ADVERTISEMENT

Betting Case | ನಾನು ಸತ್ತರೆ ಇ.ಡಿ ಹೊಣೆ: ಶಾಸಕ ವೀರೇಂದ್ರ

ಕಸ್ಟಡಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 16:00 IST
Last Updated 28 ಆಗಸ್ಟ್ 2025, 16:00 IST
ಶಾಸಕ ಕೆ.ಸಿ.ವೀರೇಂದ್ರ
ಶಾಸಕ ಕೆ.ಸಿ.ವೀರೇಂದ್ರ   

ಬೆಂಗಳೂರು: ಕಸ್ಟಡಿಯಲ್ಲಿ ಇ.ಡಿ ಅಧಿಕಾರಿಗಳು ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ, ಕಿರುಕುಳ ನೀಡಿದ್ದಾರೆ. ಕುಡಿಯಲು ಅಶುದ್ಧ ನೀರನ್ನು ನೀಡಿದ್ದಾರೆ. ಪ್ಲಾಸ್ಟಿಕ್‌ ಕಂಟೇನರ್‌ನಲ್ಲಿ ಊಟ ಒದಗಿಸಿದ್ದಾರೆ. ಕೂರಲು ಕುರ್ಚಿಯನ್ನೂ ನೀಡಿಲ್ಲ. ಸರಿಯಾದ ಕೋಣೆಯಲ್ಲಿ ಇರಿಸಿಲ್ಲ, ನಾನು ಸತ್ತರೆ, ಅದಕ್ಕೆ ಇ.ಡಿ ಅಧಿಕಾರಿಗಳೇ ಹೊಣೆ..!

ಆನ್‌ಲೈನ್ ಮತ್ತು ಆಫ್‌ಲೈನ್‌ ಬೆಟ್ಟಿಂಗ್‌ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇ.ಡಿಯಿಂದ (ಜಾರಿ ನಿರ್ದೇಶನಾಲಯ) ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಗುರುವಾರ ನ್ಯಾಯಾಧೀಶರ ಮುಂದೆ ಅಲವತ್ತುಕೊಂಡ ಪರಿ ಇದು.

ಪ್ರಕರಣಕ್ಕೆ ಸಂಬಂಧಿಸಿದಂತೆ ವೀರೇಂದ್ರ ಅವರನ್ನು ಬೆಂಗಳೂರು ನಗರ 35ನೇ ಸಿಸಿಎಚ್‌ ನ್ಯಾಯಾಲಯದ ನ್ಯಾಯಾಧೀಶರು ಇದೇ 28ರವರೆಗೆ ಇ.ಡಿ ಕಸ್ಟಡಿಗೆ ನೀಡಿದ್ದರು. ಕಸ್ಟಡಿ ಅವಧಿ ಗುರುವಾರ (ಆ.28) ಸಂಜೆ ಮುಗಿಯಲಿದ್ದ ಕಾರಣ ಅವರನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯಕ್ಕೆ ಬೆಳಿಗ್ಗೆಯೇ ಹಾಜರುಪಡಿಸಲಾಗಿತ್ತು.

