ADVERTISEMENT

ಕೆಎಎಸ್‌ ಅಧಿಕಾರಿ ಸುಧಾ ಆಪ್ತೆಯ ಮನೆಯಲ್ಲಿ 3.5 ಕೆ.ಜಿ ಚಿನ್ನ ಜಪ್ತಿ

3.5 ಕೆ.ಜಿ ಚಿನ್ನ, ₹ 250 ಕೋಟಿ ಮೌಲ್ಯದ ಆಸ್ತಿ ದಾಖಲೆ ಪತ್ರಗಳು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 20:53 IST
Last Updated 8 ನವೆಂಬರ್ 2020, 20:53 IST
ಚಿನ್ನ–ಸಾಂದರ್ಭಿಕ ಚಿತ್ರ
ಚಿನ್ನ–ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೆಎಎಸ್ ಅಧಿಕಾರಿ ಡಾ.ಬಿ.ಸುಧಾ ಅವರ ಆಪ್ತರು ಎನ್ನಲಾದ ರೇಣುಕಾ ಚಂದ್ರಶೇಖರ್‌ ಮನೆಯಲ್ಲೂ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶೋಧ ನಡೆಸಿದ್ದು, 3.5 ಕೆ.ಜಿ ಚಿನ್ನ ಜಪ್ತಿ ಮಾಡಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರ ಆರೋಪದಡಿ ನ್ಯಾಯಾಲಯದ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿ, ಸುಧಾ ಅವರ ಮನೆ, ಕಚೇರಿ ಹಾಗೂ ಪರಿಚಯಸ್ಥರ ಮನೆಗಳ ಮೇಲೆ ಶನಿವಾರ ಏಕಕಾಲದಲ್ಲಿ ದಾಳಿ ಮಾಡಿತ್ತು.
ಪ್ರತ್ಯೇಕ ತಂಡಗಳು ದಾಳಿ ಮಾಹಿತಿಯನ್ನು ಒಟ್ಟುಗೊಡಿಸಿ ತನಿಖಾಧಿಕಾರಿಗೆ ಒಪ್ಪಿಸಿವೆ.

‘ಬಳ್ಳಾರಿ ರಸ್ತೆಯಲ್ಲಿರುವ ಬ್ಯಾಟರಾಯನಪುರದ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ರೇಣುಕಾ ವಾಸವಿದ್ದಾರೆ’ ಎಂದು ಎಸಿಬಿ ಮೂಲಗಳು ಹೇಳಿವೆ.

ADVERTISEMENT

‘ಅವರ ಪತಿ ಚಂದ್ರಶೇಖರ್, ನಿವೃತ್ತ ಡಿವೈಎಸ್ಪಿ. ಸುಧಾ ಅವರ ಆಪ್ತರಾಗಿದ್ದ ರೇಣುಕಾ, ಹಲವು ವ್ಯವಹಾರಗಳಲ್ಲಿ ಪಾಲುದಾರರಾಗಿದ್ದರು. ಈ ಸಂಬಂಧ ದಾಖಲೆಗಳು ಸಿಕ್ಕಿವೆ’ ಎಂದು ಹೇಳಿವೆ.

‘ರೇಣುಕಾ ಅವರಿಗೆ ಸುಧಾ ಅವರು ಹಲವು ಬಾರಿ ಹಣ ಮತ್ತು ಚಿನ್ನಾಭರಣ ನೀಡಿದ್ದಾರೆ. ಈ ಬಗ್ಗೆ ಸಿಕ್ಕ ಮಾಹಿತಿಯನ್ನು ಆಧರಿಸಿ ರೇಣುಕಾ ಮನೆ ಮೇಲೆ ದಾಳಿ ಮಾಡಲಾಯಿತು. 3.5 ಕೆ.ಜಿ ಚಿನ್ನ, 7 ಕೆ.ಜಿ ಬೆಳ್ಳಿ, ₹ 36 ಲಕ್ಷ ನಗದು ಹಾಗೂ ₹ 250 ಕೋಟಿಗೂ ಹೆಚ್ಚಿನ ಮೌಲ್ಯದ ಆಸ್ತಿ ದಾಖಲೆಗಳು ಸಿಕ್ಕಿವೆ. ಅವುಗಳ ಪರಿಶೀಲನೆ ನಡೆದಿದೆ’ ಎಂದೂ ತಿಳಿಸಿವೆ.

