ADVERTISEMENT

ಕಾರವಾರದಲ್ಲಿ ಕಡಲು 175 ಮೀಟರ್ ಹಿಂದಕ್ಕೆ!

ಕಡಲಜೀವಿಗಳಿಗೆ ಅಪಾಯಕಾರಿ ವಿದ್ಯಮಾನ: ಸಮುದ್ರ ಜೀವಶಾಸ್ತ್ರಜ್ಞರ ಕಳವಳ

ಸದಾಶಿವ ಎಂ.ಎಸ್‌.
Published 14 ಡಿಸೆಂಬರ್ 2019, 20:00 IST
Last Updated 14 ಡಿಸೆಂಬರ್ 2019, 20:00 IST
ಕಾರವಾರ ಕಡಲತೀರದ 1932ರ ನಕ್ಷೆ.
ಕಾರವಾರ ಕಡಲತೀರದ 1932ರ ನಕ್ಷೆ.   

ಕಾರವಾರ: 1932ರ ನಂತರ ಅರಬ್ಬಿ ಸಮುದ್ರವು 175 ಮೀಟರ್‌ಗಳಷ್ಟು ಹಿಂದೆ ಸರಿದು ಭೂಮಿಗೆ ಮರಳನ್ನು ತಂದು ಸುರಿದಿದೆ. ಇದರ ಪರಿಣಾಮ ಕಾರವಾರ ನಗರ ಮತ್ತು ಸುತ್ತಮುತ್ತ ಸುಮಾರು 150 ಹೆಕ್ಟೇರ್‌ಗಳಷ್ಟು ಭೂ ಪ್ರದೇಶ ಸೃಷ್ಟಿಯಾಗಿದೆ. ಈ ವಿದ್ಯಮಾನ ಕಡಲಜೀವಿಗಳಿಗೆ ಅಪಾಯಕಾರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ದೇಶದ ಪಶ್ಚಿಮ ಕರಾವಳಿಯಲ್ಲಿ ಭೂ ಪ್ರದೇಶದ ಸ್ಥಿತಿಗತಿಕುರಿತು ನಡೆದ ಅಧ್ಯಯನದ ಬಗ್ಗೆ, ಭಾರತೀಯ ವಿಜ್ಞಾನ ಸಂಸ್ಥೆಯ ಕುಮಟಾದ ಸಂಶೋಧನಾ ಕೇಂದ್ರದ ಕಡಲ ಜೀವಶಾಸ್ತ್ರಜ್ಞ ಡಾ.ಪ್ರಕಾಶ ಮೇಸ್ತ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪ್ರಪಂಚದ ಯಾವುದೋ ಮೂಲೆಯಲ್ಲಿ ಸಮುದ್ರದಲ್ಲಿ ಕರಗಿದ ಮಣ್ಣಿನಲ್ಲಿದ್ದ ಮರಳನ್ನುಅಲೆಗಳುಇನ್ನೆಲ್ಲಿಗೋ ತಂದು ದಡಕ್ಕೆ ಎಸೆಯುತ್ತವೆ. ಸಮುದ್ರದ ಹುಟ್ಟಿನಿಂದಲೂ ಈ ಪ್ರಕ್ರಿಯೆ ಜಾರಿಯಲ್ಲಿದ್ದರೂಈಚಿನ ವರ್ಷಗಳಲ್ಲಿ ಅಧಿಕ ಪ್ರಮಾಣದಲ್ಲಿ ನಡೆಯುತ್ತಿದೆ’ ಎಂದರು.

ADVERTISEMENT

‘ರಾಜ್ಯದ ಕರಾವಳಿಯ ಬಹುತೇಕ ಕಡೆಗಳಲ್ಲಿ ಕಡಲ್ಕೊರೆತದ ಆತಂಕವಿದೆ. ವಾಸ್ತವದಲ್ಲಿ ಉಳ್ಳಾಲ ಮತ್ತು ಹೊನ್ನಾವರದ ಕಾಸರಕೋಡು ಭಾಗದಲ್ಲಿ ಮಾತ್ರ ಇದು ಪ್ರಾಕೃತಿಕವಾಗಿದೆ. ಉಳಿದೆಡೆ, ಈಗಾಗಲೇ ಸೃಷ್ಟಿಯಾದ ಭೂಭಾಗವೇ ಅಲೆಗಳ ಹೊಡೆತಕ್ಕೆ ಕರಗುತ್ತಿದೆಯೇ ಹೊರತು, ಸಹಜವಾದಕಡಲ್ಕೊರೆತವಲ್ಲ’ ಎಂದರು.

‘ಹೆಚ್ಚಾಗಿರುವ ಭೂ ಪ್ರದೇಶವನ್ನು ಸರ್ವೆಆಫ್ ಇಂಡಿಯಾದವರು ದಾಖಲಿಸಿಕೊಳ್ಳಬೇಕು. ಆ ಪ್ರದೇಶಕ್ಕೆ ಸರ್ವೆನಂಬರ್ ಕೊಡಬೇಕು. ಆದರೆ, ಈ ಕೆಲಸ ಆಗುತ್ತಿಲ್ಲ. ಯಾವುದೇ ಕಾಮಗಾರಿ ಮಂಜೂರು ಮಾಡಲು ಸರ್ವೆ ನಂಬರ್ ಅತ್ಯಗತ್ಯ’ ಎಂದುಅವರು ತಿಳಿಸಿದರು.

