ADVERTISEMENT

ಸಂಶೋಧನೆಗೆ ನೀಡುವ ಅನುದಾನ ವ್ಯರ್ಥವಲ್ಲ: ಡಾ.ಕಸ್ತೂರಿ ರಂಗನ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 7:47 IST
Last Updated 16 ಜನವರಿ 2020, 7:47 IST
ಇಸ್ರೊ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್
ಇಸ್ರೊ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್   

ಬೆಂಗಳೂರು: ದೇಶದಲ್ಲಿ 900ಕ್ಕೂ ಅಧಿಕ ವಿಶ್ವವಿದ್ಯಾಲಯಗಳಿದ್ದು, ಸಂಶೋಧನೆಗಳು ಮಾತ್ರ ಕಳಪೆ ಮಟ್ಟದಲ್ಲಿದೆ. ಸಂಶೋಧನೆಗೆ ನೀಡುವ ಅನುದಾನ ಖಂಡಿತ ವ್ಯರ್ಥವಲ್ಲ ಎಂಬುದನ್ನು ಸರ್ಕಾರ ತಿಳಿಯಬೇಕು ಎಂದು ಇಸ್ರೊ ಮಾಜಿ ಅಧ್ಯಕ್ಷ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ರಚನಾ ಸಮಿತಿಯ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಹೇಳಿದರು.

ನಗರದ ಮಲ್ಲೇಶ್ವರದಲ್ಲಿನ ಎಂ.ಇ.ಎಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪನಾ ದಿನದ ಪ್ರಯುಕ್ತ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ದಿಕ್ಸೂಚಿ ಭಾಷಣ ಮಾಡಿದ ಅವರು, 'ಅಮೆರಿಕದಲ್ಲಿ ಭೌತವಿಜ್ಞಾನ ಕ್ಷೇತ್ರಕ್ಕೆ ನೀಡುವ ಅನುದಾನದಿಂದಾಗಿ ಜಿಡಿಪಿಗೆ ಅದು ಶೇ 12.5ರಷ್ಟು ಕೊಡುಗೆ ತಂದುಕೊಡುತ್ತಿದೆ. ಆದರೆ ನಮ್ಮಲ್ಲಿ ಉನ್ನತ ಶಿಕ್ಷಣಕ್ಕೆ ನೀಡುವ ಅನುದಾನ ಜಿಡಿಪಿಯ ಶೇ 1.1 ರಷ್ಟು ಮಾತ್ರ ಇದೆ. ಇದನ್ನು ಹೆಚ್ಚಿಸಬೇಕಾದ ಅಗತ್ಯವನ್ನು ಶಿಕ್ಷಣ ನೀತಿಯಲ್ಲಿ ತಿಳಿಸಲಾಗಿದೆ' ಎಂದರು.

ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಮತ್ತು ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆ ಸ್ಥಾಪಿಸುವ ಸಲಹೆ ನೀಡಲಾಗಿದೆ ಎಂದರು.

ADVERTISEMENT

8 ವರ್ಷಕ್ಕೆ ಬಹುತೇಕ ಮಿದುಳಿನ ಬೆಳವಣಿಗೆ

'ಮಗು ಎಂಟು ವರ್ಷವಾಗುವ ವೇಳೆ ಅದರ ಮಿದುಳು ಶೇ 85ರಷ್ಟು ಬೆಳವಣಿಗೆ ಆಗಿರುತ್ತದೆ ಎಂಬುದನ್ನು ಹಲವು ವೈಜ್ಞಾನಿಕ ಸಂಶೋಧನೆಗಳು ಸಾಬೀತುಪಡಿಸಿವೆ, ಇದೇ ತಳಹದಿಯಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣದ ಪರಿಕಲ್ಪನೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಹೀಗಾಗಿ ಮೂರು ವರ್ಷಕ್ಕೆ ಫೌಡೇಷನ್ ಆರಂಭವಾಗಬೇಕು ಎಂದು ಸೂಚಿಸಲಾಗಿದೆ' ಎಂದು ರಂಗನ್‌ ತಿಳಿಸಿದರು.

ಶಿಕ್ಷಣ ನೀತಿಗೆ 2 ಲಕ್ಷ ಸಲಹೆಗಳು ಬಂದಿವೆ, ದೇಶದಲ್ಲಿ ಶಿಕ್ಷಣ ವ್ಯವಸ್ಥೆಗೆ ಎಂತಹ ಮಹತ್ವ ಇದೆ ಎಂಬುದಕ್ಕೆ ಇದು ಸಾಕ್ಷಿ. ದೇಶದಲ್ಲಿ ಜ್ಞಾನ ಸಮಾಜ ಆರಂಭಿಸಬೇಕು ಎಂಬ ಒಟ್ಟಾರೆ ದೃಷ್ಟಿಕೋನದಲ್ಲಿ ಈ ನೀತಿಯನ್ನು ರೂಪಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.