ವಸುಂಧರಾ ಭೂಪತಿ
ಬೆಂಗಳೂರು: ‘ಕಾನೂನಾತ್ಮಕವಾಗಿ ಅಮಾನತು ಆದೇಶ ರದ್ದುಪಡಿಸಿಕೊಂಡು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕು ಕಲ್ಲಹಳ್ಳಿಯಲ್ಲಿ ಅ.5ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸರ್ವ ಸದಸ್ಯರ ಸಭೆಗೆ ಭಾಗವಹಿಸುತ್ತೇವೆ. ಈ ವೇಳೆಯ ಅಹಿತಕರ ಘಟನೆಗಳಿಗೆ ಕಸಾಪ ಅಧ್ಯಕ್ಷರೇ ಹೊಣೆಗಾರರಾಗಲಿದ್ಧಾರೆ’ ಎಂದು ಕನ್ನಡ ನಾಡು ನುಡಿ ಜಾಗೃತಿ ಸಮಿತಿ ಸಂಚಾಲಕರಾದ ಡಾ.ವಸುಂಧರಾ ಭೂಪತಿ ಹಾಗೂ ಜಾಣಗೆರೆ ವೆಂಕಟರಾಮಯ್ಯ ತಿಳಿಸಿದ್ದಾರೆ.
‘ನಮ್ಮ ಸದಸ್ಯತ್ವನ್ನು ಅಮಾನತುಪಡಿಸಲಾಗಿದ್ದು, ಸಭೆಗೆ ಬಂದರೆ ಕತ್ತು ಹಿಡಿದು ದಬ್ಬುತ್ತೇವೆ ಎಂದು ಬಾಗಲಕೋಟೆ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಬೆದರಿಕೆಯೊಡ್ಡಿರುವುದು ಖಂಡನೀಯ. ಈ ಮಾತುಗಳನ್ನು ಹೇಳುವಾಗ ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಪಕ್ಕದಲ್ಲೇ ಇದ್ದು ಸುಮ್ಮನಿರುವ ಮೂಲಕ ಅನುಮೋದಿಸಿದ್ದಾರೆ’ ಎಂದು ಟೀಕಿಸಿದ್ದಾರೆ.
‘ಸಹಕಾರ ಇಲಾಖೆ ನಡೆಸುತ್ತಿರುವ ವಿಚಾರಣೆಗೆ ಅಸಹಕಾರ ತೋರಿರುವ ಜೋಷಿ ವಿರುದ್ಧ ಈಗಾಗಲೇ ಮಧ್ಯಂತರ ವರದಿ ಸಲ್ಲಿಕೆಯಾಗಿದೆ. ಕ್ರಮ ಕೈಗೊಳ್ಳಬಹುದಾದ ಹಂತದಲ್ಲಿಯೇ ಸಾರಿಗೆ, ವಸತಿ ವ್ಯವಸ್ಥೆ ಇಲ್ಲದೇ ಕಲ್ಲಹಳ್ಳಿಯ ಸಣ್ಣ ಸಭಾಂಗಣದಲ್ಲಿ ವಾರ್ಷಿಕ ಸಭೆ ನಡೆಸಲು ಮುಂದಾಗಿರುವ ಕ್ರಮವನ್ನು ವಿರೋಧಿಸುತ್ತೇವೆ’ ಎಂದು ಹೇಳಿದ್ದಾರೆ.
‘ಹಿರಿಯ ಆಜೀವ ಸದಸ್ಯರ ಹಕ್ಕನ್ನು ಕಸಿದು ಸ್ವಾತಂತ್ರ್ಯ ಹರಣ ಮಾಡಲು ಮುಂದಾಗಿದ್ದಾರೆ. ದ್ವೇಷ ಸಾಧಿಸುತ್ತಿರುವ ಜೋಷಿ ಅವರ ಅಟ್ಟಹಾಸವನ್ನು ಸರ್ಕಾರ, ಸಹಕಾರ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಿಸಿಕೊಂಡು ಹೋದರೆ ಮಹತ್ತರ ಸಂಸ್ಥೆಯನ್ನೇ ನಾಶಮಾಡಬಹುದು. ಕೂಡಲೇ ಅವರ ವಿರುದ್ದ ಕ್ರಮ ಕೈಗೊಂಡು ಜೋಷಿ ಕಪಿಮುಷ್ಟಿಯಿಂದ ಕಸಾಪವನ್ನು ಪಾರು ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.