ADVERTISEMENT

ಕೆಇಎ ಸರ್ವರ್‌ ಸಮಸ್ಯೆ: 2ನೇ ಸುತ್ತಿನ ಕೋರ್ಸ್‌ಗಳ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 15:56 IST
Last Updated 1 ಸೆಪ್ಟೆಂಬರ್ 2025, 15:56 IST
ಕೆಇಎ
ಕೆಇಎ   

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಎರಡನೇ ಸುತ್ತಿನ ‍ಪ್ರವೇಶ ಪ್ರಕ್ರಿಯೆಗೆ ಸರ್ವರ್‌ ಸಮಸ್ಯೆಯಿಂದ ಸೋಮವಾರ ಅಡಚಣೆಯಾಯಿತು. ಛಾಯ್ಸ್‌ ದಾಖಲಿಸಲು, ಶುಲ್ಕ ಪಾವತಿಸಲು ವಿದ್ಯಾರ್ಥಿಗಳು ಪರದಾಡಿದರು.

ಸರ್ವರ್‌ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವುದನ್ನು ಪರಿಗಣಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕ್ರಿಯೆಗೆ ನೀಡಿದ್ದ ಗಡುವನ್ನು ಒಂದು ದಿನ ವಿಸ್ತರಿಸಿದೆ. ಛಾಯ್ಸ್–1 ಮತ್ತು ಛಾಯ್ಸ್‌–2ನ್ನು ಆಯ್ಕೆ ಮಾಡುವ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಸೆ.3ರವರೆಗೆ, ಶುಲ್ಕ ಪಾವತಿ ನಂತರ ಸೀಟು ಖಾತರಿ ಚೀಟಿ ಡೌನ್‌ಲೋಡ್‌ ಮಾಡಿಕೊಂಡು ಕಾಲೇಜಿಗೆ ಪ್ರವೇಶ ಪಡೆಯಲು ಸೆ.4ರವರೆಗೆ ದಿನಾಂಕ ವಿಸ್ತರಿಸಲಾಗಿದೆ.

‘ಛಾಯ್ಸ್-3 ಆಯ್ಕೆ ಮಾಡಿದವರು ₹10 ಸಾವಿರ ಠೇವಣಿ ಮೊತ್ತ ಪಾವತಿ ಮಾಡಲು (ಬಿ.ಎಸ್‌ಸಿ ನರ್ಸಿಂಗ್‌, ಬಿಪಿಒ, ಬಿಪಿಟಿ ಮತ್ತು ಎಎಚ್‌ಎಸ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವವರಿಗೆ ಇದು ಅನ್ವಯಿಸುವುದಿಲ್ಲ) ಸೆ.3ರವರೆಗೆ ಅವಕಾಶ ನೀಡಲಾಗಿದೆ. ಸೀಟು ಹಂಚಿಕೆಯ ನಂತರ ಯಾವುದೇ ಛಾಯ್ಸ್‌ ಆಯ್ಕೆ ಮಾಡದವರನ್ನು ಸೀಟು ಹಂಚಿಕೆ ಪ್ರಕ್ರಿಯೆಯಿಂದ ಹೊರ ಹಾಕಲಾಗುತ್ತದೆ. ಮತ್ತೆ ಒಳ ಬರಲು ಅವಕಾಶ ಇಲ್ಲ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದರು.ಮಾಹಿತಿ ನೀಡಿದರು.

ವೈದ್ಯಕೀಯ ಪ್ರವೇಶ ಪ್ರಕ್ರಿಯೆ: ವೈದ್ಯಕೀಯ ಕೌನ್ಸೆಲಿಂಗ್‌ ಪರಿಷತ್ತು ಅಖಿಲ ಭಾರತ ಕೋಟಾದ ಸೀಟುಗಳ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಸೆ. 12ರಿಂದ ಆರಂಭಿಸುತ್ತಿದ್ದು, ರಾಜ್ಯದಲ್ಲೂ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಮತ್ತು ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.