ADVERTISEMENT

ಅಪಹರಣ: ಷರತ್ತು ಸಡಿಲಿಕೆಗೆ ಭವಾನಿ ರೇವಣ್ಣ ಮನವಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 20:15 IST
Last Updated 3 ಮಾರ್ಚ್ 2025, 20:15 IST
<div class="paragraphs"><p>ಭವಾನಿ ರೇವಣ್ಣ</p></div>

ಭವಾನಿ ರೇವಣ್ಣ

   

ಬೆಂಗಳೂರು: ಮಾಜಿ ಸಂಸದ ‍‍ಪ್ರಜ್ವಲ್‌ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ; ಸಂತ್ರಸ್ತೆಯೊಬ್ಬರ ಅಪಹರಣದ ಆರೋಪಿಯಾಗಿರುವ ಪ್ರಜ್ವಲ್‌ ತಾಯಿ ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಷರತ್ತು ಸಡಿಲಿಕೆ ಕುರಿತಾದ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಿ’ ಎಂದು ಹೈಕೋರ್ಟ್‌, ರಾಜ್ಯ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿದೆ.

ಈ ಸಂಬಂಧ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ಪೀಠದ ನ್ಯಾಯಮೂರ್ತಿ ಪ್ರದೀಪ್ ಸಿಂಗ್‌ ಯೆರೂರು ಸೋಮವಾರ ವಿಚಾರಣೆ ನಡೆಸಿದರು.

ADVERTISEMENT

ವಿಚಾರಣೆ ವೇಳೆ ಭವಾನಿ ಪರ ಪದಾಂಕಿತ ಹಿರಿಯ ವಕೀಲ ಸಂದೇಶ್ ಜೆ.ಚೌಟ, ‘ನಿರೀಕ್ಷಣಾ ಜಾಮೀನು ಮಂಜೂರು ಮಾಡುವಾಗ ನ್ಯಾಯಪೀಠ ವಿಧಿಸಿರುವ ಷರತ್ತಿನಿಂದಾಗಿ ಭವಾನಿ ಅವರು ಮಂಡ್ಯ ಮತ್ತು ಮೈಸೂರಿಗೆ ಪ್ರಯಾಣಿಸಲು ಆಗುತ್ತಿಲ್ಲ. ಹೀಗಾಗಿ, ಅವರು ಕೆಲವೊಂದು ತೊಂದರೆ ಎದುರಿಸುತ್ತಿದ್ದು ತ್ವರಿತಗತಿಯಲ್ಲಿ ಅರ್ಜಿ ವಿಚಾರಣೆ ನಡೆಸಬೇಕು’ ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿ ವಿಚಾರಣೆಯನ್ನು ಇದೇ 10ಕ್ಕೆ ಮುಂದೂಡಿತು. ಭವಾನಿ ಅವರಿಗೆ ಹೈಕೋರ್ಟ್‌, 2024ರ ಜೂನ್‌ 7ರಂದು ಆರು ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.