ADVERTISEMENT

₹64 ಕೋಟಿ ವೆಚ್ಚದ ಕೆಂಪೇಗೌಡರ ‘ಪ್ರಗತಿ ಪ್ರತಿಮೆ’ ಅನಾವರಣ

ಪ್ರತಿಮೆಗೆ 98 ಟನ್‌ ಕಂಚು ಮತ್ತು ಪೀಠಕ್ಕೆ 120 ಟನ್‌ ಉಕ್ಕು ಬಳಕೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 19:04 IST
Last Updated 11 ನವೆಂಬರ್ 2022, 19:04 IST
ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರ ಪ್ರತಿಮೆ
ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರ ಪ್ರತಿಮೆ   

ಬೆಂಗಳೂರು: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ನಿರ್ಮಿಸಿರುವ ‘ಪ್ರಗತಿ ಪ್ರತಿಮೆ’ಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅನಾವರಣಗೊಳಿಸಿದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಿರುವ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಗೆ ‘ಪ್ರಗತಿಯ ಪ್ರತಿಮೆ’ ಎಂದು ನಾಮಕರಣ ಮಾಡಲಾಗಿದೆ.

2020ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ಈ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ₹64 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಪ್ರತಿಮೆಯು 218 ಟನ್‌ ತೂಕವಿದೆ. ಪ್ರತಿಮೆಯ ಖಡ್ಗವೇ 4 ಟನ್‌ ತೂಕವಿದೆ. ರಾಮ್‌ ವಿ. ಸುತಾರ ಅವರು ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

ADVERTISEMENT

90 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು 18 ಅಡಿ ಎತ್ತರದ ಕಾಂಕ್ರೀಟ್‌ ಪೀಠದ ಮೇಲೆ ಸ್ಥಾಪಿಸಲಾಗಿದೆ. ಪ್ರತಿಮೆಗೆ 98 ಟನ್‌ ಕಂಚು ಮತ್ತು ಪೀಠಕ್ಕೆ 120 ಟನ್‌ ಉಕ್ಕು ಬಳಸಲಾಗಿದೆ.ಪ್ರತಿಮೆಯ ಸುತ್ತ 23 ಎಕರೆ ಪ್ರದೇಶದಲ್ಲಿ ಥೀಮ್‌ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದ್ದು, ₹20 ಕೋಟಿ ವೆಚ್ಚವಾಗಲಿದೆ.

‘ಬೆಂಗಳೂರು ನಿರ್ಮಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪಾತ್ರ ಅಸಾಧಾರಣವಾದುದು. ಜನರ ಕಲ್ಯಾಣವನ್ನು ಯಾವಾಗಲೂ ಎಲ್ಲಕ್ಕಿಂತ ಮಿಗಿಲಾಗಿ ನೋಡುತ್ತಿದ್ದ ಕ್ರಿಯಾಶೀಲ ದಾರ್ಶನಿಕ ಎಂದು ಅವರನ್ನು ನೆನಪಿಸಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ಪ್ರಗತಿಯ ಪ್ರತಿಮೆಯನ್ನು ಉದ್ಘಾಟಿಸಿರುವುದು ಗೌರವದ ವಿಷಯವಾಗಿದೆ’ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

‘ಕುಲ ಕುಲವೆಂದು ಏಕೆ ಹೊಡೆದಾಡುವಿರಿ’
ಭಕ್ತ ಕನಕದಾಸರ ಕುರಿತು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, ‘ಕುಲ ಕುಲ ಕುಲವೆಂದು ಏಕೆ ಹೊಡೆದಾಡುವಿರಿ... ಎಂದು ಪ್ರಶ್ನಿಸಿದ್ದ ಕನಕದಾಸರು ಜಾತಿ ತಾರತಮ್ಯವನ್ನು ಅಂತ್ಯಗೊಳಿಸುವ ಸಂದೇಶ ರವಾನಿಸಿದ್ದರು’ ಎಂದರು.

‘ಈಗ ಜಗತ್ತು ಕಿರುಧಾನ್ಯಗಳ ಕುರಿತು ಮಾತನಾಡುತ್ತಿದೆ. ಆದರೆ, ಕನಕದಾಸರು ರಾಮಧಾನ್ಯ ಚರಿತ್ರೆ ಕೃತಿಯಲ್ಲಿ ರಾಗಿಯ ಕುರಿತು ಹೇಳಿದ್ದರು’ ಎಂದು ಹೇಳಿದರು.

