ADVERTISEMENT

ತೆರಿಗೆ ಹೆಚ್ಚಳ: ಕೇರಳ ಪ್ರವಾಸಕ್ಕೆ ಹಿಂದೇಟು

ವಾಹನ ಮಾಲೀಕರಿಗೆ ಹೊರೆಯಾದ ಹೊಸ ನಿಯಮ

ಕೆ.ಎಸ್.ಗಿರೀಶ್
Published 3 ಜನವರಿ 2019, 20:20 IST
Last Updated 3 ಜನವರಿ 2019, 20:20 IST
   

ಮೈಸೂರು: ಕೇರಳದ ಸಾರಿಗೆ ಇಲಾಖೆಯು ಬಾಕಿ ಉಳಿಸಿಕೊಂಡಿರುವ ಪ್ರವೇಶ ತೆರಿಗೆ ವಸೂಲಾತಿಗೆ ಮುಂದಾಗಿರುವುದು ರಾಜ್ಯದ ಟ್ಯಾಕ್ಸಿ ಮಾಲೀಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರಿಂದ ಬಹಳಷ್ಟು ಪ್ರವಾಸಿ ವಾಹನಗಳ ಮಾಲೀಕರು ಕೇರಳಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಕೇರಳದಲ್ಲಿ ಭೀಕರ ಪ್ರವಾಹ ಬಂದ ನಂತರ ಸಂಪನ್ಮೂಲ ಕ್ರೋಡೀಕರಣದಲ್ಲಿ ಅಲ್ಲಿನ ಸರ್ಕಾರ ತೊಡಗಿದೆ. ಪ್ರವೇಶ ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಹನಗಳ ಮಾಲೀಕರಿಂದ ವಸೂಲಾತಿ ಆರಂಭಿಸಿದೆ. 2014ರ ನಂತರ ಕೇರಳ ಗಡಿ ಪ್ರವೇಶಿಸಿದ ವಾಹನಗಳಿಂದ ಬಾಕಿ ಪ್ರವೇಶ ತೆರಿಗೆಯನ್ನು ಚೆಕ್‌ಪೋಸ್ಟ್‌ಗಳಲ್ಲಿ ವಸೂಲಿ ಮಾಡಲಾಗುತ್ತಿದೆ.

ಕೇರಳ ಗಡಿ ಪ್ರವೇಶಿಸಿದ ವಾಹನಗಳ ನೋಂದಣಿ ಸಂಖ್ಯೆಗಳು ಸುಲಭವಾಗಿ ಸಿಗುವಂತಹ ತಂತ್ರಾಂಶವನ್ನು ಅಲ್ಲಿನ ಸರ್ಕಾರ ಅಭಿವೃದ್ಧಿಪಡಿಸಿದೆ. ಈಗ ಬರುವ ವಾಹನಗಳ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತಿದೆ. ವಾಹನಗಳ ಮಾಲೀಕರು ತೆರಿಗೆಯನ್ನು ಒಟ್ಟಿಗೆ ಪಾವತಿಸುವ ಅನಿವಾರ್ಯಕ್ಕೆ ಸಿಲುಕಿದ್ದಾರೆ.

ADVERTISEMENT

2014ಕ್ಕೆ ಪೂರ್ವಾನ್ವಯವಾಗುವಂತೆ ಪ್ರವೇಶ ತೆರಿಗೆಯನ್ನು ಹೆಚ್ಚಿಸಲಾಗಿದೆ. ಆಗ ವಾಹನಗಳ ಮಾಲೀಕರು ಹಳೆಯ ಲೆಕ್ಕಾಚಾರದಲ್ಲಿ ತೆರಿಗೆ ಪಾವತಿಸಿದ್ದಾರೆ. ತೆರಿಗೆ ಹೆಚ್ಚಿಸಿದ ನಂತರ ವ್ಯತ್ಯಾಸದ ಮೊತ್ತವನ್ನು ಪಾವತಿಸಬೇಕಾಗಿದೆ.

