ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗವು 2024ರ ಡಿಸೆಂಬರ್ 29ರಂದು 384 ಹುದ್ದೆಗಳ ಭರ್ತಿಗೆ ನಡೆಸಿದ್ದ ಪೂರ್ವಭಾವಿ ಮರು ಪರೀಕ್ಷೆಯ ಫಲಿತಾಂಶ ಪ್ರಕಟಣೆಗೆ ಇದ್ದ ಅಡ್ಡಿ ನಿವಾರಣೆಯಾಗಿದ್ದು,
ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಕರ್ನಾಟಕ ಆಡಳಿತ ನ್ಯಾಯಮಂಡಳಿಯು (ಕೆಎಟಿ), ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅನುಮತಿ ನೀಡಿದೆ.
ಈ ಸಂಬಂಧ ಕೃಷ್ಣ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೆಎಟಿ ನ್ಯಾಯಾಂಗ ಸದಸ್ಯ
ಎಸ್.ವೈ.ವಟವಟಿ ಮತ್ತು ಆಡಳಿತ ಸದಸ್ಯೆ ಅಮಿತಾ ಪ್ರಸಾದ್ ಅವರಿದ್ದ ಪೀಠವು ಈ ಕುರಿತಂತೆ ಆದೇಶಿಸಿದೆ.
‘ಕಾನೂನಿನ ಪ್ರಕಾರ ಆಯ್ಕೆ ಪ್ರಕ್ರಿಯೆ ಮುಂದುವರಿಸಲು ಕೆಪಿಎಸ್‌ಸಿಗೆ ನಿರ್ದೇಶಿಸಲಾಗುತ್ತಿದೆ. ಅರ್ಜಿದಾರರಿಗೆ ಯಾವುದೇ ತೊಂದರೆ ಗಳಿದ್ದರೆ, ಮುಂದಿನ ವಿಚಾರಣೆಯ ದಿನಾಂಕದಂದು ಅದನ್ನು ತಿಳಿಸಲು ಸ್ವತಂತ್ರರಿದ್ದಾರೆ’ ಎಂದು ತಿಳಿಸಿರುವ ಪೀಠವು ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಿದೆ.
‘ಪೂರ್ವಭಾವಿ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆಯ ಅನುವಾದದಲ್ಲಿ ಪುನಃ ಲೋಪಗಳಾಗಿವೆ. ಇದರಿಂದ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ, ಪರೀಕ್ಷೆಯನ್ನು ರದ್ದುಪಡಿಸಿ ಹೊಸದಾಗಿ ಪರೀಕ್ಷೆ ನಡೆಸಲು ನಿರ್ದೇಶಿಸಬೇಕು. ಮಧ್ಯಂತರ ಕ್ರಮವಾಗಿ ಫಲಿತಾಂಶ ಪ್ರಕಟಣೆಗೆ ತಡೆ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.