
ತಿರುವನಂತಪುರ: ಕೇರಳದ ಕನ್ನಡ ಶಾಲೆಗಳಲ್ಲೂ ಮಲಯಾಳ ಬೋಧಿಸುವ ಉದ್ದೇಶಿತ ಮಲಯಾಳ ಭಾಷಾ ಮಸೂದೆಯ ಕುರಿತಾದ ಕಳವಳಗಳು ಸತ್ಯಾಂಶಗಳನ್ನು ಆಧರಿಸಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಮಸೂದೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದ ಒಂದು ದಿನದ ಬಳಿಕ ಪಿಣರಾಯಿ ವಿಜಯನ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಭಾಷಾ ಅಲ್ಪಸಂಖ್ಯಾತರು ಮತ್ತು ಭಾರತದ ಬಹುತ್ವದ ನೀತಿಯನ್ನು ರಕ್ಷಿಸುವ ಅಗತ್ಯವನ್ನು ಉಲ್ಲೇಖಿಸಿ, ಈ ಮಸೂದೆಯನ್ನು ಜಾರಿಗೆ ತಂದರೆ, ಕರ್ನಾಟಕವು ಲಭ್ಯವಿರುವ ಎಲ್ಲಾ ಸಾಂವಿಧಾನಿಕ ವಿಧಾನಗಳನ್ನು ಬಳಸಿಕೊಂಡು ಅದನ್ನು ವಿರೋಧಿಸುತ್ತದೆ ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಎಚ್ಚರಿಸಿದ್ದರು. ಇದಕ್ಕೂ ಮೊದಲು, ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಪ್ರಥಮ ಭಾಷೆಯನ್ನಾಗಿ ಮಲಯಾಳ ಕಲಿಸುವುದನ್ನು ಕಡ್ಡಾಯಗೊಳಿಸುವ ಮೂಲಕ ಮಲಯಾಳ ಭಾಷಾ ಮಸೂದೆಯು ಭಾಷಾ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ. ಕೇರಳದ ಗಡಿ ಪ್ರದೇಶಗಳ, ವಿಶೇಷವಾಗಿ ಕಾಸರಗೋಡಿನ ಮೂಲ ವಾಸ್ತವಗಳನ್ನು ನಿರ್ಲಕ್ಷಿಸುತ್ತದೆ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಟೀಕಿಸಿದ್ದರು.
‘ಕರ್ನಾಟಕ ಮತ್ತು ಕೇರಳ ಭೌಗೋಳಿಕ ಸಾಮೀಪ್ಯವಷ್ಟೇ ಅಲ್ಲದೆ, ಆಳವಾದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಮಾನವೀಯ ಬಂಧಗಳಿಂದ ಕೂಡಿದ್ದು, ದೀರ್ಘಕಾಲದ ಸಂಬಂಧವನ್ನು ಹೊಂದಿವೆ. ಕಾಸರಗೋಡು ಮತ್ತಿತರ ಗಡಿ ಪ್ರದೇಶಗಳು ಆತ್ಮಸ್ಫೂರ್ತಿಯ ಜೀವಂತ ಉದಾಹರಣೆಗಳಾಗಿವೆ. ಅಲ್ಲಿ ಮಲಯಾಳ, ಕನ್ನಡ, ತುಳು, ಬ್ಯಾರಿ ಹಾಗೂ ಇತರ ಭಾಷೆಗಳು ತಲೆಮಾರುಗಳಿಂದ ದಿನನಿತ್ಯದ ಜೀವನ, ಶಿಕ್ಷಣ ಮತ್ತು ಗುರುತನ್ನು ರೂಪಿಸಿಕೊಂಡು ಬಂದಿವೆ. ಗಡಿಭಾಗದ ಜಿಲ್ಲೆಗಳ ಕನ್ನಡ ಮಾಧ್ಯಮ ಶಾಲೆಗಳಲ್ಲೂ ಮಲಯಾಳ ಮಾಧ್ಯಮವನ್ನು ಪ್ರಥಮ ಭಾಷೆಯಾಗಿಸುತ್ತಿರುವುದು ಆತಂಕ ಮೂಡಿಸಿದೆ’ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ವಿಜಯನ್, ಕೇರಳ ಸರ್ಕಾರವು "ಜಾತ್ಯತೀತತೆ ಮತ್ತು ಬಹುತ್ವದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ದೃಢವಾಗಿ ಉಳಿದಿದೆ ಎಂದು ಹೇಳಿದ್ದಾರೆ.
