ADVERTISEMENT

King Cobra Study: ದೈತ್ಯ ಕಾಳಿಂಗನಿಗೆ ಅಕ್ಕಿ ಗಾತ್ರದ ಚಿಪ್‌ !

ಪರಿಸರ ಆಸಕ್ತರ ಆಕ್ರೋಶಕ್ಕೆ ಗುರಿಯಾದ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 1:44 IST
Last Updated 5 ಅಕ್ಟೋಬರ್ 2025, 1:44 IST
ಸಾಂಧರ್ಬಿಕ ಚಿತ್ರ
ಸಾಂಧರ್ಬಿಕ ಚಿತ್ರ   

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಆಗುಂಬೆ ಸುತ್ತಮುತ್ತಲಿನ ಪರಿಸರದಲ್ಲಿ ಕಾಳಿಂಗ ಸರ್ಪಗಳಿಗೆ ಬಾಸ್ಮತಿ ಅಕ್ಕಿ ಕಾಳಿನ ಗಾತ್ರದ ಪುಟಾಣಿ ಚಿಪ್‌ ಅಳವಡಿಸಿ ಅಧ್ಯಯನ ನಡೆಸಲಾಗುತ್ತಿದ್ದು, ಇದು ಪರಿಸರಾಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಪಿಟ್‌ ಟ್ಯಾಗ್‌ (ಪ್ಯಾಸಿವ್‌ ಇಂಟಿಗ್ರೇಟೆಡ್‌ ಟ್ರಾನ್ಸ್‌ಪಾಂಡರ್) ಎಂದೇ ಕರೆಯಲಾಗುವ ಮೈಕ್ರೊ ಚಿಪ್‌ ಅನ್ನು ಸುಮಾರು 180ಕ್ಕೂ ಹೆಚ್ಚು ಕಾಳಿಂಗ ಸರ್ಪಗಳ ದೇಹದೊಳಗೆ ಹುದುಗಿಸಿ, ಕಾಡುಗಳಿಗೆ ಬಿಟ್ಟು ಅವುಗಳ ಅಧ್ಯಯನ ನಡೆಸಲಾಗಿದೆ. ಆಧಾರ್ ಕಾರ್ಡ್‌ ಮಾದರಿಯಲ್ಲೇ ಪ್ರತಿಯೊಂದು ಸರ್ಪದ ಚಿಪ್‌ 15 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿದೆ. ಸ್ಕ್ಯಾನರ್‌ ಹಿಡಿದು ಹಾವುಗಳನ್ನು ಸ್ಕ್ಯಾನ್ ಮಾಡಿದಾಗ ಆ ಹಾವಿನ ಸಂಪೂರ್ಣ ಮಾಹಿತಿ ಸಿಕ್ಕಿಬಿಡುತ್ತದೆ.

ಹಾವುಗಳ ಕುರಿತಾಗಿಯೇ ಇರುವ ‘Hamadryad’ ಜರ್ನಲ್‌ನಲ್ಲಿ ಕಾಳಿಂಗ ಫೌಂಡೇಷನ್‌ನ ಪಿ.ಗೌರಿಶಂಕರ್‌, ಎಸ್‌.ಆರ್‌.ಗಣೇಶ್‌ ಮತ್ತು ಇತರರು ಸೇರಿ ಪ್ರಕಟಿಸಿರುವ ಅಧ್ಯಯನ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಈ ಅಧ್ಯಯನ 2008 ರಿಂದ 2021 ರ ಅವಧಿಯಲ್ಲಿ ನಡೆದಿದ್ದು, ಈಗಲೂ ಕಾಳಿಂಗಗಳ ದೇಹಗಳಲ್ಲಿ ಚಿಪ್‌ಗಳು ಹುದುಗಿವೆ, ಅಧ್ಯಯನ ಮುಂದುವರೆದಿದೆ ಎಂದು ಹೇಳಲಾಗಿದೆ. 

