ADVERTISEMENT

ಕಸಾಪ | ಮಹೇಶ ಜೋಶಿ ಸುಳ್ಳಿನ ಸರದಾರ: ಅಡ್ವೊಕೇಟ್ ಜನರಲ್‌ ಶಶಿಕಿರಣ್ ಶೆಟ್ಟಿ

ರೈಲ್ವೆ ಟಿಕೆಟ್ ಬುಕ್ ಮಾಡಿ, ರದ್ದುಗೊಳಿಸಿದ ಅಧ್ಯಕ್ಷ: ಶಶಿಕಿರಣ ಶೆಟ್ಟಿ ವಾದ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 20:06 IST
Last Updated 6 ನವೆಂಬರ್ 2025, 20:06 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ವೇಳೆಯಲ್ಲಿ (ಈಗ ಆಡಳಿತಾಧಿಕಾರಿ) ಮಹೇಶ ಜೋಶಿ ಹೇಳಿರುವುದೆಲ್ಲಾ ಅಕ್ಷರಶಃ ಸುಳ್ಳು. ಅವರ ನಡವಳಿಕೆ ಆಘಾತಕಾರಿಯಾಗಿದೆ. ಒಂದಲ್ಲ, ಎರಡಲ್ಲ ಅವರು ಸಾಲು-ಸಾಲು ಸುಳ್ಳುಗಳನ್ನು ಹೇಳಿದ್ದಾರೆ, ಈ ಸುಳ್ಳುಗಳನ್ನೆಲ್ಲ ನ್ಯಾಯಾಲಯದ ಮುಂದೆಯೇ ಪ್ರತಿಪಾದಿಸಿದ್ದಾರೆ...!

ಕನ್ನಡ ಸಾಹಿತ್ಯ ಪರಿಷತ್‌ಗೆ (ಕಸಾಪ) ತನಿಖಾಧಿಕಾರಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಮಹೇಶ ಜೋಶಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಅಡ್ವೊಕೇಟ್ ಜನರಲ್‌ (ಎಜಿ) ಅರುಹಿದ ಅಂಶಗಳಿವು.

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ‘ತನಿಖಾಧಿಕಾರಿ ಮುಂದೆ ಹಾಜರಾಗಲು ನೋಟಿಸ್ ಕೊಟ್ಟರೆ ಕುಟುಂಬದಲ್ಲಿ ಸಾವು ಸಂಭವಿಸಿದೆ, ಪ್ರಯಾಣ ಮಾಡಬೇಕಾಗಿರುವ ಕಾರಣ 15 ದಿನಗಳ ಕಾಲಾವಕಾಶಬೇಕು ಎಂದು ಜೋಶಿ ಕೋರಿದ್ದರು. ಆದರೆ, ಅವರು ಎಲ್ಲೂ ಪ್ರಯಾಣ ಮಾಡಿಯೇ ಇಲ್ಲ’ ಎಂದು ದೂರಿದರು.

ADVERTISEMENT

‘ವಿಚಾರಣೆಯಿಂದ ತಪ್ಪಿಸಿಕೊಳ್ಳಲು ರೈಲ್ವೆ ಟಿಕೆಟ್ ಬುಕ್ ಮಾಡಿ, ನಂತರ ಅದನ್ನು ರದ್ದುಗೊಳಿಸಿದ್ದಾರೆ. ತಾನು ಪ್ರಯಾಣ ಮಾಡಿದ್ದೇನೆಂದು ತೋರಿಸಲಷ್ಟೇ ಟಿಕೆಟ್ ಬುಕ್ ಮಾಡಿಸಿದ್ದರು. ಟಿಕೆಟ್ ರದ್ದು ಮಾಡಿಸಿದ ವಿವರಗಳನ್ನು ಕೊಡದಂತೆ ರೈಲ್ವೆ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ವಾರಾಣಸಿಯಿಂದ ಲಖನೌಗೆ ವಿಮಾನ ಪ್ರಯಾಣ ಮಾಡಿದ ಅವಧಿ ಗಮನಿಸಿದರೆ, ಮನುಷ್ಯರಿಂದ ಅದು ಸಾಧ್ಯವೇ ಇಲ್ಲ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

