ADVERTISEMENT

ಕೆಎಫ್‌ಡಿ ಚಿಕಿತ್ಸಾ ಪ್ಯಾಕೇಜ್ ಅಂತಿಮ

ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 18:48 IST
Last Updated 18 ಏಪ್ರಿಲ್ 2020, 18:48 IST
   

ಬೆಂಗಳೂರು:ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಯೋಜನೆಯಡಿ ಮಂಗನಕಾಯಿಲೆಗೆ (ಕೆಎಫ್‌ಡಿ) ತುತ್ತಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಚಿಕಿತ್ಸಾ ಪ್ಯಾಕೇಜ್ ಅಂತಿಮಗೊಳಿಸಲಾಗಿದೆ.

ಆಯು‌ಷ್ಮಾನ್ ಅಥವಾ ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಗಳು ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಂಗನಕಾಯಿಲೆಗೆ ಚಿಕಿತ್ಸೆ ಪಡೆಯಬಹುದು. ಅದರ ಮೊತ್ತವನ್ನು ಈ ಯೋಜನೆಯಡಿ ಭರಿಸಲಾಗುತ್ತದೆ. ಆದರೆ, ಈ ಯೋಜನೆಗೆ ಅನ್ವಯಿಸುವ ಷರತ್ತುಗಳು ಮಂಗನಕಾಯಿಲೆವೂ ಅನ್ವಯವಾಗುತ್ತವೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕರು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. ಕೆಎಫ್‌ಡಿ ಶಂಕಿತ ವ್ಯಕ್ತಿಗೆ ದಿನಕ್ಕೆ ವಾರ್ಡ್‌ ಶುಲ್ಕ ಸಹಿತ ಚಿಕಿತ್ಸೆಗೆ ₹ 1,800, ಸಂಕೀರ್ಣವಲ್ಲದ ಪ್ರಕರಣದಲ್ಲಿ ದಿನಕ್ಕೆ ವಾರ್ಡ್‌ ಶುಲ್ಕ ಸಹಿತ ಚಿಕಿತ್ಸೆಗೆ ₹ 2,700, ಪ್ರಯೋಗಾಲಯ ಪರಿಕ್ಷೆಗೆ ಗರಿಷ್ಠ ₹2,000, ಸಂಕೀರ್ಣ ಪ್ರಕರಣಗಳಲ್ಲಿ ತೀವ್ರ ನಿಗಾ ಘಟಕ ಶುಲ್ಕ ಸಹಿತ ದಿನಕ್ಕೆ ₹ 4,500, ಹೆಚ್ಚುವರಿ ಔಷಧಿ ಬಳಕೆಗೆ ₹ 2,000 ಹಾಗೂ ಉನ್ನತ ಮಟ್ಟದ ವಿಕಿರಣಶಾಸ್ತ್ರದ ತನಿಖೆಗೆ ₹ 500 ನಿಗದಿಪಡಿಸಲಾಗಿದೆ.

ADVERTISEMENT

ಮಂಗನಿಂದ ಹರಡುವ ಈ ಕಾಯಿಲೆಯು ಆರು ದಶಕಗಳಿಂದ ಕಾಡುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ಗ ಈ ಕಾಯಿಲೆ ಈಗ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೂ ವಿಸ್ತರಿಸಿದೆ. ಈ ಸಂಬಂಧ ವೈರಾಣು ಪರೀಕ್ಷೆ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ, ಹೆಚ್ಚುವರಿ ಔಷಧಿ ಬಳಕೆ ಹಾಗೂ ಚಿಕಿತ್ಸೆಗೆ ದರ ನಿಗದಿ ಮಾಡಲಾಗಿದೆ.

ಆಸ್ಪತ್ರೆ ಆಯ್ಕೆಗೆ ಅವಕಾಶ

ಈ ಪ್ಯಾಕೇಜ್‌ಗಳನ್ನು ತುರ್ತು ಸಂದರ್ಭದ ಚಿಕಿತ್ಸಾ ಪ್ಯಾಕೇಜ್‌ಗಳೆಂದು ಗುರುತಿಸಿರುವ ಕಾರಣ ನೇರವಾಗಿ ಸಾರ್ವಜನಿಕ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದು. ಚಿಕಿತ್ಸೆಗೆ ಹೆಚ್ಚುವರಿ ಔಷಧಿಗಳಲ್ಲಿ ಬಳಸಿದಲ್ಲಿ ಪೂರಕ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.