ADVERTISEMENT

ಮಡಿಕೇರಿ: ನಾಟಿ ಆಟದ ಸಂಭ್ರಮ ಕಸಿದ ಕೊರೊನಾ

‘ಕೆಸರು ಗದ್ದೆ ಕ್ರೀಡಾಕೂಟ’ದ ಮೇಲೂ ಕೋವಿಡ್‌ ಕರಿನೆರಳು, ಕ್ರೀಡಾಪಟುಗಳಿಗೆ ನಿರಾಸೆ

ಅದಿತ್ಯ ಕೆ.ಎ.
Published 25 ಜುಲೈ 2020, 19:30 IST
Last Updated 25 ಜುಲೈ 2020, 19:30 IST
ಕೆಸರು ಗದ್ದೆ ಓಟದ ದೃಶ್ಯ (ಸಂಗ್ರಹ ಚಿತ್ರ)
ಕೆಸರು ಗದ್ದೆ ಓಟದ ದೃಶ್ಯ (ಸಂಗ್ರಹ ಚಿತ್ರ)   

ಮಡಿಕೇರಿ: ಭತ್ತದ ಗದ್ದೆಯ ತುಂಬೆಲ್ಲಾ ನೀರು, ಜೊತೆಗೆ ಮಳೆಯ ಸಿಂಚನ, ಕೆಲಹೊತ್ತು ವರುಣನ ಅಬ್ಬರ– ಗಾಳಿ ಆರ್ಭಟ, ನಾಟಿ ಗದ್ದೆಗಳೇ ಕ್ರೀಡಾಂಗಣ, ಅಲ್ಲಿ ಕ್ರೀಡಾಪಟುಗಳ ಕಲರವ... ಕೆಸರಿನ ಮಜ್ಜನ, ವಯಸ್ಕರಿಂದ ಹಿಡಿದು ಚಿಕ್ಕವರ ತನಕವೂ ಓಡಿ ಗುರಿ ತಲುಪುವ ತವಕ, ಕೆಸರಿನಲ್ಲೇ ಹಗ್ಗಜಗ್ಗಾಟ, ವಾಲ್‌ಬಾಲ್‌ ಆಟ, ಕ್ರೀಡಾಪಟುಗಳ ಹುರಿದುಂಬಿಸಲು ಪ್ರೇಕ್ಷಕರ ಸಾಲಿನಿಂದ ಚಪ್ಪಾಳೆ...

ಕೊಡಗು ಜಿಲ್ಲೆಯಲ್ಲಿ ಜುಲೈ ಕೊನೆ ಹಾಗೂ ಆಗಸ್ಟ್‌ ಮೊದಲ ವಾರದಲ್ಲಿ ಭತ್ತದ ಗದ್ದೆಗಳಲ್ಲಿ ಕಾಣಿಸುತ್ತಿದ್ದ ದೃಶ್ಯವಿದೆ. ಆದರೆ, ಈ ವರ್ಷ ನಾಟಿ ಆಟದ ಸಂಭ್ರಮ ಮಾಯವಾಗಿದೆ. ಎಲ್ಲೂ ಈ ಖುಷಿ ಕಾಣಿಸುತ್ತಿಲ್ಲ.

ಜಾಗತಿಕವಾಗಿ ಕಾಡುತ್ತಿರುವ ‘ಕೊರೊನಾ’ ಕಾಯಿಲೆ ಭತ್ತದ ಸಸಿ ನಾಟಿಗೂ ಮೊದಲು ನಡೆಯುತ್ತಿದ್ದ ಸಡಗರವನ್ನು ಕಸಿದುಕೊಂಡಿದೆ. ಕಾಫಿ ನಾಡಿನ ಭತ್ತದ ಗದ್ದೆಗಳೂ ಆ ಸಂಭ್ರಮವಿಲ್ಲದೇ ಬಿಕೋ ಎನ್ನುತ್ತಿವೆ. ಉತ್ಸಾಹಿ ಸ್ಪರ್ಧಿಗಳಿಗೆ ನಿರಾಸೆ ಮೂಡಿಸಿದೆ.

