ADVERTISEMENT

ರಾಜ್ಯದಲ್ಲಿ ವಾರ್ಷಿಕ 9,800ಕ್ಕೂ ಹೆಚ್ಚು ಸ್ತನ ಕ್ಯಾನ್ಸರ್‌ನ ಹೊಸ ಪ್ರಕರಣ ಪತ್ತೆ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ವರದಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 13:06 IST
Last Updated 8 ಅಕ್ಟೋಬರ್ 2021, 13:06 IST
ಡಾ.ಸಿ.ರಾಮಚಂದ್ರ
ಡಾ.ಸಿ.ರಾಮಚಂದ್ರ   

ಬೆಂಗಳೂರು: ‘ರಾಜ್ಯದಲ್ಲಿ ವಾರ್ಷಿಕ 9,800ಕ್ಕೂ ಹೆಚ್ಚು ಸ್ತನ ಕ್ಯಾನ್ಸರ್‌ನ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಸುಮಾರು 26ರಿಂದ 30 ಸಾವಿರ ಸಕ್ರಿಯ ಪ್ರಕರಣಗಳು ಇವೆ. ಸ್ತನ ಕ್ಯಾನ್ಸರ್‌ ರೋಗಿಗಳ ಸರಾಸರಿ ವಯಸ್ಸು 50–70 ರಿಂದ 30–50 ವರ್ಷಗಳಿಗೆ ಬದಲಾಗಿದೆ. ಯುವತಿಯರಲ್ಲಿ ಈ ಕಾಯಿಲೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಹಿಂದಿನ ವರ್ಷಗಳಲ್ಲಿ ಅತಿ ಹೆಚ್ಚು ಸ್ತನ ಕ್ಯಾನ್ಸರ್‌ ಪ್ರಕರಣಗಳು ವರದಿಯಾಗಿರುವ ನಗರಗಳ ಪೈಕಿ ಬೆಂಗಳೂರು, ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿತ್ತು. ನಗರದಲ್ಲಿ ಪ್ರತಿ ವರ್ಷ ಸುಮಾರು 1,688 ಹೊಸ ಪ್ರಕರಣಗಳು ದಾಖಲಾಗುತ್ತಿವೆ. 4,588ಸಕ್ರಿಯ ಪ್ರಕರಣಗಳಿವೆ. 1982ರಲ್ಲಿ ಪ್ರತಿ 1 ಲಕ್ಷ ಮಂದಿ ಪೈಕಿ 15 ಜನರಲ್ಲಿ ಸ್ತನ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿತ್ತು. ಅದು 40.5ಕ್ಕೆ ಏರಿಕೆಯಾಗಿದೆ. ಇದು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳ ಪೈಕಿ ಸ್ತನ ಕ್ಯಾನ್ಸರ್‌ ಪ್ರಮಾಣ ಶೇ 28ರಷ್ಟಿದೆ’ ಎಂದು ಹೇಳಲಾಗಿದೆ.

‘ಕಿದ್ವಾಯಿ ಸಂಸ್ಥೆಯಲ್ಲಿ ಪ್ರತಿ ವರ್ಷ ಸುಮಾರು800 ಸ್ತನ ಕ್ಯಾನ್ಸರ್‌ ಪ್ರಕರಣಗಳು ದಾಖಲಾಗುತ್ತಿವೆ. ಮಹಿಳೆಯರಲ್ಲಿ ಪತ್ತೆಯಾಗುವ ಕ್ಯಾನ್ಸರ್‌ಗಳ ಪೈಕಿ ಸ್ತನ ಕ್ಯಾನ್ಸರ್‌ ಪ್ರಮಾಣ ಶೇ 17ರಷ್ಟಿದೆ. ಈ ಕ್ಯಾನ್ಸರ್‌ ಅನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿದರೆ ಗುಣ‍ಪಡಿಸುವ ಅವಕಾಶ ಶೇ 90ರಷ್ಟಿರುತ್ತದೆ. ಆದರೆ, ಶೇ 50ಕ್ಕೂ ಹೆಚ್ಚು ರೋಗಿಗಳಲ್ಲಿ ಇದು 3 ಅಥವಾ 4ನೇ ಹಂತಕ್ಕೆ ತಲುಪಿರುತ್ತದೆ. ಅಮೆರಿಕ (ಶೇ 89) ಮತ್ತು ಇಂಗ್ಲೆಂಡ್‌ಗೆ (ಶೇ 82) ಹೋಲಿಸಿದರೆ ಭಾರತದಲ್ಲಿ ಸ್ತನ ಕ್ಯಾನ್ಸರ್‌ ಪೀಡಿತರ ಬದುಕುಳಿಯುವಿಕೆ ಪ್ರಮಾಣ (ಶೇ 65) ಕಡಿಮೆ ಇದೆ. ಇತ್ತೀಚಿನ ವರ್ಷಗಳಲ್ಲಿ ಇದು ಸಾಕಷ್ಟು ಸುಧಾರಿಸಿದೆ’ ಎಂದೂ ವಿವರಿಸಲಾಗಿದೆ.

ADVERTISEMENT

‘ಬಹುತೇಕ ಮಂದಿಯಲ್ಲಿ ಈ ರೋಗವು ತಡವಾಗಿ ಪತ್ತೆಯಾಗುತ್ತದೆ. ಅಂತಹವರ ಜೀವ ಉಳಿಸುವುದು ತುಂಬಾ ಕಷ್ಟ. ಚಿಕ್ಕ ವಯಸ್ಸಿನಲ್ಲಿ ಋತುಚಕ್ರದ ಆರಂಭ ಹಾಗೂ ಅದರ ಅಸಮರ್ಪಕತೆ, ಸಂತಾನೋತ್ಪತ್ತಿ, ಗರ್ಭನಿರೋಧಕಗಳ ಬಳಕೆ, ಹಾರ್ಮೊನ್‌ ಬದಲಿ ಚಿಕಿತ್ಸೆ, ಮದ್ಯಪಾನ, ಬೊಜ್ಜು, ಪ್ರೌಢಾವಸ್ಥೆಯಲ್ಲಿ ತೂಕ ಹೆಚ್ಚಳ ಹೀಗೆ ಹಲವು ಅಂಶಗಳು ಸ್ತನ ಕ್ಯಾನ್ಸರ್‌ಗೆ ದಾರಿ ಮಾಡಿಕೊಡುತ್ತವೆ. ಸ್ತನ ಕ್ಯಾನ್ಸರ್‌ನ ಆರಂಭಿಕ ತಪಾಸಣೆ ಬಗ್ಗೆ ಅರಿವು ಮೂಡಿಸದೇ ಇರುವುದೂ ಈ ರೋಗ ಉಲ್ಬಣಕ್ಕೆ ಕಾರಣ’ ಎಂದೂ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.