ADVERTISEMENT

1000 ಎಕರೆಯಲ್ಲಿ ‘ಕೆಎಚ್ಐಆರ್‌ ಸಿಟಿ’: ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 17:46 IST
Last Updated 8 ಫೆಬ್ರುವರಿ 2024, 17:46 IST
<div class="paragraphs"><p>ಎಂ.ಬಿ.ಪಾಟೀಲ</p></div>

ಎಂ.ಬಿ.ಪಾಟೀಲ

   

ಬೆಂಗಳೂರು: ಸಂಶೋಧನೆ, ಜ್ಞಾನದ ಅನ್ವೇಷಣೆಗೆ ಆದ್ಯತೆ ನೀಡುವ, ಆರೋಗ್ಯ ಸೇವೆ, ನವೋದ್ಯಮಗಳಿಗೆ ನೆಲೆ ಕಲ್ಪಿಸುವ ಉದ್ದೇಶದಿಂದ ನಗರದ ಹೊರವಲಯದ 1,000ಕ್ಕೂ ಹೆಚ್ಚು ಎಕರೆಯಲ್ಲಿ ‘ಕೆಎಚ್ಐಆರ್‌ ( ಜ್ಞಾನ, ಆರೋಗ್ಯ, ನಾವೀನ್ಯ ಮತ್ತು ಸಂಶೋಧನೆ) ಸಿಟಿ’ ನಿರ್ಮಾಣವಾಗಲಿದೆ.

ಕೆಎಚ್ಐಆರ್ (KHIR - Knowledge, Health, Innovation and Research) ಸಿಟಿಯ ವಿನ್ಯಾಸ ಹಾಗೂ ರೂಪುರೇಷೆಯ ಕುರಿತು ಬೋಸ್ಟನ್ ಕನ್ಸಲ್ಟೆನ್ಸಿ ಗ್ರೂಪ್‌(ಬಿಸಿಜಿ) ಸಿದ್ಧಪಡಿಸಿರುವ ಪ‍್ರಾತ್ಯಕ್ಷಿಕೆಯನ್ನು  ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಗುರುವಾರ ವೀಕ್ಷಿಸಿದರು. ಬಳಿಕ, ಅಧಿಕಾರಿಗಳು ಮತ್ತು ನಗರ ನಿರ್ಮಾಣ ತಜ್ಞರ ಜತೆ ಮೊದಲ ಹಂತದ ಸಮಾಲೋಚನೆ ನಡೆಸಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ, 'ಕೆಎಚ್ಐಆರ್ ಸಿಟಿಯಲ್ಲಿ ಸಂಶೋಧನೆ, ನಾವೀನ್ಯ ಮತ್ತು ಮೂಲ ಮಾದರಿಗಳ ಅಭಿವೃದ್ಧಿಗೆ ಒತ್ತು ಕೊಡಲಾಗುವುದು. ಇಲ್ಲಿ ತಯಾರಿಕಾ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಮೊದಲ ಹಂತದಲ್ಲಿ ಒಟ್ಟು 1,000 ಎಕರೆಯಲ್ಲಿ ಈ ಸಿಟಿ ನಿರ್ಮಾಣವಾಗಲಿದೆ. ತಲಾ 200-300 ಎಕರೆಗಳಂತೆ ಹಂತಹಂತವಾಗಿ ಅಭಿವೃದ್ಧಿಪಡಿಸಬೇಕು ಎಂಬ ಸಲಹೆಯನ್ನು ತಜ್ಞರು ನೀಡಿದ್ದಾರೆ' ಎಂದರು.

‘ಕೆಎಚ್ಐಆರ್ ಸಿಟಿ ಸಂಪೂರ್ಣವಾಗಿ ಖಾಸಗಿ ಉದ್ದಿಮೆಗಳ ಹೂಡಿಕೆಯಿಂದ ಆಗಲಿದೆ. ಸರ್ಕಾರವು ಇದಕ್ಕೆ ಭೂಮಿಯನ್ನು ಒದಗಿಸಲಿದೆ. ನಗರದಿಂದ ಒಂದು ಗಂಟೆ ಪ್ರಯಾಣದಲ್ಲಿ ತಲುಪುವಂತೆ ಈ ಸಿಟಿ ಇರಬೇಕು ಎನ್ನುವ ಸಲಹೆ ಬಂದಿದೆ’ ಎಂದರು. 

ಈ ಸಿಟಿಯ ಶೇ 15ರಷ್ಟು ಜಾಗದಲ್ಲಿ ಸಂಶೋಧನಾ ವಿ.ವಿ.ಗಳು, ಶೈಕ್ಷಣಿಕ ಸಂಸ್ಥೆಗಳು, ಶೇ 15ರಷ್ಟು ಪ್ರದೇಶದಲ್ಲಿ ಆರೋಗ್ಯಸೇವಾ ಉದ್ದಿಮೆಗಳು, ಶೇ 20ರಷ್ಟು ಜಾಗದಲ್ಲಿ ನಾನಾ ಉದ್ಯಮಗಳ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಮತ್ತು ಕಾರ್ಪೊರೇಟ್ ಕಚೇರಿಗಳು ಮತ್ತು ಶೇ 10ರಷ್ಟು ಜಾಗದಲ್ಲಿ ನವೋದ್ಯಮಗಳು, ಶೇ 20ರಷ್ಟು ಜಾಗದಲ್ಲಿ ವಸತಿ ಸಮುಚ್ಚಯಗಳು, ಶೇ 15ರಷ್ಟು ಪ್ರದೇಶದಲ್ಲಿ ವಾಣಿಜ್ಯ ಮಳಿಗೆಗಳು ಮತ್ತು ಶೇ 5ರಷ್ಟು ಜಾಗದಲ್ಲಿ ಸರ್ಕಾರಿ ಕಚೇರಿಗಳು ಹಾಗೂ ನಾಗರಿಕ ಸೇವಾಕೇಂದ್ರಗಳು ತಲೆ ಎತ್ತಲಿವೆ ಎಂದರು.

ಬೋಸ್ಟನ್‌ ಕನ್ಸಲ್ಟೆನ್ಸಿ ಗ್ರೂಪ್‌ನ ಹಿರಿಯ ಸಲಹೆಗಾರ ರಾಂಚ್ ಕಿಮ್ಬಾಲ್, ಮೂಲಸೌಕರ್ಯ ವಿಭಾಗದ ಮುಖ್ಯಸ್ಥ ಸುರೇಶ್ ಸುಬುಧಿ ಮತ್ತು ಅಭಿವೃದ್ಧಿ ತಜ್ಞ ಅದಿಲ್ ಇಕ್ರಂ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.