ADVERTISEMENT

ಪ್ರತಿವರ್ಷವು ಕಗ್ಗೊಡ್ಲು ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಆಶ್ರಯದಲ್ಲಿ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ನಡೆಯುತ್ತಿತ್ತು.

ಕಳೆದ ವರ್ಷವು ದಿನಾಂಕ ನಿಗದಿ ಮಾಡಿದ್ದರೂ ಮಳೆ ಹೆಚ್ಚಾದ ಕಾರಣಕ್ಕೆ ಕ್ರೀಡಾ ಸಂಭ್ರಮವನ್ನು ದಿಢೀರ್‌ ರದ್ದು ಮಾಡಲಾಗಿತ್ತು. ಆದರೆ, ಈ ವರ್ಷ ಕೊರೊನಾ ಪರಿಣಾಮ ಗದ್ದೆಗಳು ಕ್ರೀಡಾ ಚಟುವಟಿಕೆ ಇಲ್ಲದೇ ನಾಟಿ ಕಾರ್ಯಕ್ಕೆ ಅಣಿಯಾಗುತ್ತಿದೆ.

ಬರೀ ಕಗ್ಗೊಡ್ಲು ಮಾತ್ರವಲ್ಲದೇ ಗಾಳಿಬೀಡು, ಕಾಲೂರು, ಹಾಕತ್ತೂರು, ಬಾಳೆಲೆ, ಶ್ರೀಮಂಗಲ, ಪೊನ್ನಂಪೇಟೆ, ಶನಿವಾರಸಂತೆ, ಸೋಮವಾರಪೇಟೆ... ಹೀಗೆ ಜಿಲ್ಲೆಯ ಮೂಲೆ ಮೂಲೆಗಳು ಹಲವು ವರ್ಷದಿಂದ ಕೆಸರು ಗದ್ದೆ ಕ್ರೀಡೆ ಸಂಘಟಿಸಲಾಗುತ್ತಿತ್ತು. ಈಗ ಅದ್ಯಾವುದೂ ಇಲ್ಲ. ಬರೀ ಸಂಘಟನೆಗಳು ಹಾಗೂ ಗ್ರಾಮ ಸಮಿತಿಗಳು ಮಾತ್ರವಲ್ಲದೆ ಕೊಡವ ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಾಹಿತ್ಯ ಹಾಗೂ ಸಂಸ್ಕೃತಿ ಅಕಾಡೆಮಿಯಿಂದಲೂ ಮಲೆನಾಡಿನ ಈ ಕ್ರೀಡಾಕೂಟಕ್ಕೆ ಪ್ರೋತ್ಸಾಹ ಲಭಿಸುತ್ತಿತ್ತು.

ನಾಟಿಗೆ ಸಿದ್ಧತೆ

ಈ ವರ್ಷ ಜುಲೈ ಅಂತ್ಯದವರೆಗೂ ಮಳೆಯ ಅಬ್ಬರ ಕಡಿಮೆಯಿದೆ. ಕಳೆದ ಎರಡು ವರ್ಷಗಳಂತೆಯೇ ಆಗಸ್ಟ್‌ ಮೊದಲ ವಾರದಲ್ಲಿ ಉತ್ತಮ ಮಳೆ ನಿರೀಕ್ಷೆಯಿದೆ. ಜಿಲ್ಲೆಯ ಯಾವ ಮೂಲೆಯಲ್ಲೂ ಕ್ರೀಡಾ ಸಂಭ್ರಮ ಇಲ್ಲ. ಹೀಗಾಗಿ, ಉಳುಮೆ– ನಾಟಿಗೆ ಸಿದ್ಧತೆಗಳು ಬಿರುಸುಗೊಂಡಿವೆ. ವಿರಾಜಪೇಟೆಗೆ ತೆರಳುವ ಕಗ್ಗೊಡ್ಲು ಗ್ರಾಮದ ಬಳಿ ಬಲ ಭಾಗಕ್ಕೆ ಕಾಣಿಸುವ ಭತ್ತದ ಗದ್ದೆಗಳಲ್ಲಿ ಟಿಲ್ಲರ್‌ ಮೂಲಕ ಉಳುಮೆ ಮಾಡುತ್ತಿದ್ದ ದೃಶ್ಯವು ಶನಿವಾರ ಕಂಡುಬಂತು.

