ಮಂಡ್ಯ: ಕುರಿಗಾಹಿಯಾಗಿದ್ದ ಕಲ್ಮನೆ ಕಾಮೇಗೌಡರು ತಮ್ಮ ಸರ್ವ ಸಂಪಾದನೆಯನ್ನು ಪ್ರಕೃತಿ ಸಂರಕ್ಷಣೆಗಾಗಿ ಅರ್ಪಿಸಿದ್ದರು. ದಾಸನದೊಡ್ಡಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಕುಂದನಿ ಬೆಟ್ಟದ ಮೇಲೆ 15 ಕಟ್ಟೆ ತೋಡಿಸಿದ್ದರು, ನೂರಾರು ಸಸಿ ನೆಟ್ಟು ಪೋಷಿಸಿದ್ದರು. ಅಂತ್ಯಕಾಲದಲ್ಲಿ ಸರ್ಕಾರಿ ಸೌಲಭ್ಯಕ್ಕಾಗಿ ಪ್ರಯತ್ನಿಸಿದ್ದ ಅವರು ಅದಕ್ಕಾಗಿ ಹೋರಾಟ ನಡೆಸಿದ್ದರು, ಈಗ ಅವರು ಹೋರಾಡುತ್ತಲೇ ಪ್ರಾಣಬಿಟ್ಟಿದ್ದಾರೆ.
‘ಸೌಲಭ್ಯ ಕೊಡಿ’ ಎಂದು ಕಾಮೇಗೌಡರು ಸರ್ಕಾರಕ್ಕೆ ಎಂದೂ ಅರ್ಜಿ ಸಲ್ಲಿಸಿದವರಲ್ಲ. ಸರ್ಕಾರವೇ ಗುರುತಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿತ್ತು, ಸಂಘಸಂಸ್ಥೆಗಳು ಪ್ರಶಸ್ತಿಗಳ ಮಳೆಗರೆದಿದ್ದವು, ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ ಸರಣಿಯಲ್ಲಿ ಮನಸಾರೆ ಹೊಗಳಿಸಿದ್ದರು. ಆಗ ಬಿ.ಎಸ್.ಯಡಿಯೂರಪ್ಪ ಸರ್ಕಾರ ಸೌಲಭ್ಯ ನೀಡುವುದಾಗಿ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುವಂತೆ ಕಾಮೇಗೌಡರು ಕಳೆದೆರಡು ವರ್ಷಗಳಿಂದ ಹೋರಾಟ ನಡೆಸಿದ್ದರು.
2020, ಜೂನ್ ತಿಂಗಳಲ್ಲಿ ನಡೆದ ‘ಮನ್ ಕಿ ಬಾತ್’ 66ನೇ ಸರಣಿಯಲ್ಲಿ ಪ್ರಧಾನಿ ಕಾಮೇಗೌಡ ಸಾಧನೆಗಳನ್ನು ಪ್ರಸ್ತಾಪಿಸಿದ್ದರು. ಇದಾದ ನಂತರ ಕಾಮೇಗೌಡರು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದರು. ಅವರ ಸಾಧನೆ ಕುರಿತು 14ಕ್ಕೂ ಹೆಚ್ಚು ದೇಶಗಳ ಮಾಧ್ಯಮಗಳು ವಿಶೇಷ ವರದಿ ಮಾಡಿದ್ದವು. ಕೇಂದ್ರ ಜಲಸಂಪನ್ಮೂಲ ಇಲಾಖೆ ಸಚಿವರಾಗಿದ್ದ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ ವಿಡಿಯೊ ಕರೆ ಮಾಡಿ ಅಭಿನಂದಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾಮೇಗೌಡರು ನಿರ್ಮಿಸಿರುವ ಕಟ್ಟೆಗಳ ಅಭಿವೃದ್ಧಿಗೆ ಹಣ ಬಿಡುಗಡೆ, ಅವರ ಒಬ್ಬ ಮಗನಿಗೆ ಸರ್ಕಾರಿ ನೌಕರಿ, ಒಂದು ಮನೆ ಕೊಡಿಸುವ ಭರವಸೆ ನೀಡಿದ್ದರು. ಸರ್ಕಾರವೇ ಸ್ವಯಂಪ್ರೇರಿತವಾಗಿ ಕಾಮೇಗೌಡರಿಗೆ ಸೌಲಭ್ಯ ನೀಡುವ ಭರವಸೆ ನೀಡಿತ್ತು. ಭರವಸೆ ಈಡೇರಿಸುವಂತೆ ಕಾಮೇಗೌಡರು ಜಿಲ್ಲಾಧಿಕಾರಿ ಕಚೇರಿಗೆ ಎಡತಾಕಿದ್ದರು, ಆದರೆ ಭರವಸೆಗಳು ಭರವಸೆಗಳಾಗಿಯೇ ಉಳಿದಿದ್ದವು.