‘ಸಾಕಷ್ಟು ಸಲ ಕೇರಳಕ್ಕೆ ಹೋಗಿ ಬಂದಿದ್ದರೆ ಪ್ರವೇಶ ತೆರಿಗೆ ಬಾಕಿಯೂ ಅಷ್ಟೇ ಪ್ರಮಾಣದಲ್ಲಿ ಏರಿಕೆ ಆಗಿರುತ್ತದೆ. ಈಗ ಅಂತಹ ವಾಹನ ಮಾರಾಟ ಮಾಡಿದರೂ ಬಾಕಿ ಪಾವತಿಗೆ ಹಣ ಸಾಲುವುದಿಲ್ಲ’ ಎಂದು ಪ್ರವಾಸಿ ವಾಹನವೊಂದರ ಮಾಲೀಕ ವಿಜಯ್ ಹೇಳುತ್ತಾರೆ.

‘ತೆರಿಗೆ ಬಾಕಿ ಉಳಿಸಿಕೊಂಡಿರುವುದು ತಪ್ಪು ನಿಜ. ಆದರೆ, ಎಲ್ಲ ತೆರಿಗೆಯನ್ನು ಒಟ್ಟಿಗೆ ಪಾವತಿಸಿ ಎಂದರೆ ಚಾಲಕರ ಬಳಿ ಅಷ್ಟು ಹಣ ಇರುವುದಿಲ್ಲ. ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸಿದರೆ ಟ್ರಾವಲ್ಸ್‌ ಸಂಸ್ಥೆ ಮೇಲಿನ ನಂಬಿಕೆ ಹೋಗುತ್ತದೆ. ಏನು ಮಾಡುವುದು ಎಂದು ತಿಳಿಯುತ್ತಿಲ್ಲ’ ಎಂದು ಮತ್ತೊಂದು ಟೂರ್ಸ್ ಮತ್ತು ಟ್ರಾವಲ್ಸ್‌ ಮಾಲೀಕರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

‘ಹಿಂದೆ ಪ್ರವೇಶ ತೆರಿಗೆ ಕಡಿಮೆ ಇತ್ತು. ತೆರಿಗೆಯನ್ನು ಹೆಚ್ಚಿಸಿದ ನಂತರ ವ್ಯತ್ಯಾಸಗೊಂಡ ತೆರಿಗೆಯನ್ನು ವಸೂಲು ಮಾಡಲಾಗುತ್ತಿದೆ. ಈ ಕುರಿತು ಹೈಕೋರ್ಟ್‌ ಸ್ಪಷ್ಟ ಆದೇಶ ನೀಡಿದೆ’ ಎಂದು ಕಾಸರಗೋಡು ಜಿಲ್ಲೆಯ ಪೆರ್ಲಾದ ಕೇರಳ ಚೆಕ್‌ಪೋಸ್ಟ್‌ ಅಧಿಕಾರಿ ರಿಜಿನ್‌ ಹೇಳುತ್ತಾರೆ.

ಎಷ್ಟು ಹೆಚ್ಚಳ?:

6+1 ಆಸನದ ವಾಹನಕ್ಕೆ ಮೊದಲು ₹1,500– 2,000 ಇತ್ತು. ಈಗ ಅದನ್ನು ₹ 3,000ದಿಂದ ₹ 3,500ಕ್ಕೆ ಪೂರ್ವಾನ್ವಯವಾಗುವಂತೆ ಹೆಚ್ಚಿಸಲಾಗಿದೆ. ಇದೇ ರೀತಿ ವಿವಿಧ ಆಸನಗಳ ಸಾಮರ್ಥ್ಯದ ವಾಹನಗಳ ಪ್ರವೇಶ ತೆರಿಗೆಯನ್ನು ಪೂರ್ವಾನ್ವಯವಾಗುವಂತೆ ಏರಿಸಿ ಒಟ್ಟಿಗೆ ವಸೂಲು ಮಾಡಲಾಗುತ್ತಿದೆ ಎಂದು ಮೈಸೂರು ಟ್ರಾವಲ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಪ್ರಶಾಂತ್ ತಿಳಿಸಿದರು.

*ಕಂತಿನಲ್ಲಿ ತೆರಿಗೆ ಪಾವತಿಸಲು ಅವಕಾಶ ಕೊಡಬೇಕು. ಹೈಕೋರ್ಟ್ ಆದೇಶವನ್ನು ಮರುಪರಿಶೀಲಿಸಲು ಕೇರಳ ಸರ್ಕಾರ ಕೋರಬೇಕು.
- ಬಿ.ಎಸ್.ಪ್ರಶಾಂತ್, ಅಧ್ಯಕ್ಷರು, ಮೈಸೂರು ಟ್ರಾವಲ್ಸ್ ಅಸೋಸಿಯೇಷನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.