ವೇದಿಕೆಯಲ್ಲಿ 24 ಮಂದಿ
ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸುವ ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಅತಿಥಿಗಳ ಸಂಖ್ಯೆಯನ್ನು ಸಾಮಾನ್ಯವಾಗಿ ಒಂದಂಕಿಗೆ ಸೀಮಿತಗೊಳಿಸಲಾಗುತ್ತಿತ್ತು. ಕೆಲವೊಮ್ಮೆ ಐದಕ್ಕಿಂತ ಹೆಚ್ಚು ಇರುತ್ತಿರಲಿಲ್ಲ. ಆದರೆ, ಈ ಬಾರಿ ಪ್ರಧಾನಿ ಸೇರಿದಂತೆ 24 ಮಂದಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಲ್ಹಾದ ಜೋಶಿ ಸೇರಿದಂತೆ ಐವರು ಕೇಂದ್ರ ಸಚಿವರು, ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಆರ್‌. ಅಶೋಕ, ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಸೇರಿದಂತೆ ರಾಜ್ಯದ 12 ಸಚಿವರು, ಶಾಸಕ ಬಿ.ಎಸ್‌. ಯಡಿಯೂರಪ್ಪ, ಸಂಸದ ಡಿ.ವಿ. ಸದಾನಂದ ಗೌಡ ವೇದಿಕೆಯಲ್ಲಿದ್ದರು.

‘ಮೋದಿ ಶ್ರೇಷ್ಠ ನಾಯಕ: ಚುಂಚನಗಿರಿ ಶ್ರೀ
‘ಸಂಸ್ಕೃತಿ ತಿಳಿದವರು ದೇಶಕ್ಕೆ ಶಕ್ತಿ ನೀಡುತ್ತಾರೆ. ಸಂಸ್ಕೃತಿ ಅರಿಯದೇ ಇರುವವರಿಂದ ಅದು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ನಾಡಪ್ರಭು ಕೆಂಪೇಗೌಡ ಅವರಂತೆ ಶ್ರೇಷ್ಠ ನಾಯಕ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಕೊಂಡಾಡಿದರು.

‘ಒಂದು ಕಾಲದಲ್ಲಿ ನಾವು (ಭಾರತೀಯರು) ಬೇರೆಯವರನ್ನು ಕೇಳಿ ಆಡಳಿತ ನಡೆಸಬೇಕಾದ ಸ್ಥಿತಿ ಇತ್ತು. ಆದರೆ, ಈಗ ಬೇರೆ ರಾಷ್ಟ್ರಗಳು ತಮ್ಮ ಸಮಸ್ಯೆ ಪರಿಹಾರಕ್ಕೆ ಭಾರತದ ನೆರವು ಕೇಳುತ್ತಿವೆ. ಪ್ರಧಾನಿಯವರ ‘ಕರ್ಮಜ್ಞಾನ’ದ ಶಕ್ತಿಯಿಂದ ಇದು ಸಾಧ್ಯವಾಗಿದೆ. ಮೋದಿ ಈಗ ವಿಶ್ವದ ನಾಯಕ’ ಎಂದು ಹೇಳಿದರು.

ಕೆಂಪೇಗೌಡರು ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಬೆಂಗಳೂರು ಕಟ್ಟಿದ್ದರು. 64 ಸಮುದಾಯಗಳಿಗೂ ಪೇಟೆ ನಿರ್ಮಿಸಿದ್ದರು. ಅವರ ಚಿಂತನೆಗಳು ದೇಶಕ್ಕೆ ಶಕ್ತಿ ತುಂಬಿವೆ ಎಂದರು.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಸೇರಿದ್ದ ಜನಸ್ತೋಮ –ಪ್ರಜಾವಾಣಿ ಚಿತ್ರ

ಹರಿದುಬಂದ ಜನಸಾಗರ
ಸಮಾರಂಭಕ್ಕೆ ಸುತ್ತಲಿನ ಹಲವು ಜಿಲ್ಲೆಗಳಿಂದ ಜನಸಾಗರವೇ ಹರಿದುಬಂದಿತ್ತು. ಪ್ರಧಾನ ವೇದಿಕೆಯ ಎದುರು ಹಾಕಿದ್ದ ಮೂರು ಪೆಂಡಾಲ್‌ಗಳು ಭರ್ತಿಯಾಗಿದ್ದು, ಕೊನೆಯವರೆಗೂ ಜನರು ಬರುತ್ತಲೇ ಇದ್ದರು.

ಹೆದ್ದಾರಿಯಿಂದ ಸಮಾರಂಭದ ವೇದಿಕೆ ತಲುಪುವ ರಸ್ತೆ ಕಿರಿದಾಗಿತ್ತು. ಇದರಿಂದಾಗಿ ಬೆಳಿಗ್ಗೆಯೇ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಮಧ್ಯಾಹ್ನದ ವೇಳೆಗೆ ಜನರು ದೂರದಲ್ಲೇ ವಾಹನಗಳಿಂದ ಇಳಿದು ನಡೆದು ಬರಬೇಕಾಯಿತು. ಸಮಾರಂಭ ಮುಗಿದ ಬಳಿಕವೂ ಕಿಲೋಮೀಟರ್‌ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.