ಈಶ್ವರ ಖಂಡ್ರೆ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯು (ಕೆಐಒಸಿಎಲ್) ನಿಬಂಧನೆಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸಿದರೆ, ಸಂಡೂರು, ದೇವದರಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ವಿಧಾನಸಭೆಯಲ್ಲಿ ಶುಕ್ರವಾರ ಬಿಜೆಪಿಯ ಡಾ.ಭರತ್ ಶೆಟ್ಟಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿ ಈ ಭರವಸೆ ನೀಡಿದರು.
2022ರ ಡಿಸೆಂಬರ್ 16ರಂದು ಸಲ್ಲಿಕೆಯಾಗಿರುವ ಉನ್ನತಾಧಿಕಾರ ಸಮಿತಿಯ ಶಿಫಾರಸು ಮತ್ತು ಸೂಚನೆಗಳನ್ನು ಪಾಲನೆ ಮಾಡಬೇಕು ಎಂಬ ಷರತ್ತಿಗೆ ಒಳಪಟ್ಟು ದೇವದರಿಯಲ್ಲಿ ಗಣಿಗಾರಿಕೆ ನಡೆಸಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಕೆಐಒಸಿಎಲ್ ಈ ಹಿಂದೆ ರಾಜ್ಯದಲ್ಲಿ ಗಣಿಗಾರಿಕೆ ನಡೆಸುವಾಗ ಹಲವು ನಿಯಮಗಳನ್ನು ಉಲ್ಲಂಘನೆ ಮಾಡಿತ್ತು. ಆ ಸಂಬಂಧ ಕಂಪನಿಗೆ ನೋಟಿಸ್ ನೀಡಲಾಗಿತ್ತು. ಮುಖ್ಯವಾಗಿ ಲಕ್ಯಾ ಅಣೆಕಟ್ಟೆ ಎತ್ತರವನ್ನು ಹೆಚ್ಚಿಸಿ 340 ಹೆಕ್ಟೇರ್ ಅರಣ್ಯಕ್ಕೆ ಹಾನಿ ಮಾಡಿದ್ದಾರೆ ಎಂದು ಖಂಡ್ರೆ ಹೇಳಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ಕೊಳವೆ ಮಾರ್ಗ ಅಳವಡಿಸುವುದೂ ಸೇರಿ 465.73 ಹೆಕ್ಟೇರ್ ಪ್ರದೇಶವನ್ನು ಅನುಮತಿ ಇಲ್ಲದೇ ಅರಣ್ಯೇತರ ಉದ್ದೇಶಕ್ಕೆ ಬಳಕೆ ಮಾಡಿದ್ದಾರೆ. ಈ ಪರಿಸರ ಹಾನಿಗೆ ₹142 ಕೋಟಿ ಪಾವತಿಸಬೇಕಿದೆ. ಅಲ್ಲದೇ, ಎನ್‌ಪಿವಿ ಶುಲ್ಕ ₹628 ಕೋಟಿ ಹಾಗೂ ಬಡ್ಡಿ ಸೇರಿ ಒಟ್ಟಾರೆ ₹3,000 ಕೋಟಿಯನ್ನು ರಾಜ್ಯ ಸರ್ಕಾರಕ್ಕೆ ಕೊಡಬೇಕಾಗಿದೆ. ಈ ಎಲ್ಲ ನಿಬಂಧನೆ ಸಂಪೂರ್ಣವಾಗಿ ಪಾಲನೆ ಮಾಡಿದರೆ, ಅರಣ್ಯಭೂಮಿಯನ್ನು ಗಣಿಗಾರಿಕೆಗೆ ಹಸ್ತಾಂತರ ಮಾಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆಐಒಸಿಎಲ್ ಮತ್ತೆ ಆರಂಭಿಸುವುದರಿಂದ ಮಂಗಳೂರಿನಲ್ಲಿ ಒಂದು ಸಾವಿರ ಕಾರ್ಮಿಕರಿಗೆ ಜೀವದಾನ ಸಿಕ್ಕಿದಂತಾಗುತ್ತದೆ. ಈ ಕುರಿತು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಕಂಪನಿಯ ಪ್ರತಿನಿಧಿಗಳನ್ನು ಒಳಗೊಂಡ ಒಂದು ಸಭೆಯನ್ನು ಕರೆದು, ನ್ಯಾಯಾಲಯದಿಂದ ಹೊರಗೆ ವಿಷಯವನ್ನು ಇತ್ಯರ್ಥಗೊಳಿಸಬೇಕು ಎಂದು ಡಾ.ಭರತ್ ಶೆಟ್ಟಿ ಮನವಿ ಮಾಡಿದರು.
ಬಂಡೀಪುರ: ಬೇಲದಕುಪ್ಪೆ ದೇವಸ್ಥಾನಕ್ಕೆ ಭಕ್ತರಿಗೆ ಅನುಮತಿ
ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿರುವ ಬೇಲದಕುಪ್ಪೆ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಭಕ್ತರಿಗೆ ಪ್ರತಿ ದಿನ ಪ್ರವೇಶಕ್ಕೆ ಅನುಮತಿ ನೀಡಲು ಹುಲಿ ಸಂರಕ್ಷಿತ ಪ್ರದೇಶ ನಿಯಮಗಳಿಗೆ ಅನುಸಾರ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಕಾಂಗ್ರೆಸ್‌ನ ಚಿಕ್ಕಮಾದು ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಈ ಪ್ರದೇಶ ಅತ್ಯಂತ ಸೂಕ್ಷ್ಮವಾಗಿದೆ. ಎರಡು ವರ್ಷಗಳ ಹಿಂದೆ ಈ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ನೀಡಲಾಗಿದೆ. ಅಲ್ಲಿ ಜಾತ್ರೆ ವೇಳೆ ಲಕ್ಷಾಂತರ ಭಕ್ತರು ಬರುತ್ತಾರೆ. ಹುಲಿ ಸಂರಕ್ಷಿತ ಪ್ರದೇಶ ನಿಯಮಾವಳಿ ಪ್ರಕಾರ ಭಕ್ತರ ಭೇಟಿಗೆ ಅವಕಾಶ ನೀಡಲಾಗಿದೆ. ಖಾಸಗಿ ವಾಹನಗಳಿಗೆ ಅವಕಾಶ ನೀಡದೇ, ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಭಕ್ತರನ್ನು ಕರೆದೊಯ್ಯಲಾಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.