ಬೆಂಗಳೂರು: ‘ಜಾತಿ ವಿನಾಶವಾಗುವುದು ಬಿಜೆಪಿಯವರಿಗೆ ಬೇಡವಾಗಿದೆ. ಅದಕ್ಕೆ ಸಂವಿಧಾನದ ಪೀಠಿಕೆಯಿಂದ ಜಾತ್ಯತೀತ ಪದ ತೆಗೆದುಹಾಕಲು ಅವರು ಹೊರಟಿದ್ದಾರೆ’ ಎಂದು ಮಾಜಿ ಸಚಿವ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ ದೂರಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಶ್ರೇಣಿಕೃತ ವ್ಯವಸ್ಥೆ ಉಳಿಸಿ ಸಮಾನತೆ ಅಳಿಸಿಹಾಕಬೇಕು ಎನ್ನುವುದು ಬಿಜೆಪಿಯವರ ಉದ್ದೇಶ’ ಎಂದರು.
‘ಮೀಸಲಾತಿ ಬಳಸಿಕೊಂಡು ಜನಪ್ರತಿನಿಧಿಗಳಾಗಿರುವ ಬಿಜೆಪಿಯವರು, ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಅದರ ವಿರುದ್ಧ ಹೋರಾಟ ಮಾಡಲಿ’ ಎಂದು ಸವಾಲು ಹಾಕಿದರು.
‘ಒಕ್ಕೂಟ ವ್ಯವಸ್ಥೆ ಬೇಡವೆಂದು ಬಿಜೆಪಿಯವರು ಹೇಳುತ್ತಾರೆ. ರಾಜ್ಯ ಸರ್ಕಾರಗಳನ್ನೇ ತೆಗೆದುಹಾಕಬೇಕು ಎನ್ನುವುದು ಅವರ ಹುನ್ನಾರ. ನಾವು ಈ ಹುನ್ನಾರದ ವಿರುದ್ಧ ಇದ್ದೇವೆ. ಸಂವಿಧಾನ ಹಾಗೂ ಕಾಂಗ್ರೆಸ್ ಪಕ್ಷ ಒಕ್ಕೂಟ ವ್ಯವಸ್ಥೆಯ ಪರವಾಗಿದೆ’ ಎಂದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮಾತನಾಡಿ, ‘ಬಿಜೆಪಿಯವರಲ್ಲಿ ಇದ್ದಕ್ಕಿದ್ದಂತೆ ದಲಿತರ ಮೇಲೆ, ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಕರ್ನಾಟಕದಲ್ಲಿ ಒಬಿಸಿ ಸಮುದಾಯಕ್ಕೆ ಸೇರಿದ ಈಶ್ವರಪ್ಪ ಅವರನ್ನು ಬಿಟ್ಟರೆ ಇಲ್ಲಿಯವರೆಗೆ ದಲಿತರು, ಅಲ್ಪಸಂಖ್ಯಾತರು ಹೀಗೆ ಯಾರನ್ನೂ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿಲ್ಲ’ ಎಂದರು.
‘2019ರ ಲೋಕಸಭೆ ಚುನಾವಣೆ ವೇಳೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿಯವರು ರಾಜಕೀಯ ಷಡ್ಯಂತ್ರ ಮಾಡಿ ಮುಗಿಸಿದರು ಎನ್ನುವುದನ್ನು ಮರೆಯಬಾರದು’ ಎಂದ ಅವರು, ‘ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ದಲಿತರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿಯವರು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಅಧ್ಯಕ್ಷ ಸ್ಥಾನ ನೀಡಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.