ADVERTISEMENT

ಆಗುಂಬೆ ರೈನ್‌ಫಾರೆಸ್ಟ್‌ ರೀಸರ್ಚ್‌ ಸ್ಟೇಷನ್‌ (ಎಆರ್‌ಆರ್‌ಎಸ್) ಸಿಬ್ಬಂದಿ ಈ ಪುಟಾಣಿ ಚಿಪ್‌ಗಳನ್ನು ಅವುಗಳ ಚರ್ಮ ಮತ್ತು ಮಾಂಸಖಂಡಗಳ ಮಧ್ಯೆ ಸಿರಿಂಜ್ ಮೂಲಕ ಚುಚ್ಚಿ ಹುದುಗಿಸಿಟ್ಟಿದ್ದಾರೆ. ಸ್ಕ್ಯಾನರ್‌ ಮೂಲಕ ಹಾವುಗಳನ್ನು ಸ್ಕ್ಯಾನ್ ಮಾಡಿದಾಗ ಅವುಗಳ ವಿಶಿಷ್ಟ ಗುರುತಿನ ಸಂಖ್ಯೆ ಕಾಣಸಿಕೊಳ್ಳುತ್ತದೆ. ಆ ಮೂಲಕ ನಿರ್ದಿಷ್ಟವಾಗಿ ಹಾವು ಯಾವುದು, ಅದರ ವೈಶಿಷ್ಟ್ಯ, ಲಕ್ಷಣಗಳು ಏನು ಎಂಬುದು ಅಧ್ಯಯನಕಾರರಿಗೆ ಗೊತ್ತಾಗುತ್ತದೆ. ಅತ್ಯಂತ ನಿಗೂಢ ಜೀವಿಯ ಜೀವನವನ್ನು ಅರಿತುಕೊಳ್ಳಲು ಇದು ಹೊಸವಿಧಾನ ಎಂದು ಅಧ್ಯಯನದಲ್ಲಿ ಹೇಳಿಕೊಳ್ಳಲಾಗಿದೆ.

ಅಲ್ಲದೇ, ಸರ್ಪಗಳ ಸಂಚಾರ ಮತ್ತು ಅವುಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಟ್ರಾನ್ಸ್‌ಮಿಟರ್‌ಗಳನ್ನು ಅಳವಡಿಸಿ ಕಾಡಿಗೆ ಬಿಡಲಾಗುತ್ತಿತ್ತು. ಮೂವರು ತಜ್ಞರು ಮೂರು ವರ್ಷಗಳ ಕಾಲ ನಿರಂತವಾಗಿ ಹಾವಿನ ಜಾಡನ್ನು ಹಿಡಿದು ಅವುಗಳ ವಾಸಸ್ಥಳ, ಆಹಾರ ಸೇವನೆ, ಮಿಲನ ಮತ್ತು ಇತರ ವರ್ತನೆಗಳ ಮಾಹಿತಿ ದಾಖಲಿಸಲಾಗಿದೆ. ಎರಡು ಹಂತಗಳಲ್ಲಿ(2008–2011 ಮತ್ತು 2018–2021) ಐದು ಗಂಡು ಮತ್ತು ಎರಡು ಹೆಣ್ಣು ಹಾವುಗಳ ಮೇಲೆ ನಿಗಾ ಇಡಲಾಗಿತ್ತು ಎಂದು ಅಧ್ಯಯನ ವರದಿ ಹೇಳಿದೆ.

ಹೆಣ್ಣನ್ನು ಒಲಿಸಿಕೊಳ್ಳಲು ತನ್ನ ಆವಾಸ ಸ್ಥಾನವನ್ನು ಬಿಟ್ಟು 10 ಕಿ.ಮೀಗೂ ಹೆಚ್ಚು ದೂರ ಕ್ರಮಿಸಿ ಗಂಡು ಕಾಳಿಂಗ ಬರುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಸ್ಕ್ಯಾನರ್‌ ಬಳಸಿ ಗಂಡು ಹಾವಿನ ಚಿಪ್ ಮಾಡಿದಾಗ ಈ ಅಂಶ ಬಯಲಾಗಿದೆ. ಹೆಣ್ಣನ್ನು ಒಲಿಸಿಕೊಳ್ಳಲು ಗಂಡು ಕಾಳಿಂಗಗಳ ಮಧ್ಯೆ ತಿಕ್ಕಾಟವೇ ನಡೆಯುತ್ತದೆ ಎಂದು ಅಧ್ಯಯನ ಉಲ್ಲೇಖಿಸಿದೆ.

‘ಕಾಳಿಂಗ–ಮಾನವ ಸಂಘರ್ಷ’