‘ಪ್ರಯಾಣ ಮಾಡಬೇಕಾಗಿದೆ ಎಂದು ಹೇಳಲಾಗಿದ್ದ ದಿನಗಳಲ್ಲಿ ಜೋಶಿ ಕಸಾಪ ಕಚೇರಿಗೆ ಬಂದು, ದೈನಂದಿನ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ’ ಎಂಬ ಶಶಿಕಿರಣ್‌ ಶೆಟ್ಟಿ ಅವರ ವಾದಕ್ಕೆ ನ್ಯಾಯಪೀಠ, ‘ಅವರು ಕಚೇರಿಗೆ ಬಂದು ಕಾರ್ಯ ನಿರ್ವಹಿಸಿದ್ದಾರೆ ಎಂಬುದು ನಿಮಗೆ ಹೇಗೆ ಗೊತ್ತಾಯಿತು’ ಎಂದು ಪ್ರಶ್ನಿಸಿತು. ಇದಕ್ಕೆ ಶಶಿಕಿರಣ್‌ ಶೆಟ್ಟಿ, ‘ಸಿ.ಸಿ.ಟಿ.ವಿ ದೃಶ್ಯಾವಳಿಗಳಿಂದ ಇದು ಪತ್ತೆಯಾಗಿದೆ’ ಎಂದು ವಿವರಿಸಿದರು.

‘ಕಸಾಪ ಕಚೇರಿಯಲ್ಲಿ ಅನವಶ್ಯವಾಗಿ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸಲಾಗಿದೆ. ಇದರ ಮೂಲಕವೂ ಹಣ ದುರ್ಬಳಕೆಯಾದ ಮಾತುಗಳು ಕೇಳಿ ಬಂದಿವೆ. ಸಿಸಿಟಿವಿ ದೃಶ್ಯಾವಳಿ ಕೊಡದಂತೆ ಜೋಶಿ ಕಸಾಪ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ. ಕಾನೂನು ಮತ್ತು ನ್ಯಾಯಾಲಯವನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಜೋಶಿ ಅವರ ಪ್ರತಿಯೊಂದು ದುರ್ನಡತೆಯನ್ನು ನ್ಯಾಯಪೀಠಕ್ಕೆ ತೆರೆದಿಟ್ಟರು.

ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ 2025ರ ಜೂನ್ 26 ಹಾಗೂ 30ರಂದು ಸಹಕಾರ ಸಂಘಗಳ ನೋಂದಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಬೇಕು’ ಎಂದು ಕೋರಿ ಜೋಶಿ ಈ ಅರ್ಜಿ ಸಲ್ಲಿಸಿದ್ದಾರೆ.

30 ದಿನಗಳಲ್ಲಿ ತನಿಖೆ ಮುಗಿಸಿ’

ಈ ಪ್ರಕರಣದಲ್ಲಿ ಜೋಶಿ ಅವರನ್ನು ವೈಯಕ್ತಿಕವಾಗಿ ಗುರಿ ಮಾಡಲಾಗಿಲ್ಲ. ತನಿಖೆ ನಡೆಯಲಿ ನ್ಯಾಯಾಲಯವೇ ಕಾಲಮಿತಿ ನಿಗದಿಪಡಿಸಿ ಮೇಲ್ವಿಚಾರಣೆ ನಡೆಸಲಿ. ವಿಷಯ ಬಹಳ ಗಂಭೀರವಾಗಿದ್ದು ಅರ್ಜಿದಾರರ ನಡವಳಿಕೆ ಅನುಮಾನಾಸ್ಪದ ಹಾಗೂ ಆಘಾತಕಾರಿಯಾಗಿದೆ’ ಎಂದು ಶಶಿಕಿರಣ್‌ ಶೆಟ್ಟಿ ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜೋಶಿ ಪರ ಪದಾಂಕಿತ ಹಿರಿಯ ವಕೀಲರು ಸ್ಪಷ್ಟನೆ ನೀಡಲು ಮುಂದಾದರು. ಆಗ ಜೋಶಿಯವರ ನಡವಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ ‘ಇದು ಕಾನೂನು ಮತ್ತು ನ್ಯಾಯಾಲಯದ ದುರ್ಬಳಕೆ. ಆದ್ದರಿಂದ 30 ದಿನಗಳಲ್ಲಿ ತನಿಖೆ ಮುಗಿಸಬೇಕು ಅಲ್ಲಿಯವರೆಗೆ ಯಾವುದೇ ಸಭೆ ನಡೆಸುವಂತಿಲ್ಲ. ಜೋಶಿ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು’ ಎಂದು ಖಡಕ್‌ ತಾಕೀತು ಮಾಡಿದೆ. ‘ಈ ವಿಚಾರದಲ್ಲಿ ಯಾವುದೇ ರಿಯಾಯಿತಿ ಅಥವಾ ಕರುಣೆ ಇಲ್ಲ. ಜೋಶಿ ತನಿಖೆಗೆ ಸಹಕರಿಸದೇ ಇದ್ದರೆ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಬೇಕು’ ಎಂದು ನಿರ್ದೇಶಿಸಿರುವ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ಮುಂದೂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.