ADVERTISEMENT

ಏಪ್ರಿಲ್‌ 23, 24ಕ್ಕೆ ಸಿಇಟಿ: ಜನವರಿ 17ರಿಂದಲೇ ನೋಂದಣಿ ಆರಂಭ

‌ವಿದ್ಯಾರ್ಥಿಗಳ ಅನುಕೂಲಕ್ಕೆ ‘ಸಿಇಟಿ ದಿಕ್ಸೂಚಿ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 15:31 IST
Last Updated 2 ಜನವರಿ 2026, 15:31 IST
<div class="paragraphs"><p> ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್‌ 23 ಮತ್ತು 24ರಂದು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ನಡೆಸಲಿದ್ದು, ಜನವರಿ 17ರಿಂದ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಅವರು ಶುಕ್ರವಾರ, ಸಿಇಟಿ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) 2026ರಲ್ಲಿ ನಡೆಸಲಿರುವ ಎಲ್ಲ ಪ್ರವೇಶ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದರು.

ADVERTISEMENT

‘ಈ ಬಾರಿಯೂ ಒಟಿಪಿ ಆಧಾರಿತ ಅರ್ಜಿ ಸಲ್ಲಿಕೆ ವ್ಯವಸ್ಥೆ ಇರಲಿದೆ. ನೋಂದಣಿ ಮತ್ತು ಲಾಗಿನ್‌ ನಂತರ ಅಭ್ಯರ್ಥಿಗಳು ಅರ್ಜಿ ವಿವರಗಳ ಜತೆಗೆ ಒಟಿಪಿ ಸಲ್ಲಿಸುವುದು ಕಡ್ಡಾಯ. ಇಲ್ಲವೆ, ಅಭ್ಯರ್ಥಿಯೇ ನೈಜ ಸಮಯದಲ್ಲಿ ತಮ್ಮ ಚಿತ್ರವನ್ನು ಸಲ್ಲಿಸಬೇಕಾಗುತ್ತದೆ. ಪರೀಕ್ಷಾ ಅಕ್ರಮಗಳನ್ನು ತಪ್ಪಿಸಲು ಈ ವ್ಯವಸ್ಥೆಯನ್ನು ಮುಂದುವರೆಸಲಾಗುತ್ತಿದೆ’ ಎಂದು ಕೆಇಎ ಮೂಲಗಳು ತಿಳಿಸಿವೆ.

ಸಿಇಟಿ ದಿಕ್ಸೂಚಿ: ಸಿಇಟಿಗೆ ನೋಂದಣಿ, ಅರ್ಜಿ ಸಲ್ಲಿಕೆ, ಅರ್ಜಿ ತಿದ್ದುಪಡಿ ಮೊದಲಾದ ಪ್ರಕ್ರಿಯೆಗಳನ್ನು ಅಭ್ಯರ್ಥಿಗಳು ಹೇಗೆ ನಿರ್ವಹಿಸಬೇಕು ಎಂಬುದನ್ನು ವಿವರಿಸುವ ‘ಸಿಇಟಿ ದಿಕ್ಸೂಚಿ’ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಿಡುಗಡೆ ಮಾಡಿದೆ.

ದಿಕ್ಸೂಚಿಯನ್ನು ಬಿಡುಗಡೆ ಮಾಡಿದ ಸಚಿವ ಎಂ.ಸಿ.ಸುಧಾಕರ್‌, ‘ಅತ್ಯಾಧುನಿಕ ಜಾಲತಾಣ, ಮೊಬೈಲ್ ಅಪ್ಲಿಕೇಷನ್‌ ಮತ್ತು ಅಭ್ಯರ್ಥಿಗಳಿಗೆ ನೆರವಾಗಲು ಚಾಟ್‌ಬಾಟ್‌ಗಳನ್ನು ರೂಪಿಸಿದ್ದರೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಡಕಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಸಿಇಟಿ ಪ್ರಕ್ರಿಯೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಸಚಿತ್ರವಾಗಿ ವಿವರಿಸುವ ಕೈಪಿಡಿಯನ್ನು ರೂಪಿಸಿದ್ದೇವೆ. ಈ ‘ಸಿಇಟಿ ದಿಕ್ಸೂಚಿ’ಯನ್ನು ಎಲ್ಲ ಕಾಲೇಜುಗಳಿಗೆ ತಲುಪಿಸಿ, ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ’ ಎಂದರು.

‘ಕಾಲೇಜು ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರೆ, ಅದು ಅಂತಿಮ. ಸರ್ಕಾರದಿಂದ ಈ ಸಂಬಂಧ ಆದೇಶ ಬಂದರೆ, ಅದನ್ನು ಪಾಲಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.