ADVERTISEMENT

ಕರಾವಳಿಯಲ್ಲಿ ಮೂರು ದಿನ ಭಾರಿ ಮಳೆ

ದಕ್ಷಿಣ ಕನ್ನಡ ಸೇರಿ ಮೂರು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 16:10 IST
Last Updated 7 ಜುಲೈ 2022, 16:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ತೀವ್ರತೆ ಪಡೆದಿದ್ದು, ಕರಾವಳಿ ಕರ್ನಾಟಕದ ವಿವಿಧೆಡೆ ಮುಂದಿನ ಮೂರು ದಿನಗಳು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿಯ ಕೆಲವೆಡೆ ಶುಕ್ರವಾರಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಗೆ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗೆ ‘ಆರೆಂಜ್ ಅಲರ್ಟ್’, ಹಾಸನ, ಹಾವೇರಿ, ಧಾರವಾಡ, ಬೆಳಗಾವಿ ಹಾಗೂ ಕಲಬುರ್ಗಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳು ಮಳೆ ಮುಂದುವರೆಯಲಿದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿಯಲ್ಲಿ ಗಂಟೆಗೆ ಗರಿಷ್ಠ 75 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ಮುಂದಿನ 48 ಗಂಟೆಗಳು ಈ ವೇಗವು 40ರಿಂದ 50 ಕಿ.ಮೀ ಇರಲಿದೆ. ಗರಿಷ್ಠ 65 ಕಿ.ಮೀ ತಲುಪುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ.

ADVERTISEMENT

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಅಧಿಕ ಮಳೆ–ಎಲ್ಲಿ, ಎಷ್ಟು?: ರಾಜ್ಯದ ಬಹುತೇಕ ಸ್ಥಳಗಳಲ್ಲಿ ಗುರುವಾರ ಮಳೆಯಾಗಿದೆ. ಕರಾವಳಿ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿದೆ. ಗುರುವಾರ ಬೆಳಿಗ್ಗೆ 8.30ರ ವೇಳೆಗೆ ಹಿಂದಿನ 24 ಗಂಟೆಯ ಅವಧಿಯಲ್ಲಿ ಉಡುಪಿಯ ಕೊಲ್ಲೂರಿನಲ್ಲಿ ಗರಿಷ್ಠಮಳೆಯಾಗಿದೆ. ಅಲ್ಲಿ 21 ಸೆಂ.ಮೀ. ಮಳೆ ಸುರಿದಿದೆ.

ಸಿದ್ದಾಪುರ (ಉಡುಪಿ) 18, ತುಮರಿ 17, ಲಿಂಗನಮಕ್ಕಿ (ಶಿವಮೊಗ್ಗ) 16, ಕೊಪ್ಪ (ಚಿಕ್ಕಮಗಳೂರು) 15, ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) 14, ಅಗ್ರಹಾರ ಕೋಣಂದೂರು (ಶಿವಮೊಗ್ಗ), ಶೃಂಗೇರಿಯಲ್ಲಿ (ಚಿಕ್ಕಮಗಳೂರು) ತಲಾ 13, ಯಲ್ಲಾಪುರ, ಶಿರಾಲಿ, ಕುಮಟಾ, ಮಂಕಿ, ಹೊನ್ನಾವರ (ಉತ್ತರ ಕನ್ನಡ) ಹಾಗೂ ಭಾಗಮಂಡಲದಲ್ಲಿ (ಕೊಡಗು) ತಲಾ 12 ಸೆಂ.ಮೀ. ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.