ಪರಿಣಾಮವೇನು?: ಸಮುದ್ರ ಹಿಂದೆ ಸರಿದು ‌ಭೂ ಪ್ರದೇಶ ಹೆಚ್ಚುವುದರಿಂದ ಸಮುದ್ರದ ಆಹಾರ ಸರಪಳಿಯಲ್ಲಿ ವ್ಯತ್ಯಾಸವಾಗುತ್ತದೆ. ಸೂಕ್ಷ್ಮ, ಅತಿ ಸೂಕ್ಷ್ಮ ಜೀವಿಗಳು ನಾಶವಾಗಿ ಮತ್ಸ್ಯಸಂಕುಲಕ್ಕೆ ಆಹಾರದ ಕೊರತೆಯಾಗುತ್ತದೆ. ಇದರಿಂದ ಲೆಪ್ಪೆ, ತೊರಕೆ ಮೀನುಗಳು, ಸಮುದ್ರ ಏಡಿ ಮುಂತಾದ ಜಲಚರಗಳು ನಶಿಸುತ್ತವೆ ಎಂದು ಹೇಳಿದರು.

‘ಅಲೆ ತಡೆಗೋಡೆ, ಬಂದರು ವಿಸ್ತರಣೆಯಂತಹ ಬೃಹತ್ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಲು ಸಮುದ್ರದಾಳಕ್ಕೆದೊಡ್ಡ ಕಲ್ಲುಗಳನ್ನು ಸುರಿಯಲಾಗುತ್ತದೆ. ಆಗ ಜಲಚರಗಳ ನೈಸರ್ಗಿಕ ವಾಸಸ್ಥಾನ ಮುಚ್ಚಿಹೋಗುತ್ತದೆ. ಕಾರವಾರದ ಕಡಲತೀರವೂ ಇದೇ ಅಪಾಯ ಎದುರಿಸುತ್ತಿದೆ. ಒಂದೆಡೆ ಸೀಬರ್ಡ್ ನೌಕಾನೆಲೆಯ ವಿಸ್ತರಣೆ ನಡೆಯುತ್ತಿದ್ದರೆ, ಮತ್ತೊಂದೆಡೆ ವಾಣಿಜ್ಯ ಬಂದರಿನ ವಿಸ್ತರಣೆಗೆ ಸಿದ್ಧತೆ ನಡೆಯುತ್ತಿದೆ. ಇದು ಜಲಚರಗಳಿಗೆ, ಅವುಗಳನ್ನು ಅವಲಂಬಿಸಿರುವ ಮನುಷ್ಯರಿಗೆ ತೊಂದರೆ ತರಬಲ್ಲದು’ ಎಂದು ಅವರು ಎಚ್ಚರಿಸಿದರು.

ಅಧ್ಯಯನ ಹೇಗೆ?
‘1932ರಲ್ಲಿ ಬ್ರಿಟಿಷರು ಮುದ್ರಿಸಿದ ನಕ್ಷೆಗಳನ್ನು(ಟೊಪೊ ಶೀಟ್‌),1975ರಲ್ಲಿ ಭಾರತ ಸರ್ಕಾರವುಪರಿಷ್ಕರಿಸಿತು. ಅವುಗಳನ್ನು ಹಾಗೂಈಗಿನ ನಕ್ಷೆಗಳನ್ನು ಜಾಗತಿಕ ಸ್ಥಾನಿಕ ವ್ಯವಸ್ಥೆಯ (ಜಿ.ಪಿ.ಎಸ್) ಮೂಲಕ ಅಧ್ಯಯನ ಮಾಡಿದಾಗ ಭೂ ಪ್ರದೇಶದಲ್ಲಿ ಆಗಿರುವ ವ್ಯತ್ಯಾಸ ತಿಳಿಯುತ್ತದೆ’ ಎಂದು ಡಾ.ಪ್ರಕಾಶ್ ಮೇಸ್ತ ವಿವರಿಸಿದರು.

‘ಕಾರವಾರದ ಅಲಿಗದ್ದಾದಿಂದ ಕಾಳಿ ನದಿಯವರೆಗೆ ಸುಮಾರು ಮೂರು ಕಿ.ಮೀ ವ್ಯಾಪ್ತಿಯಲ್ಲೇ ಇಷ್ಟೊಂದು ಪರಿಣಾಮವಾಗಿದ್ದರೆ, ಜಗತ್ತಿನಾದ್ಯಂತ ಇನ್ನೂ ಅಧಿಕವಾಗಿರುತ್ತದೆ’ ಎಂದು ಹೇಳಿದರು.

ಡಾ.ಪ್ರಕಾಶ ಮೇಸ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.