ಭಾಷಾ ಅಲ್ಪಸಂಖ್ಯಾತರ, ವಿಶೇಷವಾಗಿ ಕನ್ನಡ ಮತ್ತು ತಮಿಳು ಮಾತನಾಡುವ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಮಸೂದೆಯು ಸ್ಪಷ್ಟ ಮತ್ತು ನಿಸ್ಸಂದಿಗ್ಧವಾದ, ಅನಿಯಂತ್ರಿತವಾದ ಷರತ್ತನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ. ಮಸೂದೆಯ ನಿಬಂಧನೆಯ ಚತ್ರವನ್ನೂ ಅವರು ತಮ್ಮ ಪೋಸ್ಟ್‌ನೊಂದಿಗೆ ಲಗತ್ತಿಸಿದ್ದಾರೆ.
‘ಯಾವುದೇ ಭಾಷೆಯನ್ನು ಹೇರಲಾಗುವುದಿಲ್ಲ ಮತ್ತು ಭಾಷಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ರಕ್ಷಿಸಲಾಗುವುದು ಎಂದು ಮಸೂದೆಯ ಪ್ರಮುಖ ನಿಬಂಧನೆಗಳು ಖಚಿತಪಡಿಸುತ್ತವೆ. ಅಧಿಸೂಚಿತ ಪ್ರದೇಶಗಳಲ್ಲಿ, ತಮಿಳು ಮತ್ತು ಕನ್ನಡ ಭಾಷಿಕರು ಸಚಿವಾಲಯ, ಇಲಾಖಾ ಮುಖ್ಯಸ್ಥರು ಮತ್ತು ಸ್ಥಳೀಯ ಕಚೇರಿಗಳೊಂದಿಗೆ ಅಧಿಕೃತ ಪತ್ರವ್ಯವಹಾರಕ್ಕಾಗಿ ತಮ್ಮ ಮಾತೃಭಾಷೆಯನ್ನು ಬಳಸುವುದನ್ನು ಮುಂದುವರಿಸಬಹುದು. ಅವರಿಗೆ ಉತ್ತರಗಳನ್ನು ಅದೇ ಭಾಷೆಗಳಲ್ಲಿ ನೀಡಲಾಗುವುದು’ಎಂದು ಅವರು ವಿವರಿಸಿದ್ದಾರೆ.
ಮಲಯಾಳ ಮಾತೃಭಾಷೆಯಲ್ಲದ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮಕ್ಕೆ ಅನುಗುಣವಾಗಿ ಶಾಲೆಗಳಲ್ಲಿ ಲಭ್ಯವಿರುವ ಭಾಷೆಗಳನ್ನು ಆಯ್ಕೆ ಮಾಡಲು ಸ್ವತಂತ್ರರು ಎಂದು ಕೇರಳ ಮುಖ್ಯಮಂತ್ರಿ ಹೇಳಿದ್ದಾರೆ.
'ಇತರ ರಾಜ್ಯಗಳು ಅಥವಾ ವಿದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ 9 , 10 ಅಥವಾ ಹೈಯರ್ ಸೆಕೆಂಡರಿ ಹಂತಗಳಲ್ಲಿ ಮಲಯಾಳ ಭಾಷೆಯ ಪರೀಕ್ಷೆಗಳಿಗೆ ಹಾಜರಾಗಲು ಒತ್ತಾಯಿಸಲಾಗುವುದಿಲ್ಲ’ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೇರಳದ ಭಾಷಾ ನೀತಿಯು 1963ರ ಅಧಿಕೃತ ಭಾಷಾ ಕಾಯ್ದೆ ಮತ್ತು ಭಾರತದ ಸಂವಿಧಾನದ 346 ಮತ್ತು 347 ನೇ ವಿಧಿಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ವಿಜಯನ್ ಒತ್ತಿ ಹೇಳಿದರು.
‘ಭಾರತದ ವೈವಿಧ್ಯತೆಯನ್ನು ಸಂಭ್ರಮಿಸಬೇಕು, ಯಾವುದಕ್ಕೂ ಬಲವಂತಪಡಿಸಬಾರದು. ಭಾಗವಹಿಸುವಿಕೆ ಮತ್ತು ಪಾರದರ್ಶಕತೆಯ ಕೇರಳ ಮಾದರಿಯ ಮೇಲೆ ರಚಿಸಲಾದ ನಮ್ಮ ಸರ್ಕಾರವು ಪ್ರತಿಯೊಬ್ಬ ನಾಗರಿಕನ ಭಾಷಾ ಗುರುತನ್ನು ರಕ್ಷಿಸಲು ಬದ್ಧವಾಗಿದೆ. ಒಕ್ಕೂಟ ವ್ಯವಸ್ಥೆಯ ಹಕ್ಕುಗಳ ಯಾವುದೇ ಉಲ್ಲಂಘನೆಯನ್ನು ವಿರೋಧಿಸುತ್ತದೆ’ಎಂದು ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.