ADVERTISEMENT

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಅವ್ಯವಹಾರ: 10 ದಿನಗಳಲ್ಲಿ ವಿಚಾರಣೆ ಪೂರ್ಣ–ಎಜಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 15:44 IST
Last Updated 8 ಡಿಸೆಂಬರ್ 2025, 15:44 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ (ಕಸಾಪ) ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದ 17 ಆರೋಪಗಳಲ್ಲಿ 14 ಆಪಾದನೆಗಳ ವಿಚಾರಣೆ ಮುಕ್ತಾಯಗೊಂಡಿದ್ದು, ಉಳಿದ 3 ಅಂಶಗಳ ವಿಚಾರಣೆಯನ್ನು 10 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

‘ಕಸಾಪ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ 2025ರ ಜೂನ್ 26 ಹಾಗೂ 30ರಂದು ಸಹಕಾರ ಸಂಘಗಳ ನೋಂದಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಬೇಕು’ ಎಂದು ಕೋರಿ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ (ಎಜಿ) ಕೆ.ಶಶಿಕಿರಣ ಶೆಟ್ಟಿ ಅವರು, ‘ಪ್ರಕರಣಕ್ಕೆ ಸಂಬಂಧಿಸಿದಂತೆ 14 ಆರೋಪಗಳ ಕುರಿತು ವಿಚಾರಣೆ ಪೂರ್ಣಗೊಳಿಸಲಾಗಿದೆ. ಬಾಕಿ 3 ಆರೋಪಗಳ ವಿಚಾರಣೆ ಪೂರ್ಣಗೊಳಿಸಲು 1 ವಾರ ಅಥವಾ 10 ದಿನಗಳ ಕಾಲಾವಕಾಶ ನೀಡಬೇಕು’ ಎಂದು ಕೋರಿದರು. ಅಂತೆಯೇ, ಈ ಸಂಬಂಧ ನ್ಯಾಯಪೀಠಕ್ಕೆ ಮೆಮೊ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು 2026ರ ಜನವರಿ 13ಕ್ಕೆ ಮುಂದೂಡಿತು.

ADVERTISEMENT

ತೆಗೆದು ಹಾಕಲು ಮನವಿ: ವಿಚಾರಣೆ ವೇಳೆ ಮಹೇಶ್ ಜೋಶಿ ಪರ ಪದಾಂಕಿತ ಹಿರಿಯ ವಕೀಲ ಜಯಕುಮಾರ್ ಎಸ್‌. ಪಾಟೀಲ್, ‘ನವೆಂಬರ್ 6ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಕೆಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಅವುಗಳನ್ನು ಆದೇಶದಿಂದ ತೆಗೆದುಹಾಕುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವುದಾಗಿ ತಿಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.