ವರದಿ ನೀಡದ ಜಿಲ್ಲಾಧಿಕಾರಿ: ಕಾಮೇಗೌಡರ ಮತ್ತು ಅವರ ಕುಟುಂಬ ಸದಸ್ಯರ ವಾರ್ಷಿಕ ಆದಾಯ ಸೇರಿದಂತೆ ಮೂಲ ಸೌಲಭ್ಯಗಳ ವಿವರ ಕುರಿತ ವರದಿ ನೀಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಮಂಡ್ಯ ಜಿಲ್ಲಾಧಿಕಾರಿಗೆ 2020ರಿಂದ ಇಲ್ಲಿಯವರೆಗೆ 6 ಬಾರಿ ಪತ್ರ ಬರೆದಿದೆ.
ಆದರೆ, ಜಿಲ್ಲಾಡಳಿತ ಸರ್ಕಾರಕ್ಕೆ ಮಾಹಿತಿಯನ್ನೇ ಕಳಿಸಿಲ್ಲ ಎಂದು ಕಾಮೇಗೌಡರು ಆರೋಪಿಸಿದ್ದರು. ಜಿಲ್ಲಾಡಳಿತದ ನಡೆಗೆಯಿಂದ ಅವರು ತೀರಾ ನೊಂದಿದ್ದರು ಎಂದು ಕುಟುಂಬ ಸದಸ್ಯರು ಆರೋಪಿಸುತ್ತಾರೆ.
‘ವಾರದ ಹಿಂದಷ್ಟೇ ನಮ್ಮ ತಂದೆ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಸೌಲಭ್ಯ ಕೇಳಿದ್ದರು. ನನಗೆ ಕೆಲಸ ಕೊಡಿಸುವ ವಿಚಾರವನ್ನೂ ಕೇಳಿದ್ದರು. ಆದರೆ ಜಿಲ್ಲಾಡಳಿತ ಯಾವುದೇ ಭರವಸೆ ಈಡೇರಿಸಲಿಲ್ಲ’ ಎಂದು ಕಾಮೇಗೌಡರ ಪುತ್ರ ಕೃಷ್ಣ ನೋವು ವ್ಯಕ್ತಪಡಿಸಿದರು.
‘ಮುಗ್ಧತೆಯಿಂದ ಬದುಕಿದ್ದ ಕಾಮೇಗೌಡರು ತಮ್ಮ ಬದುಕನ್ನು ಕುಂದನಿ ಬೆಟ್ಟಕ್ಕೆ ಅರ್ಪಿಸಿದ್ದರು. ಅವರ ಸೇವೆಗೆ ಪ್ರತಿಫಲವಾಗಿ ಸರ್ಕಾರ ಅವರಿಗೆ ಏನನ್ನೂ ಕೊಡಲಿಲ್ಲ. ಈಗಲಾದರೂ ಅವರ ಕುಟುಂಬಕ್ಕೆ ಸರ್ಕಾರ ಆಸರೆಯಾಗಿ ನಿಲ್ಲಬೇಕು. ಅವರು ಕಟ್ಟಿಸಿರುವ ಕಟ್ಟೆಗಳನ್ನು ಉಳಿಸುವ ಕೆಲಸ ಮಾಡಬೇಕು’ ಎಂದು ಪರಿಸರ ಪ್ರೇಮಿ ಡಾ.ಎನ್.ಎಸ್.ಶಂಕರೇಗೌಡ ಒತ್ತಾಯಿಸಿದರು.
‘ಕಾಮೇಗೌಡರ ಕುಟುಂಬ ಸದಸ್ಯರಿಗೆ ಸೌಲಭ್ಯ ನೀಡುವ ಬಗ್ಗೆ ಪರಿಶೀಲಿಸಲಾಗುವುದು’ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ತಿಳಿಸಿದರು.
ತುಂಬಿ ತುಳುಕುತ್ತಿವೆ ಕಟ್ಟೆಗಳು
ಕುಂದನಿ ಬೆಟ್ಟದ ಮೇಲೆ ಕಲ್ಮನೆ ಕಾಮೇಗೌಡ ಅವರು ಕಟ್ಟಿಸಿರುವ ಎಲ್ಲಾ 15 ಕಟ್ಟೆಗಳು ತುಂಬಿ ತುಳುಕುತ್ತಿವೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಎಲ್ಲಾ ಕಟ್ಟೆಗಳು ಉಕ್ಕಿ ಹರಿಯುತ್ತಿವೆ. ಒಂದು ಕಟ್ಟೆಯಿಂದ ಇನ್ನೊಂದು ಕಟ್ಟೆಗೆ ನೀರು ಹರಿದು ಹೋಗುತ್ತಿದೆ.
ಬೆಟ್ಟದ ತಟದಲ್ಲಿ ನೀರು ನಿರಂತರವಾಗಿ ಹರಿಯುತ್ತಿದೆ. ಬೆಟ್ಟದ ಕೆಳಗಿನ ಕೃಷಿ ಭೂಮಿ ಹಸಿರಿನಿಂದ ನಳನಳಿಸುತ್ತಿದೆ. ಆ ಭಾಗದಲ್ಲಿ ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಕಾಮೇಗೌಡರು ನೆಟ್ಟಿರುವ ಸಸಿಗಳು ಕೂಡ ಹಸಿರು ಕೋಟೆಯನ್ನೇ ನಿರ್ಮಾಣ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.