ADVERTISEMENT

ಮಧ್ಯಪ್ರದೇಶದ ಖಡಕ್ನಾಥ್‌ ಕೋಳಿ ರಾಯಚೂರಿನಲ್ಲಿ!

ರೈತರನ್ನು ಅಚ್ಚರಿಗೊಳಿಸಿದ ಕಡುಗಪ್ಪು ಬಣ್ಣದ ದುಬಾರಿ ಕೋಳಿ

ನಾಗರಾಜ ಚಿನಗುಂಡಿ
Published 7 ಜನವರಿ 2019, 6:30 IST
Last Updated 7 ಜನವರಿ 2019, 6:30 IST
ಸಿಂಧನೂರಿನಲ್ಲಿ ನಡೆದ ಪಶು ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಖಡಕ್ನಾಥ್‌ ಕೋಳಿಗಳು
ಸಿಂಧನೂರಿನಲ್ಲಿ ನಡೆದ ಪಶು ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಖಡಕ್ನಾಥ್‌ ಕೋಳಿಗಳು   

ರಾಯಚೂರು: ಕಡುಗಪ್ಪು ವರ್ಣ ಹಾಗೂ ಹೊಳಪಿನ ಕಣ್ಣುಗಳನ್ನು ಹೊಂದಿರುವ ಕೋಳಿ ನೋಡುವುದಕ್ಕೆ ಜನರು ಮುಗಿಬಿದ್ದಿದ್ದರು. ಈ ಕೋಳಿಯ ಸಾಕಾಣಿಕೆ, ಅದರ ವಿಶೇಷ ಅಂಶಗಳು ಹಾಗೂ ಅದರ ಮೌಲ್ಯದ ಬಗ್ಗೆ ಕೇಳಿದವರೆಲ್ಲ ಅಚ್ಚರಿಗೊಳಗಾಗಿದ್ದರು.

ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆಯುತ್ತಿರುವ 2ನೇ ರಾಜ್ಯಮಟ್ಟದ ಮತ್ಸ್ಯ ಹಾಗೂ ಪಶು ಮೇಳದಲ್ಲಿ ಪ್ರದರ್ಶನಕ್ಕಾಗಿ ಇಟ್ಟಿರುವ ‘ಖಡತ್ನಾಥ ಕೋಳಿ’ಗಳಿರುವ ಮಳಿಗೆ ಎದುರು ಇಂತಹದ್ದೊಂದು ದೃಶ್ಯ ಕಂಡುಬಂತು.

ಇದು ಅಪ್ಪಟ ದೇಶಿ ತಳಿಯಾಗಿದ್ದರೂ ಬಹುತೇಕ ಜನರು ಇದೇ ಮೊದಲ ಬಾರಿ ಖಡಕ್ನಾಥ್‌ ಕೋಳಿ ನೋಡಿದ ಹಾಗೂ ಅದರ ಬಗ್ಗೆ ಕೇಳಿದ ಅನುಭವ ಕಾಣುತ್ತಿತ್ತು. ಇದು ಮಧ್ಯಪ್ರದೇಶದ ತಳಿ. ಉತ್ತರ ಭಾರತದ ರಾಜ್ಯಗಳಲ್ಲಿ ಖಡಕ್ನಾಥ್‌ ಕೋಳಿ ಚಿರಪರಿಚಿತ. ರಾಯಚೂರು ಜಿಲ್ಲೆಯಲ್ಲೂ ಬಹುತೇಕ ರೈತರಿಗೆ ಇದು ಹೊಸದು.

ADVERTISEMENT

ವಿಶೇಷವೆಂದರೆ, ಮೇಳದಲ್ಲಿ ಈ ಕೋಳಿಯನ್ನು ಪ್ರದರ್ಶನಕ್ಕೀಟು ಮಾಹಿತಿ ನೀಡುತ್ತಿದ್ದ ರೈತ ಮೊಹ್ಮದ್‌ ಇಬ್ರಾಹಿಂ ರಾಯಚೂರು ತಾಲ್ಲೂಕಿನ ಯರಗೇರಾದವರು. ಒಂದು ವರ್ಷದಿಂದ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಮಧ್ಯಪ್ರದೇಶದಿಂದ ಕೋಳಿಮರಿಗಳನ್ನು ತಂದು ಬೆಳೆಸಿದ್ದಾರೆ. ಈ ಬಗ್ಗೆ ಇತರೆ ರೈತರಿಗೂ ಮಾಹಿತಿ ಪಸರಿಸಲು ಮೇಳದಲ್ಲಿ ಪಾಲ್ಗೊಂಡಿದ್ದಾರೆ.