ಸುಳ್ಳು ಸಂಕಥನ ‘ಕಾಳಿಂಗ ಸರ್ಪಗಳ ಅಧ್ಯಯನದ ಹೆಸರಿನಲ್ಲಿ ಸರ್ಪಗಳ ಶೋಷಣೆ ನಡೆಯುತ್ತಿದೆ. ಇದರ ಅಧ್ಯಯನಕ್ಕೆ ಅನುಮತಿ ಮತ್ತು ದೇಶ–ವಿದೇಶಗಳಿಂದ ಅನುದಾನ ಪಡೆಯಲು ಕಾಳಿಂಗ– ಮಾನವ ಸಂಘರ್ಷದ ಸುಳ್ಳು ಸಂಕಥನವನ್ನು ಸೃಷ್ಟಿಸಲಾಗಿದೆ’ ಎಂದು ಪರಿಸರ ಕಾರ್ಯಕರ್ತ ನಾಗರಾಜ ಕೂವೆ ದೂರಿದ್ದಾರೆ. ‘ಮಲೆನಾಡಿನ ಜನ ಕಾಳಿಂಗಗಳನ್ನು ಕೊಲ್ಲುತ್ತಾರೆ. ಕಾಳಿಂಗದ ಗೂಡಿಗೆ ಬೆಂಕಿ ಹಾಕುತ್ತಾರೆ ಮೊಟ್ಟೆಗಳನ್ನು ನಾಶ ಮಾಡುತ್ತಾರೆ. ಇಲ್ಲಿ ಮಾನವ–ಕಾಳಿಂಗ ಸರ್ಪ ಸಂಘರ್ಷವಿದೆ ಕಾಳಿಂಗನ ಸಂತತಿ ಕುಸಿದಿದೆ ಇದರಿಂದ ವಿಶೇಷ ಮುತುವರ್ಜಿ ವಹಿಸಿ ಕಾಳಿಂಗ ಸರ್ಪ ಸಂರಕ್ಷಣೆ ಮಾಡಬೇಕಿದೆ. ನಾವು ಜನರಲ್ಲಿ ಆ ಬಗೆಗೆ ಜಾಗೃತಿ ಮೂಡಿಸುತ್ತಿದ್ದೇವೆ. ಹಾಗಾಗಿ ಈಗ ಪರಿಸ್ಥಿತಿ ಬದಲಾಗುತ್ತಿದೆ ಎಂದು ಬಿಂಬಿಸುತ್ತಿದ್ದಾರೆ. ವಾಸ್ತವದಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸರ್ಪಗಳ ಬಗ್ಗೆ ಒಂದು ಬಗೆಯ ವಿಶಿಷ್ಟ ಭಾವನೆ ಭಕ್ತಿ ಇದೆ. ಜನ ಸರ್ಪಗಳನ್ನು ಕೊಲ್ಲುವುದಿಲ್ಲ ಮತ್ತು ಯಾವುದೇ ತೊಂದರೆ ಮಾಡುವುದಿಲ್ಲ’ ಎಂದು ಅವರು ಹೇಳಿದ್ದಾರೆ. ‘ಮಾನವ– ಕಾಳಿಂಗ ಸಂಘರ್ಷದ ಮ್ಯಾಪಿಂಗ್ ಮತ್ತು ಉಪಶಮನದ ಹೆಸರಿನಲ್ಲಿ ಮಲೆನಾಡಿನ ಎಲ್ಲ ಜಿಲ್ಲೆಗಳಿಗೆ ತಮ್ಮ ಕಾರ್ಯಚಟುವಟಿಕೆ ವಿಸ್ತರಿಸಲು ಮುಂದಾಗಿದ್ದಾರೆ. ಆ ಮೂಲಕ ಕಾಳಿಂಗಗಳ ಗಣತಿ ನಡೆಸುವ ಉದ್ದೇಶವನ್ನೂ ಹೊಂದಿದ್ದಾರೆ. ನಿರುಪದ್ರವಿ ಸರ್ಪಗಳನ್ನು ಅವುಗಳ ಪಾಡಿಗೆ ಇರಲು ಬಿಡಬೇಕು. ಮಲೆನಾಡಿನ ಜನರಿಂದ ಅವುಗಳಿಗೆ ಯಾವುದೇ ಅಪಾಯವಿಲ್ಲ. ಆದರೆ ಅಧ್ಯಯನ ಚಟುವಟಿಕೆ ಮತ್ತು ಅದರ ಹೆಸರಲ್ಲಿ ಹಣ ಮಾಡುವುದಕ್ಕೆ ಮುಂದಾಗಿರುವ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದ್ದಾರೆ. ಕಾಳಿಂಗಗಳ ದೇಹದೊಳಗೆ ಚಿಪ್‌ ಹುದುಗಿಸಿ ಹಿಂಸೆ ಕೊಟ್ಟು ಅವುಗಳ ಅಧ್ಯಯನದ ಹೆಸರಿನಲ್ಲಿ ಅವುಗಳ ಜೀವನ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದು ಅಕ್ಷಮ್ಯ. ಇದನ್ನು ತಡೆಯಲು ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಾಜ ಕೂವೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.