40 ಬ್ಯಾಂಕ್ ಪಾಸ್‌ಪುಸ್ತಕ; ‘ರೇಣುಕಾ ಅವರ ಮನೆಯಲ್ಲಿ ವಿವಿಧ ಬ್ಯಾಂಕ್‌ಗಳ 40 ಪಾಸ್‌ಪುಸ್ತಕಗಳು ಸಿಕ್ಕಿವೆ. ಈ ಖಾತೆಗಳಲ್ಲಿ ಸುಮಾರು ₹ 4 ಕೋಟಿ ಇದೆ. ಖಾತೆಗಳ ವಹಿವಾಟಿನ ಬಗ್ಗೆ ಬ್ಯಾಂಕ್‌ನಿಂದ ಮಾಹಿತಿ ಕೋರಲಾಗಿದೆ ಎಂದೂ ಹೇಳಿದರು.

‘ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವುದಾಗಿ ರೇಣುಕಾ ಹೇಳುತ್ತಿದ್ದಾರೆ. ನಾಲ್ಕು ಕಂಪನಿಗಳ ದಾಖಲೆಗಳನ್ನು ನೀಡಿದ್ದಾರೆ. ಅದರ ದಾಖಲೆ ಪರಿಶೀಲಿಸಲಾಗುತ್ತಿದ್ದು, ಕಂಪನಿಯಲ್ಲೂ ಸುಧಾ ಬೇನಾಮಿ ಪಾಲುದಾರಿಕೆ ಹೊಂದಿರುವ ಮಾಹಿತಿಯೂ ಇದೆ’ ಎಂದೂ ತಿಳಿಸಿದರು.

ಕೆಎಎಸ್ ಅಧಿಕಾರಿಗೆ ನೋಟಿಸ್‌

ಅಕ್ರಮ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರ ಆರೋಪದಡಿ ದಾಖಲಾಗಿರುವ ಪ್ರಕರಣ ಸಂಬಂಧ ಸೋಮವಾರ ವಿಚಾರಣೆಗೆ ಬರುವಂತೆ ಕೆಎಎಸ್ ಅಧಿಕಾರಿ ಸುಧಾ ಅವರಿಗೆ ಎಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

‘ಆರಕ್ಕಿಂತ ಹೆಚ್ಚು ಕಡೆಗಳಲ್ಲಿ ದಾಳಿ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ. ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ಈ ಬಗ್ಗೆ ಸುಧಾ ಅವರ ವಿಚಾರಣೆ ನಡೆಸಬೇಕಿದೆ. ಹೀಗಾಗಿ, ನೋಟಿಸ್ ನೀಡಲಾಗಿದೆ’ ಎಂದು ಎಸಿಬಿ ಮೂಲಗಳು ತಿಳಿಸಿವೆ.

‘ಸುಧಾ ಅವರು ಬೇನಾಮಿ ಹೆಸರಿನಲ್ಲಿ ಆಸ್ತಿ ಸಂಪಾದನೆ ಮಾಡಿರುವ ಆರೋಪವಿದೆ. ಈ ಸಂಬಂಧ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ’ ಎಂದೂ ಮೂಲಗಳು ಹೇಳಿವೆ.

‘ತಂದೆ ತೀರಿಕೊಂಡರೆಂದು ಹೇಳಿ ಹೋದ ರೇಣುಕಾ’

ಎಸಿಬಿ ಅಧಿಕಾರಿಗಳು ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದರು. ಇದೇ ವೇಳೆಯೇ ತುರ್ತಾಗಿ ಊರಿಗೆ ಹೋಗಬೇಕೆಂದು ಹೇಳಿದ್ದ ರೇಣುಕಾ, ‘ನಮ್ಮ ತಂದೆ ತೀರಿಕೊಂಡಿದ್ದಾರೆ. ಇದೀಗ ಸುದ್ದಿ ಬಂದಿದೆ. ಅಂತ್ಯಕ್ರಿಯೆಗೆ ನಾನು ಹಾಗೂ ಪತಿ ಹೋಗಬೇಕು’ ಎಂದಿದ್ದರು. ಅದಕ್ಕೆ ಅಧಿಕಾರಿಗಳು ಅನುಮತಿ ನೀಡಿದರು. ನಂತರ, ಮಕ್ಕಳ ಸಮ್ಮುಖದಲ್ಲಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.