ನೋಡಲು ತುಂಬಾ ಕಪ್ಪು ಹಾಗೂ ಮಾಂಸವೂ ಕಪ್ಪು. ಇದರ ಇನ್ನೊಂದು ಹೆಸರು ‘ಕಾಸಿಮಸಿ’ ಇದ ಮೊಟ್ಟೆ ಕಂದು ಬಣ್ಣದ್ದು. ಕೋಳಿ ಮರಿಗಳು ನೀಲಿ ಮತ್ತು ಕಪ್ಪು ಬಣ್ಣ ಮಿಶ್ರಿತವಾಗಿರುತ್ತವೆ. ಮಧ್ಯಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈ ಕೋಳಿಗೆ ಪವಿತ್ರ ಹಕ್ಕಿ ಸ್ಥಾನಮಾನ ನೀಡಲಾಗಿದೆ. ಇದರ ಮಾಂಸ ಸೇವನೆಯಿಂದ ಅನೇಕ ಕಾಯಿಲೆಹಗಳು ವಾಸಿಯಾಗುತ್ತವೆ. ಮಾಂಸದಲ್ಲಿ ಔಷಧಿ ಗುಣಗಳಿವೆ ಎಂಬುದು ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳ ವಿವರಣೆ.
ಇದರ ಮಾಂಸದಲ್ಲಿ ಕಬ್ಬಿನಾಂಶ ತುಂಬಾ ಕಡಿಮೆ ಇದ್ದು, ಪ್ರೊಟಿನ್‌ ಅಂಶ ಹೆಚ್ಚಾಗಿರುತ್ತದೆ. ಇದರ ಸಾಕಾಣಿಕೆ ಅವಧಿ ನಾಲ್ಕು ತಿಂಗಳು ಮಾತ್ರ. ನಾಲ್ಕು ತಿಂಗಳಲ್ಲಿ ಇದರ ಗಾತ್ರವು 1.25 ಕಿಲೋ ಏರಿಕೆಯಾಗುತ್ತದೆ. ಈಚೆಗೆ ಈ ಕೋಳಿಯ ಜನಪ್ರಿಯತೆ ಹೆಚ್ಚಾಗುತ್ತಿದೆ. ನಿಧಾನವಾಗಿ ಬೇಡಿಕೆ ಕೂಡಾ ಏರ್ಪಟ್ಟಿದೆ.

‘ಯರಗೇರಾದಲ್ಲಿರುವ ಖಡಕ್ನಾಥ್‌ ಕೋಳಿ ಫಾರಂ ಜನರು ಹುಡುಕಿಕೊಂಡು ಬರುತ್ತಾರೆ. ಒಂದು ಕಿಲೋ ಕೋಳಿ ಮಾಂಸವನ್ನು ₹1 ಸಾವಿರಕ್ಕೆ ಮಾರಾಟ ಮಾಡುತ್ತೇವೆ. ಒಂದು ಕೋಳಿಯನ್ನು ತೂಗಿ ಖರೀದಿಸುವವರಿಗೆ ₹800 ಕ್ಕೆ ಸಿಗುತ್ತದೆ. ಸಾಕಾಣಿಕೆ ಮಾಡಲು ಕೋಳಿ ಮರಿ ದರ ₹220. ಒಂದು ವರ್ಷದ ಅವಧಿಯಲ್ಲಿ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಬಂದಿದೆ’ ಎನ್ನುತ್ತಾರೆ ಮೊಹ್ಮದ್‌ ಇಬ್ರಾಹಿಂ.

ಕೋಳಿ ಸಾಕಾಣಿಕೆ ಆಸಕ್ತಿ ಇರುವ ರೈತರು ಹಾಗೂ ಕೋಳಿ ಮಾಂಸಕ್ಕಾಗಿ ಇಬ್ರಾಹಿಂ ಅವರನ್ನು ಸಂಪರ್ಕಿಸಬಹುದು. ಮೊ. ಸಂಖ್ಯೆ97391 05712.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.