿದರು.
ತಮಗೆ ಅವಕಾಶ ನೀಡದಿರುವುದನ್ನು ಪ್ರತಿಭಟಿಸಿ ಅಶೋಕ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.