ADVERTISEMENT

'ಕಾಳಿಂಗ ಮನೆ"ಯಿಂದ ಸರ್ಪಗಳ ಶೋಷಣೆ: ಅರಣ್ಯ ಸಚಿವರಿಗೆ KRS ಪಕ್ಷ ದೂರು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 10:52 IST
Last Updated 9 ಸೆಪ್ಟೆಂಬರ್ 2025, 10:52 IST
ಕಾಳಿಂಗ
ಕಾಳಿಂಗ   

ಬೆಂಗಳೂರು: ‘ಆಗುಂಬೆ ಸಮೀಪದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಾಳಿಂಗ ಸೆಂಟರ್‌ ಫಾರ್ ರೈನ್‌ ಫಾರೆಸ್ಟ್ ಇಕಾಲಜಿ ಸಂಸ್ಥೆ ಕಾಳಿಂಗ ಸರ್ಪದ ಸಂಶೋಧನೆ ಹೆಸರಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದಿದೆ.

ಅಕ್ರಮವಾಗಿ ಕಾಡು ಪ್ರವೇಶ, ಛಾಯಾಗ್ರಹಣ, ವಿಡಿಯೊ ಚಿತ್ರೀಕರಣ, ಕಾಳಿಂಗ ಸರ್ಪದ ಮೊಟ್ಟೆಗಳನ್ನು ಕೃತಕವಾಗಿ ಮರಿ ಮಾಡುವುದು, ನಿಯಮ ಬಾಹಿರವಾಗಿ ಹೆರ್ಪ್‌ ಟೂರ್‌, ನೈಟ್‌ ಟ್ರೈಲ್, ಟ್ರಕ್ಕಿಂಗ್‌ಗಳನ್ನು ನಡೆಸಲಾಗುತ್ತಿದೆ. ಸಂಸ್ಥೆಯ ಮುಖ್ಯಸ್ಥ ಸಂಶೋಧಕ ಗೌರಿಶಂಕರ್ ಅವರು ಕಾಳಿಂಗ ಸರ್ಪದ ಸಂಶೋಧನೆ ನೆಪದಲ್ಲಿ ಆರ್ಥಿಕ ಚಟುವಟಿಕೆ ನಡೆಸುತ್ತಿದ್ದಾರೆ. ಕಾಳಿಂಗ ಮನೆ, ಕಾಳಿಂಗ ಕೇರ್ ಹೆಸರಿನಲ್ಲೂ ಕಾಳಿಂಗ ಸರ್ಪಗಳ ಶೋಷಣೆ ನಡೆದಿದೆ ಎಂದು ರಾಜ್ಯ ಉಪಾಧ್ಯಕ್ಷ ಜ್ಞಾನ ಸಿಂಧೂಸ್ವಾಮಿ ಆರೋಪಿಸಿದ್ದಾರೆ.

ಕಾಳಿಂಗ ಸರ್ಪ ಸಂರಕ್ಷಣೆ ಬಗ್ಗೆ ತರಬೇತಿ ನೀಡುವುದಾಗಿ ‘ಕಿಂಗ್ ಕೋಬ್ರಾ ಬಯೊನಾಮಿಕ್ಸ್‌ ಅಂಡ್ ಕನ್ಸರ್ವೇಷನ್’ ಕಾರ್ಯಾಗಾರ ನಡೆಸಲಾಗುತ್ತಿದೆ. ಅಲ್ಲಿ ಪ್ರತಿ ವ್ಯಕ್ತಿಗೆ ಸುಮಾರು ₹16,069 ಶುಲ್ಕ ವಿಧಿಸಲಾಗುತ್ತಿದೆ. ಖಾಸಗಿ ವ್ಯಕ್ತಿಗಳು ಈ ರೀತಿಯ ಚಟುವಟಿಕೆ ನಡೆಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಇಂತಹ ಕಾರ್ಯಾಗಾರದಲ್ಲಿ ಕಾಳಿಂಗ ಸರ್ಪಗಳನ್ನು ಹಿಡಿಯುವುದು, ಸ್ಪರ್ಶಿಸುವುದು, ಗೂಡಿನಲ್ಲಿ ಮೊಟ್ಟೆಗಳನ್ನು ಮುಟ್ಟುವುದು, ಆ ಮೊಟ್ಟೆಗಳನ್ನು ಸ್ಥಳಾಂತರಿಸುವ ಕಾರ್ಯ ನಡೆದಿದೆ. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಇದು ಶಿಕ್ಷಾರ್ಹ ಅಪರಾಧ ಎಂದು ಹೇಳಿದ್ದಾರೆ.

ADVERTISEMENT
ಕಾಳಿಂಗ ಸರ್ಪದ ಮೊಟ್ಟೆಗಳು

ಗುಡ್ಡ ಕೊರೆದು ರಸ್ತೆ?

ಆಗುಂಬೆ ಸಮೀಪದ ಗುಡ್ಡೆಕೇರಿ ವ್ಯಾಪ್ತಿಯ ಚುರ್ಚಿ ಕಲ್ಲಿನಲ್ಲಿ ಗುಡ್ಡ ಕೊರೆದು ರಸ್ತೆ ನಿರ್ಮಿಸಲಾಗಿದೆ. ಇಲ್ಲಿ ಜೀಪ್‌ನಂತಹ ವಾಹನಗಳಲ್ಲಿ ಮಾತ್ರ ಹೋಗಬಹುದು. ಇದೇ ಪ್ರದೇಶದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಈ ಅನಧಿಕೃತ ರಸ್ತೆಯ ಮೂಲಕ ಹಣ ವಸೂಲಿ ಮಾಡಿ ಅರಣ್ಯಕ್ಕೆ ಅಕ್ರಮ ಪ್ರವೇಶ ನೀಡಲಾಗುತ್ತಿದೆ ಎಂದು ಜ್ಞಾನ ಸಿಂಧೂಸ್ವಾಮಿ ಅವರು ದೂರಿದ್ದಾರೆ. ಅಲ್ಲದೇ ದಾಸನಕೊಡಿಗೆ ವ್ಯಾಪ್ತಿಯ ‘ಅಕ್ಕಿ ಭತ್ತ ರಾಶಿ ಗುಡ್ಡ’ ಎಂಬ ಸ್ಥಳಕ್ಕೆ ಅನಧಿಕೃತವಾಗಿ ಟ್ರಕ್ಕಿಂಗ್‌ಗೆ ಕರೆದುಕೊಂಡು ಹೋಗಲಾಗುತ್ತಿದೆ. ಈ ಸಂರಕ್ಷಿತ ಪ್ರದೇಶಕ್ಕೆ ಯಾರಿಗೂ ಪ್ರವೇಶವಿಲ್ಲ. ಆದರೆ ರೆಸಾರ್ಟ್‌ ಗ್ರಾಹಕರಿಗೆ ಇದು ಮುಕ್ತವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.