
ಕಾರ್ಯಕ್ರಮದಲ್ಲಿ ಬಿ.ಎಂ. ನಾರಾಯಣಸ್ವಾಮಿ ಅವರಿಗೆ ‘ಕನ್ನಡ ಕಟ್ಟಾಳು’ ಹಾಗೂ ಜಯಲಕ್ಷ್ಮಿ ಪಾಟೀಲ ಅವರಿಗೆ ‘ನಿಸ್ಸೀಮ ಕನ್ನಡತಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಅವರು ವೈಯಕ್ತಿಕ ಟೀಕೆ–ಟಿಪ್ಪಣಿಗಳನ್ನು ಗೌರವದಿಂದ ಸ್ವೀಕರಿಸಿ, ಸನ್ನಡತೆ ತೋರುವ ಬದಲು ಪ್ರತೀಕಾರದ ಮನಸ್ಥಿತಿ ತೋರಿದ್ದರಿಂದಲೇ ಆಡಳಿತಾಧಿಕಾರಿ ನೇಮಿಸುವ ಪರಿಸ್ಥಿತಿ ನಿರ್ಮಾಣವಾಯಿತು’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕನ್ನಡ ಸಂಘರ್ಷ ಸಮಿತಿ ನಗರದಲ್ಲಿ ಹಮ್ಮಿಕೊಂಡಿದ್ದ 47ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಬಿ.ಎಂ. ನಾರಾಯಣಸ್ವಾಮಿ ಅವರಿಗೆ ‘ಕನ್ನಡ ಕಟ್ಟಾಳು’ ಹಾಗೂ ಜಯಲಕ್ಷ್ಮಿ ಪಾಟೀಲ ಅವರಿಗೆ ‘ನಿಸ್ಸೀಮ ಕನ್ನಡತಿ’ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು.
‘ಪರಿಷತ್ತಿನ ಇತಿಹಾಸದಲ್ಲಿ ಎರಡನೇ ಬಾರಿ ಆಡಳಿತಾಧಿಕಾರಿ ನೇಮಿಸುವ ಸಂದರ್ಭ ಬಂದಿದ್ದು ಒಳ್ಳೆಯ ಸೂಚನೆಯಲ್ಲ. ಹಿಂದೆ ಆಯಾ ಸಂದರ್ಭಕ್ಕೆ ವಿವಾದಗಳು ಕಾಣಿಸಿಕೊಂಡರೂ, ತಕ್ಷಣ ಬಗೆಹರಿಯುತ್ತಿದ್ದವು. ಆದರೆ, ಕಸಾಪ ಈಗ ಬಹಳ ಇಕ್ಕಟ್ಟು, ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಂತೆ ಅನಿಸುತ್ತಿದೆ. ಜೋಶಿ ಅವರು ಈ ಹಿಂದೆ ವಿವಿಧ ಹುದ್ದೆಗಳಲ್ಲಿ ಅಧಿಕಾರದಲ್ಲಿದ್ದಾಗ ಒಳ್ಳೆಯ ಹೆಸರು ಮಾಡಿದ್ದಾರೆ. ಆದರೆ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮೇಲೆ ಅವರು ತಮ್ಮ ಗೌರವವನ್ನು ಕಡಿಮೆ ಮಾಡಿಕೊಂಡಿದ್ದಲ್ಲದೇ, ಪರಿಷತ್ತಿನ ಘನತೆಯನ್ನೂ ಕುಗ್ಗಿಸಿದ್ದಾರೆ. ಅವರು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ’ ಎಂದು ಹೇಳಿದರು.
‘ಸಾಹಿತ್ಯ ಪರಿಷತ್ತನ್ನು ಸಾಹಿತಿಗಳ ವಿರುದ್ಧ ಎನ್ನುವ ರೀತಿಯಲ್ಲಿ ಮಾಡಿರುವುದು ವಿಷಾದನೀಯ. ಸಾಹಿತಿಗಳನ್ನೇ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಆಗಬಾರದಿತ್ತು. ಸಾಹಿತಿಗಳು ಪ್ರಶ್ನಿಸುವುದು, ಪ್ರತಿಭಟಿಸುವುದು ಸಹಜ. ಅದು ಸಾಹಿತಿಗಳ ಗುಣ. ಪರಿಷತ್ತಿನ ಹಿತದೃಷ್ಟಿಯಿಂದ ಸಲಹೆ ಸೂಚನೆಗಳನ್ನು ಕೊಟ್ಟರೆ, ಅಧ್ಯಕ್ಷ ಸ್ಥಾನದಲ್ಲಿರುವವರು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ ಅವರು ಸಮಿತಿಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕನ್ನಡ ಪರ ಹೋರಾಟಗಾರ ರಾಮಣ್ಣ ಎಚ್. ಕೋಡಿಹೊಸಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಅಧ್ಯಕ್ಷ ಎ.ಎಸ್.ನಾಗರಾಜಸ್ವಾಮಿ, ಪ್ರಧಾನ ಕಾರ್ಯದರ್ಶಿ ತಾ.ಸಿ.ತಿಮ್ಮಯ್ಯ, ಜಂಟಿ ಕಾರ್ಯದರ್ಶಿ ಇಂದಿರಾ ಶರಣ್ ಜಮ್ಮಲದಿನ್ನಿ ಉಪಸ್ಥಿತರಿದ್ದರು.
‘ಸಾಧುವಾದ ನಡವಳಿಕೆಯಲ್ಲ’
‘ಸಾಹಿತಿ ಹರಿಹರಪ್ರಿಯ ಅವರಿಗೆ ವ್ಯವಸ್ಥೆ ಸಮಾಜ ಮತ್ತು ಸರ್ಕಾರದ ಬಗ್ಗೆ ಅಸಮಾಧಾನ ಇದ್ದರೆ ಅವರು ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಹಿಂದಿರುಗಿಸುವ ಕೆಲಸ ಮಾಡಬಹುದಿತ್ತು. ಆದರೆ ಸುಟ್ಟು ಹಾಕಿದ್ದು ಸಾಧುವಾದ ನಡವಳಿಕೆ ಅಲ್ಲ. ಈ ಪರಿಸ್ಥಿತಿಗೆ ಅವರ ಅಪ್ರಿಯ ನಡವಳಿಕೆಯೇ ಕಾರಣ. ಅವರು ಸೌಜನ್ಯದಿಂದ ನಡೆದುಕೊಂಡಿದ್ದರೆ ಅವರನ್ನು ಯಾರೂ ದೂರ ಇಡುತ್ತಿರಲಿಲ್ಲ. ಅವರು ನೋವಿನಿಂದಲೂ ಆ ರೀತಿ ಮಾಡಿರಬಹುದು. ಅವರ ಮನವಿಗಳಿಗೆ ಸರ್ಕಾರ ಸ್ಪಂದಿಸಲಿ’ ಎಂದು ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಹೆಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.