ಸ್ಥಳೀಯರನ್ನು ವಿಚಾರಿಸಿದಾಗ, ‘ನೋಡಿ ಸರ್,‌ ಕೊರೊನಾ ನಮ್ಮ ನಾಟಿ ಆಟದ ಸಂಭ್ರಮವನ್ನೂ ಕಸಿದಿದೆ’ ಎಂದು ನೋವು ತೋಡಿಕೊಂಡರು.

ಕೃಷಿಗೆ ಪ್ರೋತ್ಸಾಹಿಸಲು ಕ್ರೀಡೆ

ಜಿಲ್ಲೆಯಲ್ಲಿ ಮನರಂಜನೆಗಾಗಿ ಮಾತ್ರ ಕೆಸರುಗದ್ದೆ ಕ್ರೀಡಾಕೂಟ ಆಯೋಜನೆ ಮಾಡುತ್ತಿರಲಿಲ್ಲ. ಭತ್ತದ ಕೃಷಿಗೆ ಉತ್ತೇಜನ ನೀಡಲು ಕ್ರೀಡಾಕೂಟಗಳು ನಡೆಯುತ್ತಿದ್ದವು. ಜಿಲ್ಲೆಯಲ್ಲಿ ಭತ್ತದ ಕೃಷಿಕರಿಂದ ವಿಮುಖರಾಗುವವರ ಸಂಖ್ಯೆ ಕಡಿಮೆ ಆಗಿತ್ತು. ಯುವಕರು ಗದ್ದೆಗಳತ್ತ ತಿರುಗಿಯೂ ನೋಡುತ್ತಿರಲಿಲ್ಲ. ಕೆಸರುಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದ ಮಹಿಳೆಯರು, ವಿದ್ಯಾರ್ಥಿನಿಯರು, ಯುವಕರು ಹಾಗೂ ಎನ್‌ಸಿಸಿ, ಎನ್‌ಎಸ್‌ಎಸ್ ಕೆಡೆಟ್‌ಗಳಿಗೆ ಕೃಷಿಯ ಮಹತ್ವವನ್ನು ತಿಳಿಸಿ ಅರಿವು ಮೂಡಿಸಲಾಗುತ್ತಿತ್ತು.

ಯಾವೆಲ್ಲಾ ಕ್ರೀಡೆ?

ವಾಲಿಬಾಲ್‌, ಥ್ರೋಬಾಲ್‌, ಹಗ್ಗಜಗ್ಗಾಟ, ಕೆಸರು ಗದ್ದೆ ಓಟ, ಮುಕ್ತ ಓಟ, ಸಾಂಪ್ರದಾಯಿಕ ನಾಟಿ ಓಟದ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ನಡೆಯುತ್ತಿದ್ದವು. ಗೆದ್ದ ತಂಡಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನವೂ ಸಿಗುತ್ತಿತ್ತು.

ತೆಂಗಿನ ಕಾಯಿ... ಎಲೆ ಅಡಿಕೆ...

ಕ್ರೀಡಾಪಟುಗಳ ತವರೂರು ಕೊಡಗು ಜಿಲ್ಲೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟಕ್ಕೆ ತನ್ನದೇ ಆದ ಚಾರಿತ್ರಿಕ ಹಿನ್ನೆಲೆಯಿದೆ. ಬಹಳ ವರ್ಷಳ ಹಿಂದೆ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಜಯಗಳಿಸಿದವರಿಗೆ ಬಾಳೆಗೊನೆ, ತೆಂಗಿನ ಕಾಯಿ ಹಾಗೂ ಎಲೆ ಅಡಿಕೆ ನೀಡಿ ಗೌರವಿಸುತ್ತಿದ್ದರು ಎಂದು ಹಿರಿಯರು ಸ್ಮರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.