ADVERTISEMENT

ಸಾಧಕರಿಗೆ ದತ್ತಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 16:29 IST
Last Updated 13 ಜುಲೈ 2021, 16:29 IST
ಕಾರ್ಯಕ್ರಮದಲ್ಲಿ (ಕುಳಿತವರು; ಎಡದಿಂದ) ಮಲ್ಲಿಕಾರ್ಜುನಪ್ಪ ನಿಜಗುಣಪ್ಪ ಚಿಕ್ಕಮಠ, ಎ.ಆರೋಗ್ಯಪ್ಪ ಮತ್ತು ಜಾಣಗೆರೆ ವೆಂಕಟರಾಮಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪದ್ಮರಾಜ ದಂಡಾವತಿ, ಕೆ.ರಾಜಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ, ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಮತ್ತು ರೀಟಾ ರೀನಿ ಇದ್ದಾರೆ– ಪ್ರಜಾವಾಣಿ ಚಿತ್ರ

ಬೆಂಗಳೂರು: ಲೇಖಕ ಹಾಗೂ ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಮತ್ತು ಸಂತ ಜೋಸೆಫರ ಕನ್ನಡ ಸಂಘದ ಅಧ್ಯಕ್ಷ ಎ.ಆರೋಗ್ಯಪ್ಪ ಅವರು ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಭಾಜನರಾದರು.

ಕನ್ನಡ ಸಾಹಿತ್ಯ ಪರಿಷತ್‌ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಪುರಸ್ಕಾರವು ತಲಾ ₹10 ಸಾವಿರ ನಗದು ಒಳಗೊಂಡಿದೆ.

ಲೇಖಕ ಹಾಗೂ ರಂಗಭೂಮಿ ಕಲಾವಿದ ಮಲ್ಲಿಕಾರ್ಜುನಪ್ಪ ನಿಜಗುಣಪ್ಪ ಚಿಕ್ಕಮಠ ಅವರು ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹಯ್ಯ ಜೋಗಿ ದತ್ತಿ ಪ್ರಶಸ್ತಿ ಸ್ವೀಕರಿಸಿದರು. ಇದು ₹5 ಸಾವಿರ ನಗದು ಒಳಗೊಂಡಿದೆ.

ADVERTISEMENT

ಎಸ್‌.ರಂಗಪ್ಪ ‘ಕೋವಿಡ್‌ನಿಂದಾಗಿ ಸಾಹಿತಿಗಳು ಹಾಗೂ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲಾವಿದರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದರೂ ಅವರ ಖಾತೆಗಳಿಗೆ ನೇರವಾಗಿ ಕೊರೊನಾ ಪರಿಹಾರ ಮೊತ್ತ ಜಮೆ ಮಾಡುತ್ತಿದ್ದೇವೆ’ ಎಂದರು.

ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ‘106 ವಸಂತಗಳನ್ನು ಕ್ರಮಿಸಿರುವ ಸಾಹಿತ್ಯ ಪರಿಷತ್‌, ನಾಡು–ನುಡಿಗೆ ಸೇವೆ ಸಲ್ಲಿಸಿದ ಅನರ್ಘ್ಯ ರತ್ನಗಳನ್ನು ಗೌರವಿಸಿಕೊಂಡು ಬಂದಿದೆ. ದತ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು ಅರ್ಹತೆ, ಯೋಗ್ಯತೆ ಮತ್ತು ಸಾಧನೆಗಳೇ ಮಾನದಂಡವಾಗಿದೆ’ ಎಂದು ಹೇಳಿದರು.

‘ಫಾದರ್‌ ಚಸರಾ ಅವರು ಕನ್ನಡಕ್ಕಾಗಿ ಮಿಡಿಯುತ್ತಿದ್ದರು. ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಅನ್ಯಾಯವಾದಾಗ ಗಟ್ಟಿ ಧ್ವನಿ ಎತ್ತುತ್ತಿದ್ದರು’ ಎಂದು ಕನ್ನಡಪರ ಹೋರಾಟಗಾರ್ತಿ ರೀಟಾ ರೀನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.