ADVERTISEMENT

ಈ ವೇಳೆ ವೀರೇಂದ್ರ ಅವರು, ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರ ಮುಂದೆ ಇ.ಡಿ ಕಸ್ಟಡಿಯಲ್ಲಿ ತಮಗಾಗುತ್ತಿರುವ ಸಂಕಟವನ್ನು ತೋಡಿಕೊಂಡರು. ಅಂತೆಯೇ, ವೀರೇಂದ್ರ ಪರ ಹಾಜರಾಗಿದ್ದ ಪದಾಂಕಿತ ಹಿರಿಯ ವಕೀಲರಾದ ಕಿರಣ್‌ ಜವಳಿ ಹಾಗೂ ಎಚ್‌.ಎಸ್.ಚಂದ್ರಮೌಳಿ, ‘ಅರ್ಜಿದಾರರನ್ನು ಬಂಧಿಸುವ ವೇಳೆ ಇ.ಡಿ ಅಧಿಕಾರಿಗಳು ಸೂಕ್ತ ನ್ಯಾಯಿಕ ಪ್ರಕ್ರಿಯೆ ಪಾಲನೆ ಮಾಡಿಲ್ಲ. ಯಾವ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ವೀರೇಂದ್ರ ಅವರಿಗೆ ನೀಡಿಯೇ ಇಲ್ಲ. ಅಧಿಕಾರಿಗಳು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ’ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ಯಾವ ಪ್ರಕರಣದಲ್ಲಿ ಇಸಿಐಆರ್‌ (ಜಾರಿ ನಿರ್ದೇಶನಾಲಯ ಪ್ರಕರಣದ ಮಾಹಿತಿ ವರದಿ) ದಾಖಲಿಸಿದ್ದೀರಿ’ ಎಂದು ಇ.ಡಿ ಅಧಿಕಾರಿಗಳನ್ನು ಪ್ರಶ್ನಿಸಿ, ‘ಅಪರಾಧಿಕ ಪ್ರಕರಣಗಳಲ್ಲಿ ಆರೋಪಿಗೆ ಸೂಕ್ತ ಕಾರಣ ನೀಡದೆ ಬಂಧಿಸಬಾರದು. ಕೋರ್ಟ್‌ಗೆ ಬಂದಮೇಲೆ ಯಾವುದೋ ಪ್ರಕರಣಗಳನ್ನು ಹೆಸರಿಸುವುದು ಸಲ್ಲ. ಇದು ಯಾವ ರೀತಿಯ ತನಿಖೆ? ನೀವು ಮನಬಂದಂತೆ ನಡೆದುಕೊಳ್ಳಬಾರದು’ ಎಂದು ಇ.ಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಆರೋಪಿಯನ್ನು 14 ದಿನಗಳ ಕಸ್ಟಡಿಗೆ ನೀಡಬೇಕು’ ಎಂಬ ಇ.ಡಿ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧೀಶರು, ಆರು ದಿನಗಳ ಕಾಲ ‍ಪುನಃ ಇ.ಡಿ ಕಸ್ಟಡಿಗೆ ಒಪ್ಪಿಸಿ ವಿಚಾರಣೆ ಮುಂದೂಡಿದರು. ‘ಆರೋಪಿಗೆ ಶುದ್ಧೀಕರಿಸಿದ ನೀರು, ಕೂರಲು ಕುರ್ಚಿಯನ್ನು ಒದಗಿಸಿ. ದಿನದಲ್ಲಿ 30 ನಿಮಿಷ ತಮ್ಮ ವಕೀಲರನ್ನು ಭೇಟಿ ಮಾಡಲು ಅವರಿಗೆ ಅವಕಾಶ ಒದಗಿಸಿ’ ಎಂದು ಇ.ಡಿ ಅಧಿಕಾರಿಗಳಿಗೆ ಸೂಚಿಸಿದರು.

ವೀರೇಂದ್ರ ಕುಟುಂಬದ ಸದಸ್ಯರ ಒಡೆತನದಲ್ಲಿ ಗೋವಾ ಮತ್ತಿತರ ಕಡೆ ಚಾಲ್ತಿಯಲ್ಲಿರುವ ಕ್ಯಾಸಿನೊಗಳು ಮತ್ತು ಆನ್‌ಲೈನ್‌ ಗೇಮಿಂಗ್‌ ಕಂಪನಿಗಳ ವಿರುದ್ಧ ಇಸಿಐಆರ್ ದಾಖಲಿಸಿದ್ದ ಇ.ಡಿ ಅಧಿಕಾರಿಗಳು ಇದೇ 22ರಂದು ದೇಶದಾದ್ಯಂತ 31 ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಸಿಕ್ಕಿಂನ ಗ್ಯಾಂಗ್ಟಕ್‌ನಲ್ಲಿ ವೀರೇಂದ್ರ ಅವರನ್ನು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.